ಬದುಕಿಗೆ ಭರವಸೆಯ ಔಷಧ ನಕಲಿಯಾಗದಿರಲಿ

KannadaprabhaNewsNetwork |  
Published : Sep 26, 2026, 01:15 AM IST
ಪೊಟೋ: 25ಎಸ್‌ಎಂಜಿಕೆಪಿ01ಶಿವಮೊಗ್ಗದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಫಾರ್ಮಸಿಸ್ಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎ. ಶ್ರೀನಾಥ್ ಅವರಿಗೆ ಜಿಲ್ಲಾ ಮಟ್ಟದ ‘ಉತ್ತಮ ಫಾರ್ಮಸಿಸ್ಟ್’ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

May the medicine of hope for life not be counterfeit.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರೋಗಿಯ ಬದುಕಿಗೆ ಭರವಸೆಯಾಗಬೇಕಾದ ಔಷಧವೇ ನಕಲಿಯ ರೂಪದಲ್ಲಿ ಆತನ ಜೀವಕ್ಕೆ ಅಪಾಯ ತಂದೊಡ್ಡುವುದು ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಗಂಭೀರ ವಿಚಾರ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಹಾಗೂ ಜಿಲ್ಲಾ ಔಷಧ ತಜ್ಞರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಫಾರ್ಮಸಿಸ್ಟ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಒಬ್ಬ ವ್ಯಕ್ತಿ ಅನಾರೋಗ್ಯದ ವಿರುದ್ಧ ಹೋರಾಡುತ್ತಾ, ಔಷಧದ ಮೇಲಿನ ನಂಬಿಕೆಯಿಂದ ತನ್ನ ಬದುಕನ್ನು ಮುನ್ನಡೆಸುತ್ತಿರುವ ಸಂದರ್ಭದಲ್ಲಿ, ಆತನ ಕೈಗೆ ನಕಲಿ ಔಷಧ ತಲುಪಿಸಿ ಜೀವವನ್ನೇ ಅಪಾಯಕ್ಕೆ ಸಿಲುಕಿಸುವಂತಹ ವ್ಯವಸ್ಥೆ ನಿರ್ಮಾಣವಾಗುವುದು ಅತ್ಯಂತ ವಿಷಾದನೀಯ ಎಂದರು.

ಔಷಧವೆಂದರೆ ಕೇವಲ ಒಂದು ವಸ್ತುವಲ್ಲ, ಅದು ರೋಗಿಯ ಬದುಕಿನ ಮೇಲಿರುವ ನಂಬಿಕೆಯ ಪ್ರತೀಕ. ಆ ನಂಬಿಕೆಗೆ ಧಕ್ಕೆ ಬಾರದಂತೆ ಔಷಧಗಳ ಗುಣಮಟ್ಟವನ್ನು ಕಾಪಾಡುವುದು ಪ್ರತಿಯೊಬ್ಬ ಫಾರ್ಮಸಿಸ್ಟ್‌ನ ವೃತ್ತಿಪರ ಕರ್ತವ್ಯದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ ಎಂದು ಹೇಳಿದರು.

ಔಷಧ ಕ್ಷೇತ್ರ ಇಂದು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗುಣಮಟ್ಟದ ಔಷಧಗಳ ಲಭ್ಯತೆ, ಅವುಗಳ ಸರಿಯಾದ ಸಂಗ್ರಹಣೆ, ವಿತರಣೆ ಹಾಗೂ ನಿಯಂತ್ರಣ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಲಪಡಿಸುವ ಅಗತ್ಯವಿದೆ. ಔಷಧ ನಿಯಂತ್ರಣ ಮತ್ತು ಮೇಲ್ವಿಚಾರಣಾ ಕ್ಷೇತ್ರದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರ ಜೊತೆಗೆ, ನಿರಂತರ ಮೇಲ್ವಿಚಾರಣೆ ನಡೆಯಬೇಕು ಎಂದರು.

ನಕಲಿ ಅಥವಾ ಅನುಮಾನಾಸ್ಪದ ಔಷಧಗಳ ಕುರಿತು ಯಾವುದೇ ಮಾಹಿತಿ ಸಾರ್ವಜನಿಕರ ಗಮನಕ್ಕೆ ಬಂದರೆ ಅದನ್ನು ನಿರ್ಲಕ್ಷಿಸದೆ ಕೂಡಲೇ ಆರೋಗ್ಯ ಇಲಾಖೆ ಅಥವಾ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಇಂತಹ ಜಾಗೃತಿಯೇ ದೊಡ್ಡ ಅಪಾಯವನ್ನು ಆರಂಭದಲ್ಲಿಯೇ ತಡೆಯುವ ಶಕ್ತಿಯಾಗಲಿದೆ. ನಕಲಿ ಔಷಧಗಳ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಪ್ರಯತ್ನಗಳ ಜೊತೆಗೆ ಫಾರ್ಮಸಿಸ್ಟ್‌ಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ. ಸರ್ಕಾರ, ಫಾರ್ಮಸಿಸ್ಟ್‌ಗಳು ಮತ್ತು ಸಾರ್ವಜನಿಕರು ಒಂದಾಗಿ ನಿಂತಾಗ ಮಾತ್ರ ಆರೋಗ್ಯ ಸುರಕ್ಷತೆಯ ಬಲಿಷ್ಠ ವ್ಯವಸ್ಥೆ ನಿರ್ಮಿಸಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎನ್. ಶ್ರೀಹರ್ಷ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್ ಕೆ.ಎನ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಹಾಯಕ ಔಷಧ ನಿಯಂತ್ರಕ ಡಾ. ವೀರೇಶ್ ಬಾಬು, ವಿಶಾಲಾಕ್ಷಿ ವಿ., ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಮಧುಕರ ಶೆಟ್ಟಿ, ಜಿಲ್ಲಾ ಔಷಧ ತಜ್ಞರ ಸಂಘದ ಗಣೇಶ್ ಎಸ್. ರಾವ್ ಉಪಸ್ಥಿತರಿದ್ದರು.

...ಬಾಕ್ಸ್‌...

‘ಉತ್ತಮ ಫಾರ್ಮಸಿಸ್ಟ್’ ಪ್ರಶಸ್ತಿ ಪ್ರದಾನ

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎ. ಶ್ರೀನಾಥ್ ಹಾಗೂ ಔಷಧ ಮಾರಾಟ ಕ್ಷೇತ್ರದಲ್ಲಿನ ಸೇವೆಗಾಗಿ ಭೂಪಾಳಂ ಶಂಕರ ಪ್ರದೀಪ ಅವರಿಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ವತಿಯಿಂದ ನೀಡಲಾಗುವ ಜಿಲ್ಲಾ ಮಟ್ಟದ ‘ಉತ್ತಮ ಫಾರ್ಮಸಿಸ್ಟ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪೊಟೋ: 25ಎಸ್‌ಎಂಜಿಕೆಪಿ01

ಶಿವಮೊಗ್ಗದಲ್ಲಿ ವಿಶ್ವ ಔಷಧ ತಜ್ಞರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಫಾರ್ಮಸಿಸ್ಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎ. ಶ್ರೀನಾಥ್ ಅವರಿಗೆ ಜಿಲ್ಲಾ ಮಟ್ಟದ ‘ಉತ್ತಮ ಫಾರ್ಮಸಿಸ್ಟ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಿಸರ ಸಂರಕ್ಷಿಸಿದರೆ ಮನುಷ್ಯನ ಆರೋಗ್ಯ ಸುಧಾರಣೆ: ಕೆ.ಆರ್.ಶ್ರೀನಿವಾಸ್
ಆರೋಗ್ಯಯುತ ಜೀವನಕ್ಕೆ ಕ್ರೀಡೆಗಳು ಅವಶ್ಯಕ: ಎ.ಸಿ.ಗೀತಾ