ಬೆಂಗಳೂರಿನ ಪೂರ್ವ, ಕೇಂದ್ರ ಪಾಲಿಕೆಗಳಿಂದ ₹7,316 ಕೋಟಿ ಬಜೆಟ್‌ ಮಂಡನೆ

KannadaprabhaNewsNetwork |  
Published : Mar 28, 2026, 03:15 AM IST
Driver | Kannada Prabha

ಸಾರಾಂಶ

ಅಧಿಕಾರ ವೀಕೇಂದ್ರೀಕರಣ ಮೂಲಕ ಅಭಿವೃದ್ಧಿ ಮತ್ತು ಆಡಳಿತಕ್ಕೆ ವೇಗ ನೀಡುವ ಉದ್ದೇಶದಿಂದ ರಚನೆಯಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಜನಪ್ರತಿನಿಧಿಗಳಿಲ್ಲದ ಪೂರ್ವ ನಗರ ಪಾಲಿಕೆ ಮತ್ತು ಕೇಂದ್ರ ನಗರ ಪಾಲಿಕೆಗಳ ಮೊದಲ ಬಜೆಟ್ ಶುಕ್ರವಾರ ಮಂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಧಿಕಾರ ವೀಕೇಂದ್ರೀಕರಣ ಮೂಲಕ ಅಭಿವೃದ್ಧಿ ಮತ್ತು ಆಡಳಿತಕ್ಕೆ ವೇಗ ನೀಡುವ ಉದ್ದೇಶದಿಂದ ರಚನೆಯಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಜನಪ್ರತಿನಿಧಿಗಳಿಲ್ಲದ ಪೂರ್ವ ನಗರ ಪಾಲಿಕೆ ಮತ್ತು ಕೇಂದ್ರ ನಗರ ಪಾಲಿಕೆಗಳ ಮೊದಲ ಬಜೆಟ್ ಶುಕ್ರವಾರ ಮಂಡಿಸಲಾಯಿತು.

2026-27ನೇ ಸಾಲಿಗೆ ಪೂರ್ವ ನಗರ ಪಾಲಿಕೆ 3,889 ಕೋಟಿ ರು. ಹಾಗೂ ಕೇಂದ್ರ ನಗರ ಪಾಲಿಕೆ 3,426 ಕೋಟಿ ರು. ಮೊತ್ತದ ಬಜೆಟ್‌ ಅನ್ನು ಪ್ರಸ್ತುತಪಡಿಸಿದವು. ಪೂರ್ವ ಪಾಲಿಕೆಯ ಬಜೆಟ್ ಅನ್ನು ಆಯುಕ್ತ ಡಿ.ಎಸ್.ರಮೇಶ್ ಹಾಗೂ ಕೇಂದ್ರ ನಗರ ಪಾಲಿಕೆಯ ಬಜೆಟ್ ಅನ್ನು ಆಯುಕ್ತ ಪಿ.ರಾಜೇಂದ್ರ ಚೋಳನ್ ಮಂಡಿಸಿದರು.

ಎರಡೂ ಪಾಲಿಕೆಗಳು ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿವೆ. ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಕ್ಕಿಂತ ಸ್ವಂತ ಆದಾಯ ನೆಚ್ಚಿಕೊಂಡು ಬಜೆಟ್‌ ಮಂಡಿಸಲಾಗಿದೆ. ಅದರಲ್ಲೂ ಹೆಚ್ಚಿನ ತೆರಿಗೆ ಆದಾಯ ಹೊಂದಿರುವ ಪೂರ್ವ ನಗರ ಪಾಲಿಕೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬಜೆಟ್‌ ಆದಾಯದ ಕೇವಲ ಶೇ.12ರಷ್ಟು ಅನುದಾನ ನಿರೀಕ್ಷಿಸಲಾಗಿದೆ. ಆದರೆ, ಕೇಂದ್ರ ನಗರಪಾಲಿಕೆ ಎರಡೂ ಸರ್ಕಾರಗಳಿಂದ ಶೇ.26ರಷ್ಟು ಅನುದಾನದ ನಿರೀಕ್ಷೆ ಹೊಂದಲಾಗಿದೆ ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ನಗರ ಪಾಲಿಕೆಯು ಆದಾಯಕ್ಕಿಂತ ವೆಚ್ಚ ಕಡಿಮೆ ಇರುವಂತೆ ನೋಡಿಕೊಂಡಿದ್ದು, 1.38 ಕೋಟಿ ರು. ಉಳಿತಾಯ ಬಜೆಟ್‌ ಮಂಡಿಸಲಾಗಿದೆ. ಆದರೆ, ಪೂರ್ವ ನಗರ ಪಾಲಿಕೆಯು ರಾಜ್ಯ ಬಜೆಟ್‌ ಮಾದರಿಯಲ್ಲಿ ಕೊರತೆ ಬಜೆಟ್‌ ಮಂಡಿಸಿದ್ದು, ಆದಾಯಕ್ಕಿಂತ 1.57 ಕೋಟಿ ರು. ಹೆಚ್ಚಿನ ವೆಚ್ಚದ ಬಜೆಟ್‌ ಮಂಡಿಸಲಾಗಿದೆ.

ಪೂರ್ವ ನಗರ ಪಾಲಿಕೆಯಿಂದ ವರ್ತೂರಿನಲ್ಲಿ ಹೊಸ ಮೇಲ್ಸೇತುವೆ ನಿರ್ಮಾಣ ಹೊರತುಪಡಿಸಿ ಉಳಿದಂತೆ ಎರಡೂ ನಗರ ಪಾಲಿಕೆಗಳು ಬೃಹತ್‌ ಯೋಜನೆಗಳ ಪ್ರಸ್ತಾಪವಿಲ್ಲದೆ ನಿರ್ವಹಣೆ, ಅಭಿವೃದ್ಧಿ ಮತ್ತು ಮೇಲ್ದರ್ಜೆಗೇರಿಸುವ ಕಾರ್ಯಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಪ್ರಮುಖವಾಗಿ ರಸ್ತೆಗಳ ನಿರ್ಮಾಣ ಮತ್ತು ಅಭಿವೃದ್ಧಿ, ಮೇಲ್ಸೇತುವೆ ನಿರ್ಮಾಣ, ರಾಜಕಾಲುವೆ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳನ್ನು ಎಲ್‌ಇಡಿ ದೀಪಗಳಾಗಿ ಪರಿವರ್ತನೆ, ಉದ್ಯಾನಗಳ ಅಭಿವೃದ್ಧಿ, ಕಲ್ಯಾಣ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.ಮುನ್ಸಿಪಲ್‌ ಬಾಂಡ್‌ನಿಂದ ಸಾಲ:ಸ್ವಂತ ಆದಾಯ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದ ಜತೆಗೆ ಹೊಸ ಆದಾಯದ ಮೂಲವಾಗಿ ಮುನ್ಸಿಪಲ್‌ ಬಾಂಡ್‌ ವಿತರಿಸಿ ಸಾಲ ಪಡೆಯುವುದಾಗಿ ಎರಡೂ ನಗರ ಪಾಲಿಕೆಗಳು ಪ್ರಸ್ತಾಪಿಸಿವೆ. ಅದರಂತೆ ತಲಾ 200 ಕೋಟಿ ರು.ಗಳಂತೆ ಎರಡೂ ನಗರ ಪಾಲಿಕೆಗಳು 400 ಕೋಟಿ ರು.ಗಳನ್ನು ಮುನ್ಸಿಪಲ್‌ ಬಾಂಡ್‌ ವಿತರಿಸಿ ಸಾಲದ ರೂಪದಲ್ಲಿ ಪಡೆಯಲಾಗುವುದು ಎಂದು ತಿಳಿಸಿವೆ. ಆದರೆ, ಈ ಸಾಲ ಮರುಪಾವತಿಯ ಬಗೆಯನ್ನು ಮಾತ್ರ ನಗರ ಪಾಲಿಕೆಗಳ ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ.

ಸಣ್ಣದಾದರೂ ಪ್ರಮುಖ ಹೊಸ ಯೋಜನೆಗಳ ಘೋಷಣೆ:

ಬೃಹತ್‌ ಯೋಜನೆಗಳಿಗಿಂತ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸಣ್ಣ ಮಟ್ಟದ ಯೋಜನೆಗಳನ್ನು ನಗರ ಪಾಲಿಕೆಗಳು ಘೋಷಿಸಿವೆ. ಪ್ರಮುಖವಾಗಿ ರಸ್ತೆ, ಸಾರ್ವಜನಿಕ ಸ್ಥಳಗಳ ಜಾಗತಿಕ ವಿನ್ಯಾಸಕ್ಕಾಗಿ ಪ್ರತ್ಯೇಕ ಅರ್ಬನ್‌ ಸೆಲ್‌ ಸ್ಥಾಪನೆ, ಪಾಲಿಕೆ ಕಟ್ಟಡಗಳಿಗೆ ಸೋಲಾರ್‌ ಅಳವಡಿಕೆ, ಮಕ್ಕಳಿಗಾಗಿ ಪುಟಾಣಿ ಪಾರ್ಕ್‌ಗಳ ಸ್ಥಾಪನೆ, ಪಾಲಿಕೆ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಎಐ ತರಬೇತಿ, ಅಪಾರ್ಟ್‌ಮೆಂಟ್‌ಗಳಲ್ಲಿ ಇವಿ ಚಾರ್ಜಿಂಗ್‌ ಕೇಂದ್ರ ಕಡ್ಡಾಯ ಅಳವಡಿಕೆ ವ್ಯವಸ್ಥೆ ಜಾರಿ, ಬೈಕ್‌ ಆ್ಯಂಬುಲೆನ್ಸ್‌ ಪ್ರಥಮ ಸ್ಪಂದನಾ ಘಟಕ, 22 ಸ್ಥಳಗಳಲ್ಲಿ ಸ್ಮಾರ್ಟ್‌ ವರ್ಚ್ಯುವಲ್ ಕ್ಲಿನಿಕ್‌ ಸ್ಥಾಪನೆ ಹೀಗೆ ಹಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಅಲ್ಲದೆ, ಇದರಲ್ಲಿ ಕೆಲ ಯೋಜನೆಗಳ ಅನುಷ್ಠಾನಕ್ಕೆ ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ ಹಾಗೂ ಖಾಸಗಿ ಸಾರ್ವಜನಿಕ ಪಾಲುದಾರಿಕೆ ವ್ಯವಸ್ಥೆಯ ಮೊರೆ ಹೋಗುವುದಾಗಿ ತಿಳಿಸಲಾಗಿದೆ.

-ಬಾಕ್ಸ್‌-ಬಜೆಟ್‌ ಮಂಡನೆಯಲ್ಲಿ ಶಾಸಕರು ಭಾಗಿ

ಎರಡೂ ನಗರ ಪಾಲಿಕೆಗಳ ಬಜೆಟ್‌ ಮಂಡನೆ ಸಮಯ ಬೇರೆಬೇರೆಯಾಗಿದ್ದ ಕಾರಣ ಎರಡರಲ್ಲೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಭಾಗಿಯಾಗಿದ್ದರು. ಇನ್ನು, ಪೂರ್ವ ನಗರ ಪಾಲಿಕೆ ಬಜೆಟ್‌ ಮಂಡನೆ ವೇಳೆ ಶಾಸಕಿ ಎಸ್‌.ಮಂಜುಳಾ ಹಾಗೂ ಕೇಂದ್ರ ನಗರ ಪಾಲಿಕೆ ಮಂಡನೆ ವೇಳೆ ಶಾಸಕ ಉದಯ್‌ ಗರುಡಾಚಾರ್‌ ಪಾಲ್ಗೊಂಡಿದ್ದರು.

ಐಟಿ ಬಿಟಿ ಕಂಪನಿಗಳು ಹೆಚ್ಚಾಗಿರುವ ಕಾರಣ ನಗರದಲ್ಲಿ ಪೂರ್ವ ನಗರ ಪಾಲಿಕೆ ಅತಿ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆಶಯದಂತೆ ರಸ್ತೆ ಅಭಿವೃದ್ಧಿ, ಅಗಲೀಕರಣ ಸೇರಿ ಸಮಗ್ರ ಅಭಿವೃದ್ಧಿಯ ಮಹತ್ವಾಕಾಂಕ್ಷೆಯೊಂದಿಗೆ ಪಾಲಿಕೆ ಬಜೆಟ್ ಮಂಡಿಸಲಾಗಿದೆ. - ಡಿ.ಎಸ್.ರಮೇಶ್, ಆಯುಕ್ತ, ಪೂರ್ವ ನಗರ ಪಾಲಿಕೆ

- ಪೂರ್ವ ನಗರ ಪಾಲಿಕೆಯಿಂದ 3,889 ಕೋಟಿ ಬಜೆಟ್‌ । ಕೇಂದ್ರ ನಗರ ಪಾಲಿಕೆಯಿಂದ 3,427 ಕೋಟಿ ಬಜೆಟ್ ।

- ರಸ್ತೆಗಳು, ಸಾರ್ವಜನಿಕ ಸೌಕರ್ಯಕ್ಕೆ ಗರಿಷ್ಠ ವೆಚ್ಚ ನಿಗದಿ । ಮುನ್ಸಿಪಲ್‌ ಬಾಂಡ್‌ ವಿತರಿಸಿ 400 ಕೋಟಿ ಸಾಲ ।

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಂತ ಆದಾಯ ಬಲದ ಮೇಲೆಯೇ ಕೇಂದ್ರ ನಗರ ಪಾಲಿಕೆ ₹3427 ಕೋಟಿ ಮೊತ್ತದ ಬಜೆಟ್‌ ಮಂಡನೆ
ಮುನ್ಸಿಪಲ್ ಬಾಂಡ್ ಮೂಲಕ ಪೂರ್ವ ಪಾಲಿಕೆಗೆ ₹200 ಕೋಟಿ ಸಂಗ್ರಹ ಗುರಿ