ಅವಳಿ ವ್ಯಕ್ತಿಗಳಿಗೆ ಎಸ್‌ಐಆರ್‌ ಸಾಫ್ಟ್‌ವೇರ್‌ನಿಂದ ನೋಟಿಸ್‌

Published : Sep 25, 2026, 09:52 AM IST
SIR

ಸಾರಾಂಶ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್‌) ಪ್ರಕ್ರಿಯೆಯಲ್ಲಿ ಅವಳಿ ಮತದಾರರಿಗೆ ‘ತಾರ್ಕಿಕ ದೋಷ’ದ (ಲಾಜಿಕಲ್‌ ಡಿಸ್ಕ್ರಿಪೆನ್ಸಿಸ್‌) ನೋಟಿಸ್‌ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ.

 ಮೋಹನ ಹಂಡ್ರಂಗಿ

 ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್‌) ಪ್ರಕ್ರಿಯೆಯಲ್ಲಿ ಅವಳಿ ಮತದಾರರಿಗೆ ‘ತಾರ್ಕಿಕ ದೋಷ’ದ (ಲಾಜಿಕಲ್‌ ಡಿಸ್ಕ್ರಿಪೆನ್ಸಿಸ್‌) ನೋಟಿಸ್‌ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ.

ಒಂದೇ ವಿಳಾಸದಲ್ಲಿ ಒಂದೇ ಹುಟ್ಟಿದ ದಿನಾಂಕ ಅಥವಾ 9 ತಿಂಗಳಿಗಿಂತ ಕಡಿಮೆ ವಯಸ್ಸಿನ ವ್ಯತ್ಯಾಸವಿರುವ ಒಡಹುಟ್ಟಿದವರ (ಅವಳಿಗಳ) ಮಾಹಿತಿ ಕಂಡುಬಂದಾಗ, ಚುನಾವಣಾ ಆಯೋಗದ ಸಾಫ್ಟ್‌ವೇರ್ ಅದನ್ನು ತಾರ್ಕಿಕ ದೋಷ ಎಂದು ಗುರುತಿಸುತ್ತದೆ. ಹೀಗಾಗಿ ರಾಜ್ಯದ ಹಲವೆಡೆ ‘ಅವಳಿ ಮತದಾರರಿಗೆ’ ತಾರ್ಕಿಕ ದೋಷ ಎಂದು ನೋಟಿಸ್‌ ನೀಡಲಾಗಿದೆ. ಹೀಗಾಗಿ ಈ ಮತದಾರರು ಆತಂಕಗೊಂಡಿದ್ದಾರೆ. ದೋಷ ಸರಿಪಡಿಸಲು ಯಾವ ದಾಖಲೆ ನೀಡಬೇಕು ಎಂಬ ಗೊಂದಲದಲ್ಲಿದ್ದಾರೆ.

ಮತದಾರರ ಪಟ್ಟಿಯಲ್ಲಿ ಒಬ್ಬರೇ ವ್ಯಕ್ತಿ ಎರಡು ಬಾರಿ ನೋಂದಣಿ ಮಾಡಿಕೊಳ್ಳುವುದನ್ನು (ಡ್ಯೂಪ್ಲಿಕೇಟ್‌) ತಡೆಯಲು ಕೇಂದ್ರ ಚುನಾವಣಾ ಆಯೋಗ ಎಐ ತಂತ್ರಜ್ಞಾನ ಆಧರಿತ ಸಾಫ್ಟ್‌ವೇರ್ ವಿನ್ಯಾಸಗೊಳಿಸಿದೆ. ವಾಸ್ತವದಲ್ಲಿ ಒಬ್ಬ ತಾಯಿಗೆ ಒಂಬತ್ತು ತಿಂಗಳ ಅವಧಿಯಲ್ಲಿ ಎರಡು ಬಾರಿ ಹೆರಿಗೆ (ಅವಳಿ ಹೊರತುಪಡಿಸಿ) ಆಗಲು ಸಾಧ್ಯವಿಲ್ಲ. ಹೀಗಾಗಿ ಸಾಫ್ಟ್‌ವೇರ್‌ ಇದನ್ನು ತಾಂತ್ರಿಕ ದೋಷ ಎಂದು ಗುರುತಿಸುತ್ತದೆ.

ಪ್ರತ್ಯೇಕ ಕಾಲಂ ಇಲ್ಲ:

ಸಾಮಾನ್ಯ ಮತದಾರರ ನೋಂದಣಿ ನಮೂನೆಗಳಲ್ಲಿ ಅರ್ಜಿದಾರರು ಅವಳಿ ಅಥವಾ ತ್ರಿವಳಿ ಮಕ್ಕಳೇ ಎಂಬುದನ್ನು ಗುರುತಿಸಲು ಯಾವುದೇ ಪ್ರತ್ಯೇಕ ಕಾಲಂ ಇರುವುದಿಲ್ಲ. ಈ ವಿವರ ಇಲ್ಲದಿರುವುದರಿಂದ ಸಾಫ್ಟ್‌ವೇರ್‌ಗೆ ಅವಳಿ ಮಕ್ಕಳ ನಡುವಿನ ವ್ಯತ್ಯಾಸ ತಿಳಿಯುವುದಿಲ್ಲ. ಹೀಗಾಗಿ ತಾರ್ಕಿಕ ದೋಷ ಎಂದು ನೋಟಿಸ್‌ ಜನರೇಟ್‌ ಮಾಡುತ್ತದೆ. ಹೀಗಾಗಿ ರಾಜ್ಯದ ಹಲವೆಡೆ ಅವಳಿ ಮತದಾರರಿಗೆ ನೋಟಿಸ್‌ ನೀಡಲಾಗಿದೆ.

ನೋಟಿಸ್‌ಗೆ ಆತಂಕ ಬೇಡ:

ಈ ತಾರ್ಕಿಕ ದೋಷದ ನೋಟಿಸ್‌ ಬಂದಿರುವುದಕ್ಕೆ ಮತದಾರರು ಆತಂಕಪಡುವ ಅಗತ್ಯವಿಲ್ಲ. ಇದು ಕೇವಲ ಮಾಹಿತಿ ತಿದ್ದುಪಡಿ ಪ್ರಕ್ರಿಯೆ ಅಷ್ಟೇ. ಈ ನೋಟಿಸ್‌ ಸ್ವೀಕರಿಸಿರುವ ಅವಳಿ ಮತದಾರರು ನಿಗದಿತ ದಾಖಲೆಗಳೊಂದಿಗೆ ಮತದಾರರ ನೋಂದಣಾಧಿಕಾರಿ(ಇಆರ್‌ಒ) ಎದುರು ವಿಚಾರಣೆಗೆ ಹಾಜರಾಗಿ ದಾಖಲೆ ಹಾಜರುಪಡಿಸಿ ಮತದಾರರ ಪಟ್ಟಿಯಲ್ಲಿ ಉಳಿದುಕೊಳ್ಳಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಯಾವ ದಾಖಲೆ ಸಲ್ಲಿಸಬೇಕು?:

ಈ ತಾರ್ಕಿಕ ದೋಷದ ನೋಟಿಸ್‌ ಸ್ವೀಕರಿಸಿರುವ ಅವಳಿ ಮತದಾರರು ತಮ್ಮ ವ್ಯಾಪ್ತಿಯ ಮತದಾರರ ನೋಂದಣಾಧಿಕಾರಿ(ಇಆರ್‌ಒ) ಕಚೇರಿಗೆ ಭೇಟಿ ನೀಡಿ ತಮ್ಮ ಪ್ರತ್ಯೇಕ ಗುರುತು ಸಾಬೀತುಪಡಿಸುವ ಜನನ ಪ್ರಮಾಣಪತ್ರ ಅಥವಾ ಶಾಲಾ ದಾಖಲೆಗಳನ್ನು ಒದಗಿಸಬೇಕು. ಜನನ ಪ್ರಮಾಣ ಪತ್ರದಲ್ಲಿ ಹುಟ್ಟಿದ ಸಮಯ ಪ್ರತ್ಯೇಕವಾಗಿರುತ್ತದೆ ಮತ್ತು ಪ್ರತ್ಯೇಕ ಪ್ರಮಾಣಪತ್ರ ಇರುತ್ತದೆ. ಅಂತೆಯೆ ಆಧಾರ್‌ ಕಾರ್ಡ್‌ ಅನ್ನು ದಾಖಲೆಯಾಗಿ ನೀಡಬಹುದು. ಇದರಲ್ಲಿ ಇಬ್ಬರದು ಪ್ರತ್ಯೇಕ ಆಧಾರ್‌ ಸಂಖ್ಯೆ ಇರುತ್ತದೆ.

ಇದರೊಂದಿಗೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಮತದಾರರ ಗುರುತಿನ ಚೀಟಿಯನ್ನೂ ಹಾಜರುಪಡಿಸಬಹುದು. ಈ ವೇಳೆ ಮತದಾರರ ನೋಂದಣಾಧಿಕಾರಿ ನಿಗದಿತ ದಾಖಲೆಗಳನ್ನು ಪರಿಶೀಲಿಸಿ ತಾಂತ್ರಿಕ ದೋಷ ಸರಿಪಡಿಸಲಿದ್ದಾರೆ. ನೋಟಿಸ್‌ ಕೊಟ್ಟ ಕಾರಣಕ್ಕೆ ಮತದಾರರ ಪಟ್ಟಿಯಿಂದ ಅವಳಿ ಮತದಾರರು ಹೆಸರು ಡಿಲೀಟ್‌ ಆಗುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

11 ವಿಧದ ತಾರ್ಕಿಕ ದೋಷ

ಕೇಂದ್ರ ಚುನಾವಣಾ ಆಯೋಗ ಎಸ್ಐಆರ್‌ ಪ್ರಕ್ರಿಯೆಯಲ್ಲಿ 11 ತಾರ್ಕಿಕ ದೋಷಗಳನ್ನು ಪಟ್ಟಿ ಮಾಡಿ ಅಂತಹ ಮತದಾರರಿಗೆ ನೋಟಿಸ್‌ ನೀಡುತ್ತಿದೆ. ಒಂದೇ ಪೋಷಕರ ಇಬ್ಬರು ಮಕ್ಕಳ ವಯಸ್ಸಿನ ನಡುವಿನ ಅಂತರ 9 ತಿಂಗಳಿಗಿಂತ ಕಡಿಮೆ ಇರುವುದು, ಮತದಾರರು ಮತ್ತು ಅವರ ಪೋಷಕರ ವಯಸ್ಸಿನ ಅಂತರ 15 ವರ್ಷಗಳಿಂತ ಕಡಿಮೆ ಇರುವುದು, ಗರಿಷ್ಠ ವಯಸ್ಸಿನ ಅಂತರ 50 ವರ್ಷಗಳಿಗಿಂತ ಹೆಚ್ಚಿರುವುದು, ಮತದಾರರು ಮತ್ತು ಅವರ ಅಜ್ಜಿ-ತಾತನ ವಯಸ್ಸಿನ ಅಂತರ 40 ವರ್ಷಕ್ಕಿಂತ ಕಡಿಮೆ ಇರುವುದು ಸೇರಿ 11 ವಿಧದ ತಾರ್ಕಿಕ ದೋಷಗಳಿವೆ. ಈ ಕಾರಣಗಳಿಗೆ ನೋಟಿಸ್‌ ಪಡೆದ ಮತದಾರರು ನಿಗದಿತ ದಾಖಲೆಗಳನ್ನು ಹಾಜರುಪಡಿಸಿ ದೋಷಗಳನ್ನು ಸರಿಪಡಿಸಿಕೊಳ್ಳಬೇಕು.

ಏನು ಮಾಡಬೇಕು?

- ತಮ್ಮ ವ್ಯಾಪ್ತಿಯ ಮತದಾರರ ನೋಂದಣಾಧಿಕಾರಿ ಕಚೇರಿಗೆ ಅವಳಿಗಳು ಭೇಟಿ ನೀಡಬೇಕು

- ಪ್ರತ್ಯೇಕ ಗುರುತು ಸಾಬೀತುಪಡಿಸುವ ಜನನ ಪ್ರಮಾಣಪತ್ರ, ಶಾಲಾ ದಾಖಲೆ ಸಲ್ಲಿಸಬೇಕು

- ಜನನ ಪ್ರಮಾಣಪತ್ರದಲ್ಲಿ ಹುಟ್ಟಿದ ಸಮಯ ಪ್ರತ್ಯೇಕವಾಗಿರುವುದರಿಂದ ಪ್ರತ್ಯೇಕ ಪ್ರಮಾಣಪತ್ರ

- ಆಧಾರ್‌ ಕಾರ್ಡ್‌ನಲ್ಲಿ ಪ್ರತ್ಯೇಕ ಸಂಖ್ಯೆ ಇರುವ ಕಾರಣ ಅದನ್ನೂ ದಾಖಲೆಯಾಗಿ ಕೊಡಬಹುದು

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪ್ರತಿ ಲೀಟರ್‌ ಹಾಲಿಗೆ ₹4-5 ಹೆಚ್ಚಳ? - ರಾಜ್ಯದಲ್ಲಿ ಹಾಲಿನ ದರ ಏರಿಕೆ ಬಹುತೇಕ ಖಚಿತ
ರಾಜ್ಯದ ರೈತರಿಗೆ 2500 ರುಪಾಯಿ ಬರ ಪರಿಹಾರ