ಕನ್ನಡಪ್ರಭ ವಾರ್ತೆ ತ್ಯಾಗರ್ತಿ
ಸಾಗರ ತಾಲೂಕಿನ ತ್ಯಾಗರ್ತಿಯಲ್ಲಿ ಶುಕ್ರವಾರ ನಡೆದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 25-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಸಂಘದ ಏಳಿಗೆಗೆ ಸದಸ್ಯರು ನೀಡಿದ ಮಾಹಿತಿ ಸ್ವೀಕರಿಸಿ ಅವರೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇವೆ. ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಮಾರಾಟ ಮಾಡುತ್ತಿದ್ದು ಪ್ರತಿಯೊಬ್ಬ ರೈತರೂ ನಮ್ಮ ಸಂಸ್ಥೆಯಲ್ಲಿಯೇ ಖರೀದಿಸಿ ಸಹಕರಿಸಬೇಕೆಂದು ಮನವಿ ಮಾಡಿದ ಇವರು ಮುಂದಿನ ದಿನಗಳಲ್ಲಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ರೈತರ ಆರ್ಥಿಕ ಅಭಿವೃದ್ಧಿಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಗುರಿಯನ್ನು ಹೊಂದಲಾಗಿದ್ದು ಸಂಘವು ರೈತರ ಆರೋಗ್ಯ ದೃಷ್ಟಿಯಿಂದ ತುರ್ತು ಚಿಕಿತ್ಸಾ ವಾಹನ ಹಾಗೂ ದಿನಬಳಕೆಯ ದಿನಸಿ ಸಾಮಗ್ರಿಗಳ ಮಾರಾಟ ಮಳಿಗೆ ಪ್ರಾರಂಭಿಸಬೇಕೆಂಬ ಉದ್ದೇಶ ಹೊಂದಿದೆ ಎಂದು ಹೇಳಿದರು.
2960 ಸದಸ್ಯರಿಂದ 1,45,58,800 ರು. ಷೇರು ಬಂಡವಾಳವನ್ನು ಹೊಂದಿದ್ದು ಡಿಸಿಸಿ ಬ್ಯಾಂಕ್‍ನಿಂದ 5,66,83,000 ರು. ಕಿಸಾನ್ ಕ್ರೆಡಿಟ್ ಸಾಲ ಪಡೆಯಲಾಗಿದ್ದು ರೈತರಿಗೆ ಕೃಷಿ ಸಾಲ, ಮಧ್ಯಮಾವಧಿ ಸಾಲ, ಎಸ್‍ಎಒ ಸಾಲ, ನಗದುಪತ್ತಿನ ಸಾಲ, ಟ್ರ್ಯಾಕ್ಟರ್ ಸಾಲ ಹೀಗೆ ಹಲವು ಯೋಜನೆಯಡಿ 13ಕೋಟಿ ರು.ಗೂ ಹೆಚ್ಚಿನ ಸಾಲವನ್ನು ನೀಡಲಾಗಿದೆ. ಸದಸ್ಯರಿಂದ ಉಳಿತಾಯ ಖಾತೆ ಭಾಗ್ಯಲಕ್ಷ್ಮಿ, ಸೌಭಾಗ್ಯಲಕ್ಷ್ಮಿ, ಪಿಗ್ಮಿ, ಚಾಲ್ತಿ ಖಾತೆಗಳಿಂದ 7ಕೋಟಿ 48ಲಕ್ಷ ರು. ಠೇವಣಿ ಸಂಗ್ರಹಿಸಲಾಗಿದೆ. ಶೇ. 95ರಷ್ಟು ಸಾಲ ಮರುಪಾವತಿಯಾಗಿದ್ದು ಸಂಘವು 22ಲಕ್ಷ ರು. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಕಾರ್ಯದರ್ಶಿ ಜೈಕುಮಾರ್ ಸಭೆಗೆ ತಿಳಿಸಿದರು.154 ಸದಸ್ಯರು ಪ್ರಧಾನಮಂತ್ರಿ ಫಸಲು ಬೀಮಾ ಹಾಗೂ ಹವಮಾನಾಧರಿತ ಬೆಳೆವಿಮೆ ತೆಗೆದುಕೊಂಡಿದ್ದು 1348 ಸದಸ್ಯರು ಯಶಸ್ವಿನಿ ರೈತ ಆರೋಗ್ಯ ರಕ್ಷಣಾ ಯೋಜನೆಯಡಿ ನೋಂದಾವಣೆಯಾಗಿದ್ದಾರೆ. ಇನ್ನೂ ಹೆಚ್ಚಿನ ಸದಸ್ಯರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
--------------------
ತ್ಯಾಗರ್ತಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಅಧ್ಯಕ್ಷರಾದ ಅಮೃತ್‍ರಾಜ್ ಹೊಸಂತೆ ಉದ್ಘಾಟಿಸಿದರು.