ರೋಣ: ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದು, ಈ ದಿಶೆಯಲ್ಲಿ ಫೆ. 29ರಂದು ರೋಣ, ಮಾ. 1ರಂದು ಮುಂಡರಗಿ ತಾಲೂಕಿನ ಡಂಬಳದಲ್ಲಿ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಅವರು ಬುಧವಾರ ಪಟ್ಟಣದ ಮಿನಿ ವಿಧಾನಸೌದ ಸಭಾಭವನದಲ್ಲಿ ಜರುಗಿದ ಸಮಾವೇಶ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಈಗಾಗಲೇ ಅನುಷ್ಠಾನಗೊಳಿಸಿರುವ 5 ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ ಎಲ್ಲ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವಲ್ಲಿ ಅಧಿಕಾರಿಗಳು ತ್ವರಿತ ಗತಿಯಲ್ಲಿ ಕ್ರಮಕೈಗೊಳ್ಳಬೇಕು. ಸಿದ್ದರಾಮಯ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಇದೊಂದು ಐತಿಹಾಸಿಕ ಸಾಧನೆಯಾಗಿದೆ. ರಾಜ್ಯದಲ್ಲಿ ಈಗಾಗಲೇ ಶೇ. 95ಕ್ಕೂ ಅಧಿಕ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯಾದ್ಯಂತ ಫಲಾನುಭವಿಗಳ ಸಮಾವೇಶ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ರೋಣ ಮತಕ್ಷೇತ್ರದ ತಾಲೂಕು ಹಾಗೂ ಹೋಬಳಿಗಳನ್ನು ಒಳಗೊಂಡು ಫಲಾನುಭವಿಗಳ ಸಮಾವೇಶ ಮಾಡಲು ನಿರ್ಧರಿಸಲಾಗಿದೆ ಎಂದರು.
ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಮುಂದಾಗಬೇಕಿದೆ. ಜನರಿಗೆ ಯೋಜನೆ ತಲುಪಿಸುವ ಮಹತ್ತರವಾದ ಕಾರ್ಯ ಈಗಾಗಲೇ ಮಾಡಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಗ್ಯಾರಂಟಿ ಯೋಜನೆಗಳಾದ ನಾರಿಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಗೃಹಜ್ಯೋತಿ ಯೋಜನೆ, ಯುವನಿಧಿ, ಅನ್ನಭಾಗ್ಯ ಯೋಜನೆಗಳನ್ನು ಶೇ. 95ಕ್ಕೂ ಅಧಿಕ ಫಲಾನುಭವಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ಕೆಲವು ತಾಂತ್ರಿಕ ದೋಷ, ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಸಮಸ್ಯೆ ಸೇರಿದಂತೆ ಹಲವು ತೊಂದರೆಗಳಿಂದ ಇನ್ನು ಕೆಲವರಿಗೆ ಯೋಜನೆ ತಲುಪಿಸುವಲ್ಲಿ ವಿಳಂಬವಾಗಿದ್ದು, ಅಂತಹ ಅರ್ಹ ಫಲಾನುಭವಿಗಳ ಮಾಹಿತಿ ಸಂಗ್ರಹಿಸಿ ಸಮಸ್ಯೆಗಳನ್ನು ಬಗೆಹರಿಸಿ ಸರ್ಕಾರದ ಯೋಜನೆಗಳನ್ನು ಎಲ್ಲರಿಗೂ ತಲುಪಿಸುವಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.ಸಮಾವೇಶ ಯಶಸ್ವಿಗೊಳಿಸಿ: ರೋಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮುಂಡರಗಿ, ರೋಣ ಹಾಗೂ ಗಜೇಂದ್ರಗಡ ತಾಲೂಕುಗಳಲ್ಲಿ ಫಲಾನುಭವಿಗಳ ಸಮಾವೇಶ ಮಾಡಲು ತೀರ್ಮಾನ ಮಾಡಲಾಗಿದ್ದು, ರೋಣದಲ್ಲಿ ಫೆ. 29ರಂದು ಹಾಗೂ ಮುಂಡರಗಿ ತಾಲೂಕಿನ ಡಂಬಳದಲ್ಲಿ ಮಾ. 1ರಂದು ಸಮಾವೇಶ ನಡೆಸಲಾಗುವುದು. ಸಮಾವೇಶದಲ್ಲಿ ಬರುವ ಜನರಿಗೆ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ಒದಗಿಸಲಾಗುವುದು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಾವೇಶ ಯಶಸ್ವಿಗೊಳಿಸುವಲ್ಲಿ ಮುಂದಾಗಬೇಕು ಎಂದರು.ಸಭೆಯಲ್ಲಿ ರೋಣ ತಹಸೀಲ್ದಾರ್ ಕೆ. ನಾಗರಾಜ, ಗಜೇಂದ್ರಗಡ ತಹಸೀಲ್ದಾರ್ ಡಿ. ಮೋಹನ, ರೋಣ ತಾಪಂ ಕಾರ್ಯ ನಿರ್ವಾಹಕಾಧಿಕಾರಿ ರವಿ ಎ.ಎನ್., ಜಿಪಂ ಎಇಇ ಜಗದೀಶ ಮಡಿವಾಳರ, ಸಿಡಿಪಿಒ ವಿರೂಪಾಕ್ಷಯ್ಯ ಹಿರೇಮಠ, ತೋಟಗಾರಿಕೆ ಸಹಾಯಕ ನಿರ್ದೇಶಕ ಗಿರೀಶ ಹೊಸೂರ, ಆಹಾರ ವಿಭಾಗ ಶಿರಸ್ತೇದಾರ ಸುವರ್ಣಾ ಜಮ್ಮನಕಟ್ಟಿ, ಅರಣ್ಯ ಇಲಾಖೆ ಅಧಿಕಾರಿ ರಾಮಣ್ಣ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರುಳಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ ಆಲೂರ ಪಾಲ್ಗೊಂಡಿದ್ದರು.