ಯುದ್ಧಕ್ಕೆ ಬೆಂಗ್ಳೂರು ಮಿಲಿಟರಿ ಘಟಕಗಳು ಅಲರ್ಟ್

KannadaprabhaNewsNetwork |  
Published : May 10, 2025, 02:24 AM ISTUpdated : May 10, 2025, 04:44 AM IST
ಪೀಸ್ ಸ್ಟೇಷನ್’ | Kannada Prabha

ಸಾರಾಂಶ

ಭಾರತ-ಪಾಕಿಸ್ತಾನ ನಡುವೆ ಯುದ್ಧ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸೇನೆಯ ಭಾಷೆಯಲ್ಲಿ ‘ಪೀಸ್ ಸ್ಟೇಷನ್’ ಎಂದೇ ಕರೆಯಲ್ಪಡುವ ಬೆಂಗಳೂರು ನಗರದಲ್ಲಿರುವ ಸೇನಾ ಘಟಕಗಳು ಮತ್ತು ಸೇನೆಗೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳು, ವಿಭಾಗಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.

 ಬೆಂಗಳೂರು :  ಭಾರತ-ಪಾಕಿಸ್ತಾನ ನಡುವೆ ಯುದ್ಧ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸೇನೆಯ ಭಾಷೆಯಲ್ಲಿ ‘ಪೀಸ್ ಸ್ಟೇಷನ್’ ಎಂದೇ ಕರೆಯಲ್ಪಡುವ ಬೆಂಗಳೂರು ನಗರದಲ್ಲಿರುವ ಸೇನಾ ಘಟಕಗಳು ಮತ್ತು ಸೇನೆಗೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳು, ವಿಭಾಗಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಭಾರತೀಯ ಸೇನಾಪಡೆಗಳ ಬೆನ್ನೆಲುಬಾಗಿರುವ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಸೇನೆಯ 3 ವಿಭಾಗಗಳ ಶಕ್ತಿಯಾಗಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಬಾಹ್ಯಾಕಾಶ ಸಂಸ್ಥೆ ಇಸ್ರೋ, ರಕ್ಷಣಾ ಸಂಶೋಧನೆ ಕೇಂದ್ರ ಡಿಆರ್‌ಡಿಒ, ಎಡಿಇ, ಬಿಇಎಂಎಲ್ ಮತ್ತು ಅದಕ್ಕೆ ಸಂಬಂಧಿಸಿದ ಅನೇಕ ಉಪ ಕೇಂದ್ರಗಳು ಬೆಂಗಳೂರಿನಲ್ಲಿವೆ.

ಅಲ್ಲದೇ, ಸೇನೆಗೆ ಸೇವೆ ನೀಡುವ, ಮೂಲಸೌಕರ್ಯ, ಉಪಕರಣಗಳನ್ನು ಒದಗಿಸುವ ನೂರಾರು ಖಾಸಗಿ ಕಂಪನಿಗಳು, ಸೇನಾ ಘಟಕಗಳು ಉದ್ಯಾನ ನಗರಿಯಲ್ಲಿವೆ. ಈ ಸಂಸ್ಥೆಗಳಿಗೆ ನೀಡಿರುವ ಕೆಲವು ಟಾಸ್ಕ್‌ಗಳನ್ನು ಇನ್ನಷ್ಟು ತ್ವರಿತವಾಗಿ ಪೂರ್ಣಗೊಳಿಸಬೇಕು ಮತ್ತು ಮುಂಬರುವ ದಿನಗಳಲ್ಲಿ ಸೇವೆಗಳನ್ನು ತುರ್ತಾಗಿ ಒದಗಿಸಲು ಸರ್ವ ಸನ್ನದ್ಧವಾಗಿರುವಂತೆ ಸೂಚನೆ ಇದ್ದು, ಸೇನಾ ಸಿಬ್ಬಂದಿಗೆ ಈಗಾಗಲೇ ರಜೆ ರದ್ದುಗೊಳಿಸಲಾಗಿದೆ.

ಎಚ್‌ಎಎಲ್‌ ಅಲರ್ಟ್!

ಯುದ್ಧ ವಿಮಾನಗಳಾದ ಎಸ್‌ಯು 30 ನಿರ್ವಹಣೆ, ಎಲ್‌ಸಿಎ ತೇಜಸ್ ನಿರ್ಮಾಣ, ದಾಳಿ ಹೆಲಿಕಾಪ್ಟರ್ ಎಎಲ್‌ಎಚ್ ಸೇರಿದಂತೆ ಅನೇಕ ಮಾದರಿಯ ಹೆಲಿಕಾಪ್ಟರ್‌ ನಿರ್ಮಾಣ, ನಿರ್ವಹಣೆ ಮತ್ತಿತರ ಮಹತ್ವದ ಚಟುವಟಿಕೆಗಳು ಎಚ್‌ಎಎಲ್‌ನಲ್ಲಿ ನಡೆಯುತ್ತವೆ. ಈಗ ಈ ಎಲ್ಲಾ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಆಕಾಶದಿಂದ ಕಣ್ಣಿಟ್ಟ ಇಸ್ರೋ ಮಿಲಿಟರಿ ಮತ್ತು ಗೌಪ್ಯ ಕಾರ್ಯಾಚರಣೆಗೆ ಸಂಬಂಧಿಸಿದ ಇಸ್ರೋ ಸ್ಯಾಟಲೈಟ್‌ಗ‍ಳಾದ ಜಿ-ಸ್ಯಾಟ್, ಸಿಂಥೆಟಿಕ್ ಅಪಾರ್ಚರ್ ರಡಾರ್ (ಎಸ್‌ಎಆರ್), ಕಮ್ಯುನಿಕೇಷನ್ ಸ್ಯಾಟಲೈಟ್‌ಗಳು ಎಂದಿಗಿಂತಲೂ ಹೆಚ್ಚು ಅಲರ್ಟ್ ಆಗಿವೆ. ಅದರಲ್ಲೂ ಗಡಿ ಮತ್ತು ಗಡಿಯಾಚಗಿನ ಚಟುವಟಿಕೆಗಳ ಮೇಲೆ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸ್ಯಾಟಲೈಟ್ ಮಾನಿಟರ್ ಕೇಂದ್ರಗಳು ಹದ್ದಿನ ಕಣ್ಣಿಟ್ಟಿವೆ.

ತರಬೇತಿ ಕೇಂದ್ರಗಳಲ್ಲೂ ಸನ್ನದ್ಧ ಸ್ಥಿತಿ:

ಸೈನಿಕರು, ಅಗ್ನಿವೀರರು, ವೈದ್ಯಕೀಯ, ನರ್ಸಿಂಗ್, ಎಂಜಿನಿಯರಿಂಗ್, ಕಮ್ಯುನಿಕೇಷನ್ ಸೇರಿದಂತೆ ಸೇನೆಯ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುವ ಸೇನಾಧಿಕಾರಿಗಳು ಮತ್ತು ಸಿಬ್ಬಂದಿ ತರಬೇತಿ ಕೇಂದ್ರಗಳಾದ ಏರ್‌ಫೋರ್ಸ್ ಟೆಕ್ನಿಕಲ್ ಕಾಲೇಜ್ (ಎಎಫ್‌ಟಿಸಿ), ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ), ಕಮಾಂಡ್ ಆಸ್ಪತ್ರೆ ಮತ್ತು ನರ್ಸಿಂಗ್ ಕಾಲೇಜು ಸೇರಿದಂತೆ ಎಲ್ಲಾ ತರಬೇತಿ ಕೇಂದ್ರಗಳ ಸಿಬ್ಬಂದಿಗೆ ಸನ್ನದ್ಧ ಸ್ಥಿತಿಯ ಸೂಚನೆಯಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು ಪ್ರಮುಖ ಕೇಂದ್ರ: ಮೇಜರ್ ಜನರಲ್ ಎಂ.ಸಿ ನಂಜಪ್ಪಗಡಿಯಿಂದ ಸಾಕಷ್ಟು ಅಂತರದಲ್ಲಿರುವ ಕಾರಣ ಸೇನೆಗೆ ಸಂಬಂಧಿಸಿದ ತರಬೇತಿ ಮತ್ತು ಸಂಶೋಧನಾ ಕೇಂದ್ರಗಳು ಬೆಂಗಳೂರಿನಲ್ಲಿವೆ. ದೇಶದ ಸೇನಾ ವ್ಯವಸ್ಥೆಗೆ ಬೆಂಗಳೂರು ನರಮಂಡಲ ಇದ್ದಂತೆ. ಹೀಗಾಗಿ, ಈ ನಗರದ ಮೇಲೂ ಶತ್ರುಗಳ ಕಣ್ಣಿರುತ್ತದೆ ಎಂದು ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ಎಂ.ಸಿ ನಂಜಪ್ಪ ಹೇಳಿದ್ದಾರೆ. 

ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ನಮ್ಮ ವೈಮಾನಿಕ ಗಡಿ ರಕ್ಷಣಾ ವ್ಯವಸ್ಥೆ ಬಲಿಷ್ಠವಾಗಿದೆ. ಬೆಂಗಳೂರು ನಗರದವರೆಗೆ ಕ್ಷಿಪಣಿಗಳು ನುಸುಳಲು ಅವಕಾಶ ನೀಡದೆ ಗಡಿಯಲ್ಲೇ ಹೊಡೆದು ಹಾಕುತ್ತವೆ. ಪಾಕಿಸ್ತಾನ-ಭಾರತ ನಡುವಿನ ಅತ್ಯಂತ ಸಮೀಪದ ಗಡಿಯನ್ನೇ ಪರಿಗಣಿಸಿದರು ಸುಮಾರು 1,800 ಕಿ.ಮೀ ದೂರದಲ್ಲಿ ಬೆಂಗಳೂರು ನಗರವಿದೆ. ಆದರೆ, ಚೀನಾದ ನೆರವಿನೊಂದಿಗೆ ಅಭಿವೃದ್ಧಿಪಡಿಸಿರುವ ಕೆಲವು ಕ್ಷಿಪಣಿಗಳು 2,000 ಕಿ.ಮೀ ಮೇಲ್ಪಟ್ಟು ದೂರದವರೆಗೆ ಕ್ರಮಿಸಬಲ್ಲವು. ಹೀಗಾಗಿ, ಬೆಂಗಳೂರು ಅಲರ್ಟ್ ಸ್ಥಿತಿಯಲ್ಲಿರುತ್ತದೆ. ಇನ್ನು ಸೇನೆಗೆ ಬೆನ್ನೆಲುಬಾಗಿ ಅನೇಕ ಕೆಲಸಗಳು ಬೆಂಗಳೂರಿನಿಂದ ಆಗುತ್ತಿರುತ್ತವೆ. ಜನರು ಕೂಡ ಜವಾಬ್ದಾರಿಯಿಂದ ಇರಬೇಕು ಎಂದು ತಿಳಿಸಿದರು.

 ಆಪರೇಷನ್ ಸಿಂದೂರ ಬಳಿಕ ಜಮ್ಮು ಕಾಶ್ಮೀರದಲ್ಲಿ ಆಪರೇಷನ್ ಇಂಡೋರ್ (ಒಳಾಂಗಣ) ಆಗಬೇಕು. ನಮ್ಮ ದೇಶದ ವಿರುದ್ಧ ಕೆಲಸ ಮಾಡುವ ಶಕ್ತಿಗಳು ಎಲ್ಲೇ ಇದ್ದರೂ ಅವುಗಳನ್ನು ಮಟ್ಟ ಹಾಕಬೇಕು. ಆಗ ಶಾಂತಿ ನೆಲೆಸಲು ಸಾಧ್ಯ.

- ಎಂ.ಸಿ ನಂಜಪ್ಪ, ಮೇಜರ್ ಜನರಲ್(ನಿವೃತ್ತ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ