ಬೆಂಗಳೂರು ಅಪಾಯಕಾರಿ ಕಟ್ಟಡ ತೆರವಿಗೆ ಕಾಯ್ದೆ ತಿದ್ದುಪಡಿ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

KannadaprabhaNewsNetwork |  
Published : Oct 25, 2024, 01:47 AM ISTUpdated : Oct 25, 2024, 07:45 AM IST
dk shivakumar

ಸಾರಾಂಶ

ಅಪಾಯಕಾರಿ, ಶಿಥಿಲಗೊಂಡ ಹಾಗೂ ಅನಧಿಕೃತ ಕಟ್ಟಡ ತೆರವಿಗೆ ಕಾನೂನು ತಿದ್ದುಪಡಿ ಅಥವಾ ಸುಗ್ರೀವಾಜ್ಞೆ ಮೂಲಕ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

 ಬೆಂಗಳೂರು : ಅಪಾಯಕಾರಿ, ಶಿಥಿಲಗೊಂಡ ಹಾಗೂ ಅನಧಿಕೃತ ಕಟ್ಟಡ ತೆರವಿಗೆ ಕಾನೂನು ತಿದ್ದುಪಡಿ ಅಥವಾ ಸುಗ್ರೀವಾಜ್ಞೆ ಮೂಲಕ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ಮಳೆ ಅವಾಂತರ ಕುರಿತು ಗುರುವಾರ ಅಧಿಕಾರಿಗಳೊಂದಿಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ತುರ್ತು ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಅಗತ್ಯ ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರವಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಯಾವುದೇ ಆಸ್ತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಬಿಎಂಟಿಎಫ್, ಬಿಡಿಎ, ಬಿಬಿಎಂಪಿ, ಬಿಎಂಆರ್‌ಡಿಎ ಕೆಲವು ತಿದ್ದುಪಡಿ ತಂದು ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು ಎಂದರು.

ಈ ಹಿಂದೆ ನೀಡಲಾದ ಅಧಿಕಾರವನ್ನು 2020-21ರಲ್ಲಿ ಹಿಂಪಡೆಯಲಾಗಿದ್ದು, ಅದನ್ನು ಈಗ ಮತ್ತೆ ನೀಡಲಾಗುತ್ತಿದೆ. ನಗರದ ಕಂದಾಯ ಬಡಾವಣೆ ಅಥವಾ ಬೇರೆ ಬಡಾವಣೆಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ, ಒತ್ತುವರಿ ನಿಲ್ಲಿಸಲು ಸುಗ್ರೀವಾಜ್ಞೆ ತರಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗುವುದು ಎಂದು ತಿಳಿಸಿದರು.

ನಂಜಪ್ಪ ಗಾರ್ಡನ್‌ನಲ್ಲಿ 10/25 ಅಡಿ ನಿವೇಶನದಲ್ಲಿ ಐದು ಮಹಡಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ತೆರವುಗೊಳಿಸುವುದಕ್ಕೆ ಸೂಚಿಸಲಾಗಿದೆ. ಜತೆಗೆ, ಪ್ರತಿ ವಲಯದಲ್ಲಿ ಅಕ್ರಮ, ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ಜೀವಕ್ಕೆ ಅಪಾಯ ತರಬಹುದಾದ ಕಟ್ಟಡಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದ್ದೇನೆ ಎಂದರು.ಸಭೆಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇದ್ದರು.

ಸೋಮವಾರ ಕಟ್ಟಡ ಸರ್ವೇ, ಡ್ರೋನ್‌ ಮೂಲಕ ಕಣ್ಗಾವಲು: ನಿರ್ಮಾಣ ಹಂತದ ಕಟ್ಟಡಗಳ ಬಗ್ಗೆ ಸೋಮವಾರದಿಂದ ಸಮೀಕ್ಷೆ ನಡೆಸಲಾಗುವುದು. ಖಾಸಗಿ ಹಾಗೂ ಪಾಲಿಕೆಯಿಂದ ಈ ಸಮೀಕ್ಷೆ ನಡೆಸಲಾಗುವುದು. ಯಾವುದಾದರೂ ಕಟ್ಟಡ ಕಾನೂನುಬಾಹಿರವಾಗಿ ನಿರ್ಮಾಣವಾಗುತ್ತಿದೆಯೇ ಎಂದು ಪತ್ತೆ ಮಾಡಿ ನಿರ್ಮಾಣ ತಡೆಗಟ್ಟಲಾಗುವುದು. ಪ್ರತಿ ಕಟ್ಟಡದ ಫೋಟೋ ಹಾಗೂ ವಿಡಿಯೋಗಳನ್ನು ಸಂಗ್ರಹಿಸಲಾಗುವುದು. ಜಂಟಿ ಆಯುಕ್ತರ ನೇತೃತ್ವದಲ್ಲಿ ಡ್ರೋನ್ ಮೂಲಕ ಇದರ ಮೇಲ್ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದರು.

ರಾಜಕಾಲುವೆ ಪಕ್ಕ 50 ಅಡಿ ಬಫರ್‌, 300 ಕಿ.ಮೀ ರಸ್ತೆ: ರಾಜಕಾಲುವೆಯ ಅಕ್ಕಪಕ್ಕದಲ್ಲಿ 50 ಅಡಿಗಳಷ್ಟು ಅಂತರದಲ್ಲಿ ಯಾರೂ ಕಟ್ಟಡ ಕಟ್ಟುವಂತಿಲ್ಲ. ಇಂತಹ ಜಾಗದಲ್ಲಿ 300 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಮಾಡಲಾಗುವುದು. ಇದರಿಂದ ಒತ್ತುವರಿ ನಿಲ್ಲುತ್ತದೆ. ಜತೆಗೆ, ಮಳೆ ನೀರು ಹರಿಯಲು ನೆರವಾಗುತ್ತದೆ. ಯೋಜನೆಯ ಆರಂಭಿಕ ಹಂತಕ್ಕೆ ಹಣ ಮೀಸಲಿಡಲಾಗಿದೆ. ಈ ಭಾಗದ ಭೂ ಮಾಲೀಕರಿಗೆ ಟಿಡಿಆರ್ ಮೂಲಕ ಪರಿಹಾರ ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ನೀರು ಹರಿಯಲು ಕೆರೆ ನಡುವೆ ಸಂಪರ್ಕ ಜಾಲ: ಎಲ್ಲಾ ಕೆರೆಗಳ ನಡುವೆ ಸಂಪರ್ಕ ಏರ್ಪಡಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಸೂಚಿಸಲಾಗಿದೆ. ಬರಗಾಲದಲ್ಲಿ ಕೆರೆಗಳು ಬತ್ತಿ ಹೋಗಿದ್ದವು. ಕೆರೆಗಳು ತುಂಬಬೇಕು, ಅಂತರ್ಜಲ ಪುನಶ್ಚೇತನಗೊಳ್ಳಬೇಕು. ಹೀಗಾಗಿ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ವಲಯವಾರು ಸಮಿತಿ ರಚನೆ: ನಗರದಲ್ಲಿ ಅತಿವೃಷ್ಠಿ ಸಮಸ್ಯೆ ನಿವಾರಣೆಗಾಗಿ ಹಲವು ಪ್ರಮುಖ ತೀರ್ಮಾನ ಕೈಗೊಂಡಿದ್ದು, ಎಲ್ಲೆಲ್ಲಿ ಮಳೆನೀರು ವಸತಿ ಪ್ರದೇಶಗಳಿಗೆ ನುಗ್ಗಿ ಸಮಸ್ಯೆ ಎದುರಾಗುತ್ತಿದೆಯೋ ಅಲ್ಲಿ ಪರಿಹಾರಕ್ಕೆ ಯೋಜನೆ ರೂಪಿಸಿ, ಅಗತ್ಯವಿರುವ ಹಣಕಾಸಿನ ಅಂದಾಜು ನೀಡಲು ವಲಯವಾರು ಆಯುಕ್ತರು, ಮುಖ್ಯ ಎಂಜಿನಿಯರ್ ಹಾಗೂ ಮಳೆನೀರುಗಾಲುವೆ ನಿರ್ವಹಣೆ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಒಂದು ವಾರದ ಒಳಗಾಗಿ ವರದಿ ನೀಡುವಂತೆ ಡಿ.ಕೆ.ಶಿವಕುಮಾರ್‌ ಸೂಚಿಸಿದ್ದಾರೆ.

ಪ್ರವಾಹದ ನೀರು ಕೆರೆಗೆ ಹೋಗುವುದು ಹಾಗೂ ಕೆರೆಯಿಂದ ಕೋಡಿ ಬೀಳುವ ನೀರು ಸರಾಗವಾಗಿ ಹೋಗಲು ಅನುವಾಗುವಂತೆ ಗೇಟ್ ಅಳವಡಿಸಲು ಸೂಚಿಸಿದ್ದೇನೆ. ಇದಕ್ಕೆ ಬೇಕಾಗಿರುವ ಮೂಲಸೌಕರ್ಯ ತಯಾರಿ ಮಾಡಿಕೊಳ್ಳಲು ಬಿಡಿಎ, ಬಿಬಿಎಂಪಿ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದ್ದೇನೆ ಎಂದರು.

ಮನೆ ಬಿಡಲು ಒಪ್ಪದಿದ್ದರೆ ಮುಚ್ಚಳಿಕೆ ಬರೆದುಕೊಡಿ: ಕೇಂದ್ರಿಯ ವಿಹಾರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್‌ನ ಕೆಲವು ಕುಟುಂಬದವರು ಸ್ಥಳಾಂತರಗೊಳ್ಳಲು ಒಪ್ಪುತ್ತಿಲ್ಲ. ಹೀಗಾಗಿ, ಆ ಕುಟುಂಬದವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಹೇಳಿದರು.

ಬೀದಿ ವ್ಯಾಪಾರಿಗಳಿಗೆ ಮಾದರಿ ವ್ಯವಸ್ಥೆ ಜಾರಿ: ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ಸಮೀಕ್ಷೆ ಪೂರ್ಣಗೊಂಡ ಬಳಿಕ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಕೆಲವು ಕಡೆ ಬೀದಿ ವ್ಯಾಪಾರಿಗಳ ಮಾಫಿಯಾ ಕೂಡ ಇದೆ. ಯಾರದೋ ಜಾಗದಲ್ಲಿ ಮತ್ಯಾರೋ ಗುತ್ತಿಗೆ ಪಡೆದಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ಬೇರೆ ರಾಜ್ಯ ಹಾಗೂ ದೇಶಗಳಲ್ಲಿ ಯಾವ ಮಾದರಿ ಅಳವಡಿಸಲಾಗಿದೆ ಎಂದು ಮಾಹಿತಿ ಕಲೆಹಾಕಲಾಗುತ್ತಿದೆ. ಬೆಂಗಳೂರಿನಲ್ಲಿ ಮಾದರಿ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಡಿ.ಕೆ.ಶಿವಕುಮಾರ್‌ ಉತ್ತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಅಪಘಾತ ಸೈಕಲ್‌ ಸವಾರ ಸಾವು
ವಿದ್ಯುತ್‌ ತೊಂದರೆ ಸರಿಪಡಿಸದಿದ್ದರೇ ಅಹೋರಾತ್ರಿ ಧರಣಿ