ಕನ್ನಡಪ್ರಭ ವಾರ್ತೆ ಬೆಳಗಾವಿ
ಗ್ರಾಮದ ಜನರು ಒಂದಾಗಿ ಸಹೋದರರಂತೆ ಬಾಳುತ್ತಿದ್ದಾರೆ. ಆದರೆ, ಕೆಲವು ವರ್ಷಗಳ ಹಿಂದೆ ಗ್ರಾಮದ ಕ್ರಾಸ್‌ನಲ್ಲಿ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ತೆರೆದಿದೆ. ಇದರಿಂದ ಗ್ರಾಮದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ದಿನ ಒಂದಲ್ಲ ಒಂದು ಕಡೆ ತಂಟೆ ತಕರಾರು, ಜಗಳಗಳು ನಡೆಯುತ್ತಿವೆ. ಇದರಿಂದ ಗ್ರಾಮದ ಶಾಂತಿ ನೆಮ್ಮದಿ ಹಾಳಾಗುತ್ತದೆ ಎಂದು ಗ್ರಾಮಸ್ಥರು ಮನವಿಯಲ್ಲಿ ಅವಲತ್ತುಕೊಂಡಿದ್ದಾರೆ.
ಗ್ರಾಮದ ಹಲವರು ಉದ್ಯೋಗಗಳನ್ನೂ ಬಿಟ್ಟು ಮದ್ಯದ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಯುವಕರು ಸಣ್ಣ ವಯಸ್ಸಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಊರಿನಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜಿಗೆ ಹೋಗುವ ಹಲವು ಮಕ್ಕಳಿದ್ದಾರೆ. ಹರೆಯದ ಮಕ್ಕಳ ಮೇಲೂ ಇದು ಗಂಭೀರ ಪರಿಣಾಮ ಬೀರುತ್ತಿದೆ. ಗ್ರಾಮದಲ್ಲಿ ಯಾವುದೇ ಜಾತ್ರೆ, ಉತ್ಸವ ಅಥವಾ ಶವ ಸಂಸ್ಕಾರ ಇದ್ದಾಗಲೂ ಕುಡಿದು ಬಂದು ಗಲಾಟೆ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ಇಲ್ಲಿ ಮದ್ಯದ ಅಂಗಡಿ ಆರಂಭವಾದಾಗಿನಿಂದ ಗ್ರಾಮದ ಶಾಂತಿ, ಹಾಳಾಗಿದೆ. ಮಹಿಳೆಯರು ನೆಮ್ಮದಿಯಿಂದ ಓಡಾಡದಂಥ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಖ್ಯವಾಗಿ ಚಚಡಿ ಗ್ರಾಮದಲ್ಲಿ ಕೆಲವರು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಚಿಕ್ಕ ಮಕ್ಕಳಿಗೆ ಸಾರಾಯಿ ಸುಲಭವಾಗಿ ಸಿಗುವಂತಾಗಿದೆ. ಹೀಗಾಗಿ, ಎಂಎಸ್‌ಐಎಲ್ ಮದ್ಯದ ಅಂಗಡಿಯನ್ನು ಕೂಡಲೇ ಬಂದ್ ಮಾಡಿಸಬೇಕು ಹಾಗೂ ಊರಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಗ್ರಾಮದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ನೆರವಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಚನ್ನಮ್ಮ ಖನಗಾಂವಿ, ಗಂಗವ್ವ ಸೋಮನ್ನವರ, ನಾಗರಾಜ ದೇಸಾಯಿ, ಬಸವರಾಜ ತಿಗಡಿ, ರಾಜು ಪಾಟೀಲ, ಮುದಕಪ್ಪ ಮೇಟಿ ಸೇರಿದಂತೆ ಗ್ರಾಮದ ಮಹಿಳೆಯರು ಭಾಗವಹಿಸಿದ್ದರು.