ಲಕ್ಷ್ಮೇಶ್ವರ: ರೈತರು ಸಮಗ್ರ ಬೆಳೆ ಪದ್ಧತಿ ಅಳವಡಿಸಿಕೊಂಡರೆ ಕೃಷಿಯಲ್ಲಿ ಹೆಚ್ಚು ಲಾಭ ಗಳಿಸಲು ಸಾಧ್ಯ. ಬೆಳೆಗಳಿಗೆ ಬರುವ ರೋಗಗಳ ಬಗ್ಗೆ ರೈತರು ಸರಿಯಾದ ಮಾಹಿತಿ ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.
ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಕಡಲೆಗೆ ತಾಲೂಕಿನಲ್ಲಿ ಸಿಡಿ ಹಾಯುವುದು ಹಾಗೂ ಕುಂಕುಮ ರೋಗ ಕಂಡುಬಂದಿದೆ. ಈ ರೋಗಗಳು ಬರಲು ಪ್ರಮುಖ ಕಾರಣಗಳೆಂದರೆ ಪದೇ ಪದೇ ಒಂದೇ ರೀತಿಯ ಬೆಳೆಯನ್ನು ಬೆಳೆಯುವುದು ಹಾಗೂ ಬೀಜೋಪಚಾರ ಮಾಡದಿರುವುದು ಕಾರಣವಾಗಿದೆ ಎಂದರು.
ಕಡಲೆ ಬೆಳೆಯಲ್ಲಿ ಕಂಡುಬರುವ ಬೇರು ಕೊಳೆ ರೋಗ ಅಥವಾ ಸಿಡಿ ಹಾಯುವ ರೋಗಕ್ಕೆ ಮುಂಗಾರು ಹಂಗಾಮಿನಲ್ಲಿ ದ್ವಿದಳ ಧಾನ್ಯದ ಬೆಳೆ ಬೆಳೆಯುವುದು ಹಾಗೂ ಹಿಂಗಾರು ಹಂಗಾಮಿನಲ್ಲಿಯೂ ದ್ವಿದಳ ಬೆಳೆಯುವುದು ಹಾಗೂ ಬಿತ್ತುವ ವೇಳೆ ಬೀಜೋಪಚಾರ ಮಾಡದಿರುವುದು ಪ್ರಮುಖ ಕಾರಣವಾಗಿವೆ.ಕುಂಕುಮ ರೋಗ ಕಾಣಿಸಿಕೊಳ್ಳಲು ರಂಜಕದ ಕೊರತೆಯಿಂದ ಹಾಗೂ ಅತಿಯಾದ ತೇವಾಂಶದಿಂದ ಕಡಲೆ ಬೆಳೆಯ ಎಲೆಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಅದಕ್ಕಾಗಿ ನ್ಯಾನೋ ಡಿಎಪಿಯನ್ನು ಸಿಂಪರಣೆ ಮಾಡುವುದರಿಂದ ರೋಗಗಳನ್ನು ತಡೆಯಬಹುದು ಎಂದು ಹೇಳಿದ ಅವರು, ಪರ್ಯಾಯ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಭೂಮಿಯಲ್ಲಿನ ಕೀಟ ಹಾಗೂ ರೋಗಾಣುಗಳನ್ನು ನಿಯಂತ್ರಿಸುವುದು ರೈತರಿಂದ ಸಾಧ್ಯವಿದೆ ಎಂದರು.
ಜಿಲ್ಲಾ ಕೃಷಿ ನಿರ್ದೇಶಕಿ ಸ್ಫೂರ್ತಿ ಎಂ., ತಾಲೂಕು ಸಹಾಯಕ ಕೃಷಿ ಅಧಿಕಾರಿ ಶಿವಕುಮಾರ ಕಾಶಪ್ಪನವರ, ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಕೃಷಿ ಅಧಿಕಾರಿ ಪ್ರಕಾಶ ಹೊನ್ನಪ್ಪನವರ ಹಾಗೂ ರೈತರಾದ ವಿರುಪಾಕ್ಷಪ್ಪ ಆದಿ, ಬಸವರಾಜ ಮೆಣಸಿನಕಾಯಿ, ಸೋಮನಗೌಡ ಪಾಟೀಲ ಇದ್ದರು.