‘ನಮ್ಮ ಮನೆಯ ವಾಷಿಂಗ್‌ ಮಷಿನ್‌ಗೂ ನೀರಿಲ್ಲ’

KannadaprabhaNewsNetwork | Published : Feb 6, 2024 1:30 AM

ಸಾರಾಂಶ

ನಗರಸಭಾ ಪೌರಾಯುಕ್ತರಿಗೆ ಹಲವಾರು ಬಾರಿ ಮೊಬೈಲ್ ಮೂಲಕ ಕರೆ ಮಾಡಿದರೂ ಸಹ ಸ್ವೀಕರಿಸಲಿಲ್ಲ, ನಗರಸಭೆ ಪೌರಾಯುಕ್ತರು ಜನಪ್ರತಿನಿಧಿಗಳನ್ನೇ ಈ ರೀತಿ ನಿರ್ಲಕ್ಷಿಸಿದರೆ ಇನ್ನು ಇವರು ಕಚೇರಿಯಲ್ಲಿ ಬಡವರ ಕೆಲಸಗಳನ್ನು ಹೇಗೆ ಮಾಡುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರ

ನಾನು ವಾಸವಿರುವ ನಗರದ ಪಿ.ಸಿ.ಬಡಾವಣೆಯಲ್ಲಿ ಯರಗೋಳ್ ನೀರು ಬರುತ್ತಿಲ್ಲ, ಇನ್ನು ನಗರಸಭೆ ನೀರು ಬಂದು ಹಲವು ವರ್ಷಗಳೇ ಕಳೆದಿವೆ. ನಮಗೆ ಖಾಸಗಿ ಟ್ಯಾಂಕರ್‌ಗಳ ನೀರೇ ಗತಿಯಾಗಿದೆ, ನಮಗೆ ಈ ರೀತಿ ಆದರೆ ಇನ್ನು ಸಾಮಾನ್ಯ ಜನರ ಪಾಡೇನು ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ನಗರಸಭೆ ವಿರುದ್ದ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ನಗರಾಭಿವೃದ್ದಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ರ ಅಧ್ಯಕ್ಷತೆಯಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಈ ರೀತಿ ಅವಲತ್ತುಕೊಂಡ ಘಟನೆ ನಡೆಯಿತು.

ಉತ್ತರಿಸದೆ ಜಾರಿಗೊಂಡ ಪೌರಾಯುಕ್ತ

ನಗರಸಭಾ ಪೌರಾಯುಕ್ತರಿಗೆ ಹಲವಾರು ಬಾರಿ ಮೊಬೈಲ್ ಮೂಲಕ ಕರೆ ಮಾಡಿದರೂ ಸಹ ಸ್ವೀಕರಿಸಲಿಲ್ಲ, ನಗರಸಭೆ ಪೌರಾಯುಕ್ತರು ಜನಪ್ರತಿನಿಧಿಗಳನ್ನೇ ಈ ರೀತಿ ನಿರ್ಲಕ್ಷಿಸಿದರೆ ಇನ್ನು ಇವರು ಕಚೇರಿಯಲ್ಲಿ ಬಡವರ ಕೆಲಸಗಳನ್ನು ಹೇಗೆ ಮಾಡುತ್ತಿದ್ದಾರೆ ಎಂದು ಸಚಿವರನ್ನು ಪ್ರಶ್ನಿಸಿದರು. ಗೋವಿಂದರಾಜುರ ಪ್ರಶ್ನೆಗಳಿಂದ ವಿಚಲಿತರಾದ ಸಚಿವರು, ಅಲ್ಲಿಯೇ ಇದ್ದ ಆಯುಕ್ತರನ್ನು ಪ್ರಶ್ನಿಸಿದಾಗ ಸಮರ್ಪಕವಾದ ಉತ್ತರ ನೀಡದೆ ಜಾರಿಗೊಂಡರು.ಸಚಿವರು ಯರಗೋಳ್ ನೀರು ಕೋಲಾರದಲ್ಲಿ ಪೂರ್ಣವಾಗಿ ಅನುಷ್ಠನಗೊಳಿಸಿಲ್ಲ ಏಕೆಂದು ಪ್ರಶ್ನಿಸಿದಾಗ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರನ್ನು ಪ್ರಶ್ನಿಸಿದಾಗ ನಗರದಲ್ಲಿ ಶೇ.೬೦ರಷ್ಟು ಮಾತ್ರ ಪ್ರಗತಿಯಾಗಿದೆ, ಉಳಿದ ಶೇ.೪೦ ರಷ್ಟು ಕಾಮಗಾರಿಗಳು ಬಾಕಿ ಉಳಿದಿದೆ, ಯರಗೋಳ್ ಪೈಪ್ ಕಾಮಗಾರಿ ಆಗಿ ಹಲವಾರು ವರ್ಷಗಳಾಗಿದೆ ಹಾಗಾಗಿ ನಗರದಲ್ಲಿ ಹಲವಾರು ಕಡೆ ಲಿಕೇಜ್ ಆಗುತ್ತಿದೆ, ಅದನ್ನು ದುರಸ್ತಿ ಮಾಡಿ ನೀರು ಪೊರೈಕೆ ಮಾಡಲು ವಿಳಂಬವಾಗುತ್ತಿದೆ ಎಂದು ಹೇಳಿದರು.ನೀರು ಪೂರೈಸಲು 3 ತಿಂಗಳು ಬೇಕುಸಚಿವರು ನಗರಸಭೆ ಆಯುಕ್ತ ಶಿವನಂದರನ್ನು ಪಿ.ಸಿ.ಬಡಾವಣೆಗೆ ಇನ್ನು ಯರಗೋಳ್ ನೀರು ಇನ್ನು ಪೂರೈಕೆ ಮಾಡದಿರಲು ಕಾರಣವೇನು ಎಂದಾಗ ಹಂತ, ಹಂತವಾಗಿ ಕಾಮಗಾರಿಗಳು ಪ್ರಗತಿಯಲ್ಲಿದೆ, ಶೇ.೬೦ರಷ್ಟು ಮಾತ್ರ ಪ್ರಗತಿಯಾಗಿದೆ, ಆ ಭಾಗದಲ್ಲಿ ನೀರು ಪೂರೈಕೆ ಮಾಡಲು ೩ ತಿಂಗಳು ಕಾಲವಕಾಶ ಬೇಕಾಗಿದೆ ಎಂದು ಹೇಳಿದಾಗ ಸಚಿವರು ಇದಕ್ಕೆ ಒಪ್ಪದೆ ನಗರದಲ್ಲಿ ಯರಗೋಳ್ ನೀರು ಇನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಬೇಕು, ಬೇಸಿಗೆ ಸಮೀಪಿಸುತ್ತಿರುವುದರಿಂದ ನೀರಿನ ಸಮಸ್ಯೆ ಉಲ್ಲಣವಾಗದಂತೆ ಮುಂಜಾಗೃತ ಕ್ರಮವಾಗಿ ಬೋರ್‌ವೆಲ್‌ಗಳನ್ನು ಕೊರೆಸಿ ಎಂದು ಸೂಚಿಸಿದರು.

ಬೋರ್‌ವೆಲ್‌ ಕೊರೆಸಲು ಅನುಮತಿ ಇಲ್ಲ

ಆಗ ಜಿಲ್ಲಾಧಿಕಾರಿ ಹೊಸ ಬೋರ್‌ವೆಲ್ ಕೊರೆಸಲು ಸರ್ಕಾರದಲ್ಲಿ ಅನುಮತಿ ಇಲ್ಲ. ಹಾಗಾಗಿ ಕೆ.ಸಿ. ವ್ಯಾಲಿ ನೀರಿನಿಂದ ಅಂತರ್ಜಲ ಅಭಿವೃದ್ದಿಗೊಂಡಿರುವುದರಿಂದ ಬತ್ತಿ ಹೋಗಿರುವ ೪೯೩ ಬೋರ್‌ವೆಲ್‌ಗಳಲ್ಲಿ ರಿಚಾಜ್ ಮಾಡಬೇಕಾಗಿದೆ, ಗ್ರಾಮೀಣ ಭಾಗದಲ್ಲಿ ೨೦೨ ಬೋರ್‌ವೆಲ್‌ಗಳು ರಿಚಾರ್ಚ್ ಆಗಬೇಕಾಗಿದೆ ಹಾಗಾಗಿ ಹಂತ, ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಹಾಗೆನಿಲ್ಲ ತುರ್ತು ಸಂದರ್ಭಗಳಲ್ಲಿ ಬೋರ್‌ವೆಲ್ ಕೊರೆಸಬಹುದಾಗಿದೆ, ಅಗತ್ಯ ಇರುವ ಕಡೆ ಅನಿವಾರ್ಯ ಸಂದರ್ಭದಲ್ಲಿ ಕೊರೆಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಮಾಲೂರಿಗೂ ನೀರು ಪೂರೈಸುತ್ತಿಲ್ಲ

ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಮಾಲೂರು ಕ್ಷೇತ್ರದಲ್ಲಿ ಯರಗೋಳ್ ನೀರು ಪೊರೈಕೆ ಮಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದಾಗ ಸಂಬಂಧಪಟ್ಟ ಅಧಿಕಾರಿಯು ಯರಗೋಳ್ ನೀರು ಮಾಲೂರಿಗೆ ಸಂರ್ಪಕ ನೀಡಲು ೩೦ ಕಿ.ಮೀ ಪೈಪ್‌ಗಳ ಕಾಮಗಾರಿಯಲ್ಲಿ ೨೧ ಕಿ.ಮೀ ಮುಗಿದಿದ್ದು, ಉಳಿದ ೯ ಕಿ.ಮೀ ಕಾಮಗಾರಿ ಬಾಕಿ ಉಳಿದಿದೆ ಎಂದಾಗ ಸಚಿವರು ಮಾ.೧೫ ರೊಳಗೆ ಪೂರ್ಣಗೊಳಿಸಲು ತಿಳಿಸಿದರು.

ಶಾಸಕರಾದ ಕೊತ್ತೂರು ಮಂಜುನಾಥ್, ಸಮೃದ್ದಿ ಮಂಜುನಾಥ್, ಜಿ.ಕೆ.ವೆಂಕಟಶಿವಾರೆಡ್ಡಿ, ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್, ಜಿಪಂ ಸಿ.ಇ.ಓ. ಪದ್ಮಬಸವಂತಪ್ಪ, ಎಸ್‌ಪಿಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ಕೆ.ಜಿ.ಎಫ್ ಎಸ್.ಪಿ. ಶಾಂತಕುಮಾರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಇದ್ದರು.

Share this article