ಬೆಂ.ಗ್ರಾ ಜಿಲ್ಲೆಗೆ ಕಾವೇರಿ ನೀರು, ಮೆಟ್ರೋ ಕಲ್ಪಿಸೋ ಗುರಿ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ

KannadaprabhaNewsNetwork | Published : Jan 10, 2025 12:47 AM

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯಡಿ ಬಯಲು ಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರು ಹರಿಸುವುದು ಈ ಯೋಜನೆ ಉದ್ದೇಶವಾಗಿದೆ. ಮುಖ್ಯಮಂತ್ರಿಗಳು ಈಗಾಗಲೇ ಹಾಸನದಲ್ಲಿ ಚಾಲನೆ ನೀಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ದೊಡ್ಡಬಳ್ಳಾಪುರ ತಾಲೂಕಿನ ಲಕ್ಕೇನಹಳ್ಳಿ ಬಳಿ ಜಲಾಶಯ ನಿರ್ಮಿಸಿ ಎತ್ತಿನ ಹೊಳೆ ನೀರನ್ನು ಅಲ್ಲಿ ಶೇಖರಿಸಿ ಅಲ್ಲಿಂದ ನೀರನ್ನು ಸರಬರಾಜು ಮಾಡಬೇಕು. ಜಲಾಶಯಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಬಯಲು ಸೀಮೆಗೆ ನೀರು ಹರಿಸುವ ಗುರಿ ಹೊಂದಲಾಗಿದೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂದಾಜು 10 ಸಾವಿರ ಎಕರೆ ಕೈಗಾರಿಕಾ ಪ್ರದೇಶವಿದೆ. ಮುಂದಿನ ದಿನಗಳಲ್ಲಿ ಕೈಗಾರಿಕಾ ಪ್ರದೇಶ ಹೆಚ್ಚಾಗಬಹುದು. ಜಿಲ್ಲೆಯಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕಾವೇರಿ ನೀರು ಹರಿಸುವುದು, ಮೆಟ್ರೋ ಸಂಪರ್ಕ ಕಲ್ಪಿಸುವ ಗುರಿ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ 20- 30 ವರ್ಷಗಳ ದೂರದೃಷ್ಟಿಯನ್ನು ಇಟ್ಟುಕೊಂಡು ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಿ. ಶಾಶ್ವತ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯಡಿ ಬಯಲು ಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರು ಹರಿಸುವುದು ಈ ಯೋಜನೆ ಉದ್ದೇಶವಾಗಿದೆ. ಮುಖ್ಯಮಂತ್ರಿಗಳು ಈಗಾಗಲೇ ಹಾಸನದಲ್ಲಿ ಚಾಲನೆ ನೀಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ದೊಡ್ಡಬಳ್ಳಾಪುರ ತಾಲೂಕಿನ ಲಕ್ಕೇನಹಳ್ಳಿ ಬಳಿ ಜಲಾಶಯ ನಿರ್ಮಿಸಿ ಎತ್ತಿನ ಹೊಳೆ ನೀರನ್ನು ಅಲ್ಲಿ ಶೇಖರಿಸಿ ಅಲ್ಲಿಂದ ನೀರನ್ನು ಸರಬರಾಜು ಮಾಡಬೇಕು. ಜಲಾಶಯಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಬಯಲು ಸೀಮೆಗೆ ನೀರು ಹರಿಸುವ ಗುರಿ ಹೊಂದಲಾಗಿದೆ ಎಂದರು.

ಕಿಯೋನಿಕ್ಸ್ ಅಧ್ಯಕ್ಷ, ಶಾಸಕ ಶರತ್ ಕುಮಾರ್ ಬಚ್ಚೇಗೌಡ ಮಾತನಾಡಿ, ಹೊಸಕೋಟೆ ನಗರದಲ್ಲಿ 100 ಕೋಟಿ ರು.ಗಳ ವೆಚ್ಚದಲ್ಲಿ ನೆಲದಡಿ (ಅಂಡರ್ ಗ್ರೌಂಡ್) ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ವಿದ್ಯುತ್ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ಮುಕ್ತಾಯವಾದ ನಂತರ ಅವುಗಳನ್ನು ಪೂರ್ವ ಸ್ಥಿತಿಗೆ ತರುವುದು ಬಹಳ ಮುಖ್ಯವಾಗಿದೆ ಎಂದರು.

ಕೆರೆ ಅಂಗಳದಲ್ಲಿ ಸೋಲಾರ್ ಪ್ಲಾಂಟ್ ಸ್ಥಾಪಿಸಿ ಅದರಿಂದ ವಿದ್ಯುತ್ ತಯಾರಿಸುವ ಮೂಲಕ ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಹೊಸಕೋಟೆ ತಾಲೂಕಿನ ಆಯ್ದ ಕೆರೆಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ತ್ವರಿತವಾಗಿ ಮುಗಿಸಲು ಸಚಿವರಲ್ಲಿ ಮನವಿ ಮಾಡಿದರು.

ನೆಲಮಂಗಲ ಶಾಸಕ ಶ್ರೀನಿವಾಸ ಮಾತನಾಡಿ, ನೆಲಮಂಗಲ ತಾಲೂಕಿನಲ್ಲಿ ₹300 ಕೋಟಿ ಅನುದಾನದಡಿ 220 ಕೆ.ವಿ ವಿದ್ಯುತ್ ಉತ್ಪಾದನಾ ಉಪಕೇಂದ್ರ ನಿರ್ಮಾಣದ ಭೂಮಿ ಪೂಜೆ ನೆರವೇರಿಸಲು ಕ್ರಮ ವಹಿಸುವಂತೆ, ತಾಲೂಕಿಗೆ ನೆಲದಡಿ (ಅಂಡರ್ ಗ್ರೌಂಡ್) ವಿದ್ಯುತ್ ಕೇಬಲ್ ಅಳವಡಿಕೆಗೆ ಅನುದಾನ ಒದಗಿಸುವಂತೆ ಇಂಧನ ಸಚಿವರಲ್ಲಿ ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯ ಎಸ್. ರವಿ ಮಾತನಾಡಿ, ಬೇಸಿಗೆ ಸಮಯದಲ್ಲಿ ರೈತರಿಗೆ ಅನುಕೂಲವಾಗುವಂತೆ ಕೃಷಿ ಪಂಪ್‌ ಸೆಟ್‌ಗಳಿಗೆ ಹೆಚ್ಚುವರಿ ವಿದ್ಯುತ್ ಪೂರೈಸಲು ಕ್ರಮ ವಹಿಸಬೇಕು. ಸದ್ಯ ರಾತ್ರಿ ಹೊತ್ತಿನಲ್ಲಿ ವಿದ್ಯುತ್ ಹೆಚ್ಚು ನೀಡುವ ಬದಲು ಹಗಲು ಹೊತ್ತಿನಲ್ಲೇ ರೈತರಿಗೆ ಹೆಚ್ಚು ವಿದ್ಯುತ್ ನೀಡಬೇಕು ಎಂದರು.

ಇಂಧನ ಸಚಿವ ಕೆ.ಜೆ.ಜಾರ್ಜ್‌, ಜಿಲ್ಲಾಧಿಕಾರಿ ಡಾ.ಶಿವಶಂಕರ್‌ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.

Share this article