ಜಿಎಸ್‌ಟಿ ಅಧಿಕಾರಿ ಬಳಿ ಸುಲಿಗೆ : 3 ಪೇದೆಗಳ ಸೆರೆ

KannadaprabhaNewsNetwork | Updated : May 10 2025, 04:48 AM IST
Follow Us

ಸಾರಾಂಶ

ಅಪರಾಧ ಕೃತ್ಯಗಳಲ್ಲಿ ಪೊಲೀಸರ ಬಂಧನ ಮುಂದುವರೆದಿದ್ದು, ಈಗ ಮತ್ತೊಂದು ಸುಲಿಗೆ ಪ್ರಕರಣದಲ್ಲಿ ಚಿಕ್ಕಜಾಲ ಠಾಣೆಯ ಮೂವರು ಕಾನ್ಸ್‌ಸ್ಟೇಬಲ್‌ಗಳು ಮತ್ತು ಪತ್ರಕರ್ತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

 ಬೆಂಗಳೂರು : ಅಪರಾಧ ಕೃತ್ಯಗಳಲ್ಲಿ ಪೊಲೀಸರ ಬಂಧನ ಮುಂದುವರೆದಿದ್ದು, ಈಗ ಮತ್ತೊಂದು ಸುಲಿಗೆ ಪ್ರಕರಣದಲ್ಲಿ ಚಿಕ್ಕಜಾಲ ಠಾಣೆಯ ಮೂವರು ಕಾನ್ಸ್‌ಸ್ಟೇಬಲ್‌ಗಳು ಮತ್ತು ಪತ್ರಕರ್ತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ಚಿಕ್ಕಜಾಲ ಠಾಣೆ ಹೆಡ್‌ ಕಾನ್‌ಸ್ಟೇಬಲ್ ವಿಜಯ್‌ಕುಮಾರ್, ಕಾನ್‌ಸ್ಟೇಬಲ್‌ಗಳಾದ ಸಂತೋಷ್, ಮಂಜುನಾಥ್ ಹಾಗೂ ಚಿಕ್ಕಜಾಲದ ಯೂಟ್ಯೂಬರ್ ಪ್ರವೀಣ್ ಬಂಧಿತರಾಗಿದ್ದು, ಕೆಲ ದಿನಗಳ ಹಿಂದೆ ಜಿಎಸ್‌ಟಿ ಬಿಲ್ ಖರೀದಿಗೆ ಬಂದಿದ್ದ ಲೆಕ್ಕಪರಿಶೋಧಕ ನಾಗರಾಜು ಬಂಡಾರು ಅವರನ್ನು ಬೆದರಿಸಿ ₹6 ಲಕ್ಷ ವನ್ನು ಆರೋಪಿಗಳು ಸುಲಿಗೆ ಮಾಡಿದ್ದರೆಂದು ದೂರಲಾಗಿದೆ.

ಇತ್ತೀಚಿಗೆ ದೇವನಹಳ್ಳಿಯ ಔಷಧಿ ವ್ಯಾಪಾರಿ ತಬ್ರೇಜ್ ಅ‍ವರಿಗೆ ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿ ₹12 ಲಕ್ಷ ವಂಚಿಸಿದ್ದ ಪ್ರಕರಣದಲ್ಲಿ ಆರ್‌.ಟಿ.ನಗರ ಠಾಣೆಯ ಮೂವರು ಕಾನ್‌ಸ್ಟೇಬಲ್ ಬಂಧಿತರಾಗಿದ್ದರು. ಈ ಕೃತ್ಯ ಮರೆಯುವ ಮುನ್ನವೇ ಈಗ ಮುದ್ದೆ ಮುರಿಯಲು ಚಿಕ್ಕಜಾಲ ಮೂವರು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ಸೇರಿದ್ದಾರೆ. ಅಪರಾಧ ಪತ್ತೆ ಹಚ್ಚಬೇಕಾದ ಖಾಕಿಧಾರಿಗಳ ಈ ಕಳ್ಳಾಟದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಸುಲಿಗೆ ಮಾಡಿದ್ದು ಹೇಗೆ? ಸಹಕಾರದಲ್ಲಿ ತಮ್ಮ ಕುಟುಂಬದ ಜತೆ ನೆಲೆಸಿರುವ ಲೆಕ್ಕಪರಿಶೋಧಕ ನಾಗರಾಜು ಬಂಡಾರು ಅ‍ವರು, ವ್ಯಾಪಾರಿಗಳು ಹಾಗೂ ಉದ್ಯಮಿಗಳ ಜಿಎಸ್‌ಟಿ ಹಾಗೂ ಆದಾಯ ತೆರಿಗೆ ನಿರ್ವಹಣೆ ಕೆಲಸ ಮಾಡುತ್ತಾರೆ. ಅಂತೆಯೇ ಕೆಲ ದಿನಗಳ ಹಿಂದೆ ನಾಗರಾಜ್ ಅವರಿಗೆ ಜಿಎಸ್‌ಐಟಿ ಪಾವತಿ ಸಂಬಂಧ ರಕ್ಷಿತ್ ಸಂಪರ್ಕಿಸಿದ್ದ. ಅದಕ್ಕೊಪ್ಪಿದ ನಾಗರಾಜು, ಜಿಎಸ್‌ಟಿ ಬಿಲ್‌ಗೆ ಪುನೀತ್‌ಗೆ ಕೇಳಿದಾಗ ₹50 ಲಕ್ಷ ಮೌಲ್ಯದ ಜಿಎಸ್‌ಟಿ ಬಿಲ್‌ಗೆ ₹65 ಲಕ್ಷ ಕೊಡುವಂತೆ ಹೇಳಿದ್ದ.

ಅಂತೆಯೇ ಮೇ.5 ತನ್ನ ಸ್ನೇಹಿತನ ಜತೆಯಲ್ಲಿ ಪುನೀತ್ ಭೇಟಿಗೆ ಆತ ಸೂಚಿಸಿದ್ದ ಗೋಲ್ಡ್ ಫಿಂಚ್ ರೆಸಾರ್ಟ್‌ ಬಳಿಗೆ ನಾಗರಾಜ್ ತೆರಳಿದ್ದರು. ಅದೇ ರೆಸಾರ್ಟ್‌ಗೆ ರಕ್ಷಿತ್ ತೆರಳಿದ್ದರು. ಅದೇ ವೇಳೆ ಅಲ್ಲಿಗೆ ಬಂದ ಚಿಕ್ಕಜಾಲ ಠಾಣೆ ಪೊಲೀಸರು, ನಾಗರಾಜ್ ಅವರನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಪಾಸಣೆ ನೆಪದಲ್ಲಿ ನಾಟಕವಾಡಿದ್ದರು. ಬಳಿಕ ಅವರ ಬಳಿ ಇದ್ದ ₹6 ಲಕ್ಷ ಸುಲಿಗೆ ಮಾಡಿದ್ದ ಅವರು, ಮತ್ತೆ ಈ ರೀತಿಯ ವ್ಯವಹಾರ ನಡೆಸದಂತೆ ತಾಕೀತು ಮಾಡಿ ಪರಾರಿಯಾಗಿದ್ದರು.

ಆದರೆ ಪುನೀತ್ ಪತ್ತೆಯಾಗಲಿಲ್ಲ. ಕೆಲ ಹೊತ್ತಿನ ಬಳಿಕ ನಾಗರಾಜ್ ಅ‍ವರಿಗೆ ಕರೆ ಮಾಡಿದ್ದ ಆತ, ಮರುದಿನ ಪಿಜಿ ಬಳಿ ಬರುವಂತೆ ಹೇಳಿ ಕಳುಹಿಸಿದ್ದ. ಅದರಂತೆ ಮೇ.6 ಆತನ ಭೇಟಿಗೆ ತೆರಳಿದ್ದಾಗ ನಾಗರಾಜ್ ಮತ್ತೆ ಹೋಗಿದ್ದರು. ಈ ವೇಳೆ ನಾಗರಾಜ್ ಅವರಿಗೆ ಬೆದರಿಸಿ ಹಣ ದೋಚಲು ಪುನೀತ್ ತಂಡ ಸಿದ್ಧವಾಗಿತ್ತು. ಪಿಜಿ ಬಳಿಗೆ ಬಂದ ನಾಗರಾಜ್ ಅವರನ್ನು ಮಾತುಕತೆ ನೆಪದಲ್ಲಿ ಒಳಗೆ ಕರೆದೊಯ್ದು ಮಾರಕಾಸ್ತ್ರ ತೋರಿಸಿ ಬೆದರಿಸಿ ₹50 ಲಕ್ಷ ದೋಚಿ ಪುನೀತ್ ಹಾಗೂ ಆತನ ಸಹಚರರು ಪರಾರಿಯಾಗಿದ್ದರು. ಹೀಗೆ ಲೆಕ್ಕ ಪರಿಶೋಧಕರಿಂದ 2 ಬಾರಿ ಪೊಲೀಸರು ಹಾಗೂ ಅವರ ಸಹಚರರು ಹಣ ಸುಲಿಗೆ ಮಾಡಿದ್ದರು.

ಈ ಕೃತ್ಯದ ಬಗ್ಗೆ ಬಾಗಲೂರು ಠಾಣೆಗೆ ಸಂತ್ರಸ್ತ ನಾಗರಾಜು ದೂರು ಸಲ್ಲಿಸಿದ್ದರು. ಅದರನ್ವಯ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಮೂವರು ಪೊಲೀಸರು ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ತಪ್ಪಿಸಿಕೊಂಡಿರುವ ಮತ್ತಿಬ್ಬರ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಮೂಲಗಳು ಹೇಳಿವೆ.

ಖಾಕಿ ಬಾತ್ಮೀದಾರನೇ ಕಿಂಗ್ ಪಿನ್‌ ಯೂಟ್ಯೂಬ್ ನಲ್ಲಿ ‘ಟಾರ್ಗೆಟ್‌’ ಚಾನೆಲ್‌ ನಡೆಸುತ್ತಿದ್ದ ಪ್ರವೀಣ್‌, ಹಲವು ದಿನಗಳಿಂದ ಚಿಕ್ಕಜಾಲ ಠಾಣೆಯ ಕೆಲ ಪೊಲೀಸರ ಜತೆ ಸ್ನೇಹ ಹೊಂದಿದ್ದ. ಪೊಲೀಸರ ಬಾತ್ಮೀದಾರನಾಗಿದ್ದ ಆತ, ಲೆಕ್ಕಪರಿಶೋಧಕ ನಾಗರಾಜ್ ಅವರು ಕಪ್ಪು ಹಣ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ನಾವು ಅವರಿಂದ ಹಣ ವಸೂಲಿ ಮಾಡಬಹುದು ಎಂದು ಹೇಳಿ ಸುಲಿಗೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.