11ಕ್ಕೆ ಫಲಾನುಭವಿಗಳ ಸಮಾವೇಶ: ಅರ್ಹರಿಗೆ ಸೌಲಭ್ಯ ವಿತರಣೆ: ಶಾಸಕ ಕೆ.ಎಂ.ಉದಯ್

KannadaprabhaNewsNetwork | Published : Feb 6, 2024 1:30 AM

ಸಾರಾಂಶ

ಸಮಾವೇಶದಲ್ಲಿ ಆರೋಗ್ಯ ಇಲಾಖೆಯಿಂದ ಪ್ರಧಾನ ಮಂತ್ರಿಗಳ ಆಯುಷ್ಮಾನ್ ಭಾರತ್ ಕಾರ್ಡುಗಳನ್ನು ಸಹ ನೋಂದಣಿ ಕಾರ್ಯ ನಡೆಸಲಾಗುವುದು. ಸುಮಾರು ನೂರು ಮಂದಿ ಮಾಶಾಸನ ಫಲಾನುಭವಿಗಳಿಗೆ ಪ್ರಮಾಣ ಪತ್ರ, ಹಕ್ಕು ಪತ್ರಗಳು ಹಾಗೂ ಸಾಗುವಳಿ ಚೀಟಿಗಳನ್ನು ವಿಚರಿಸಲಾಗುವುದು. ವಿವಿಧ ಇಲಾಖೆಯ ಸ್ಟಾಲ್‌ಗಳನ್ನು ನಿರ್ಮಿಸಿ ರೈತರಿಗೆ ಸೌಲಭ್ಯಗಳ ಸಿಗುವ ಬಗ್ಗೆ ಮಾಹಿತಿ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರುಪಟ್ಟಣದಲ್ಲಿ ಫೆ.11ರಂದು ಆಯೋಜಿಸಿರುವ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದ ಸಿದ್ಧತೆಯನ್ನು ಶಾಸಕ ಕೆ.ಎಂ.ಉದಯ್ ಸೋಮವಾರ ಸ್ಥಳೀಯ ಅಧಿಕಾರಿಗಳೊಂದಿಗೆ ಪರಿಶೀಲನೆಗೆ ನಡೆಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆಯುವ ಸಮಾವೇಶದಲ್ಲಿ ಸುಮಾರು 10 ಸಾವಿರ ಮಂದಿ ಫಲಾನುಭವಿಗಳು ಭಾಗವಹಿಸುವ ಹಿನ್ನೆಲೆಯಲ್ಲಿ ಶಾಸಕರು ಕ್ರೀಡಾಂಗಣದಲ್ಲಿ ಶಾಮಿಯಾನ, ಆಸನ ಮತ್ತು ಊಟದ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸಮಾವೇಶ ಈ ಹಿಂದೆ ನಡೆದ ಪಕ್ಷದ ಪ್ರಜಾಧ್ವನಿ ಯಾತ್ರೆ ಮಾದರಿಯಲ್ಲಿಯೇ ನಡೆಯಲಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಮನವರಿಕೆ ಜೊತೆಗೆ ವಿವಿಧ ಇಲಾಖೆಗಳಿಂದ ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಣ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಉದಯ್ ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸಮಾವೇಶ ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಶಾಸಕರು, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ನಂತರ ಸಚಿವರು ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.

ಸಮಾವೇಶದಲ್ಲಿ ಆರೋಗ್ಯ ಇಲಾಖೆಯಿಂದ ಪ್ರಧಾನ ಮಂತ್ರಿಗಳ ಆಯುಷ್ಮಾನ್ ಭಾರತ್ ಕಾರ್ಡುಗಳನ್ನು ಸಹ ನೋಂದಣಿ ಕಾರ್ಯ ನಡೆಸಲಾಗುವುದು. ಸುಮಾರು ನೂರು ಮಂದಿ ಮಾಶಾಸನ ಫಲಾನುಭವಿಗಳಿಗೆ ಪ್ರಮಾಣ ಪತ್ರ, ಹಕ್ಕು ಪತ್ರಗಳು ಹಾಗೂ ಸಾಗುವಳಿ ಚೀಟಿಗಳನ್ನು ವಿಚರಿಸಲಾಗುವುದು ಎಂದರು.

ವಿವಿಧ ಇಲಾಖೆಯ ಸ್ಟಾಲ್‌ಗಳನ್ನು ನಿರ್ಮಿಸಿ ರೈತರಿಗೆ ಸೌಲಭ್ಯಗಳ ಸಿಗುವ ಬಗ್ಗೆ ಮಾಹಿತಿ ನೀಡಲಾಗುವುದು. ಸಮಾವೇಶಕ್ಕೆ ತಾಲೂಕಿನ ಪ್ರತಿ ಗ್ರಾಪಂನಿಂದ ಕನಿಷ್ಠ 150 ಫಲಾನುಭವಿಗಳನ್ನು ಸಾರಿಗೆ ಬಸ್ ಮೂಲಕ ಕರೆತರಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ವೇಳೆ ಗ್ರೇಟ್ 2 ತಹಸೀಲ್ದಾರ್ ಸೋಮಶೇಖರ್, ತಾಪಂ ಇಒ ಎಲ್.ಸಂದೀಪ್, ಟಿಎಚ್‍ಒ ರವೀಂದ್ರ ಬಿ.ಗೌಡ, ಬಿಇಒ ಬಿ.ಕಾಳಿರಯ್ಯ, ಕೃಷಿ ಅಧಿಕಾರಿ ಪರಮೇಶ, ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಪ್ರವೀಣ್, ತೋಟಗಾರಿಕೆ ಅಧಿಕಾರಿ ರೇಖಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಪುರಸಭೆ ಮುಖ್ಯಾಧಿಕಾರಿ ಕರಿಬಸವಯ್ಯ, ಮಾಜಿ ಸದಸ್ಯ ಡಾಬಾ ಮಹೇಶ್, ವಿಜಯ್ ಕುಮಾರ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Share this article