ಉಡುಪಿ: ಜಿಲ್ಲೆಯ ಅತಿ ಪುರಾತನ ದೇವಾಲಯಗಳಲ್ಲಿ ಒಂದಾದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ.
ಈ ಸಂದರ್ಭ ಮಾತನಾಡಿದ ಉಚ್ಚಿಲ ಮೊಗವೀರ ಮಹಾಜನ ಸಭಾದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ, ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ಮೂಡಿ ಬರಲಿ ಎಂದು ಶುಭ ಹಾರೈಸಿದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಉಡುಪಿ ಜಿಲ್ಲೆ ಸಾಂಸ್ಕೃತಿಕ ನಗರಿ, ಇತ್ತೀಚಿನ ದಿನಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವಸ್ಥಾನ, ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದೆ. ದೇವರ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಪವಾಡದಂತೆ ನಡೆಯುತ್ತಿದೆ. ದೇವರು ತನಗೆ ಏನು ಬೇಕು ಎನ್ನುವುದನ್ನು ಭಕ್ತರ ಮೂಲಕ ನೆರವೇರಿಸಿಕೊಳ್ಳುತ್ತಾನೆ. ದೇವಾಲಯದಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಎಲ್ಲ ಭಕ್ತರ ಕೂಡುವಿಕೆಯಲ್ಲಿ ಸಾಂಗವಾಗಿ ನಡೆಯಲಿ ಎಂದರು ಕಾರ್ಯಕ್ರಮದಲ್ಲಿ ಉದ್ಯಮಿ ಹರಿಯಪ್ಪ ಕೋಟ್ಯಾನ್, ಪ್ರಮುಖರಾದ ವೆಂಕಟೇಶ್ ನಾಯಕ್, ಶ್ರೀಕಾಂತ್ ಭಟ್, ಸುರೇಂದ್ರ, ಗಣೇಶ್, ಮಾಜಿ ನಗರಸಭ ಸದಸ್ಯೆ ಸವಿತಾ ಹರೀಶ್ ರಾಂ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಬನ್ನಂಜೆ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.ಸುಬ್ರಹ್ಮಣ್ಯ ಧನ್ಯವಾದವಿತ್ತರು. ಕೃತಿ ಮೂಡುಬೆಟ್ಟು, ಕಾರ್ಯಕ್ರಮ ನಿರೂಪಿಸಿದರು.