ರೈತರ ತೀವ್ರ ವಿರೋಧದ ಮಧ್ಯೆಯೂ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ ತೆಲಂಗಾಣ ರಾಜ್ಯಕ್ಕೆ 1.27 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ.
ವಿಜಯಪುರ : ರೈತರ ತೀವ್ರ ವಿರೋಧದ ಮಧ್ಯೆಯೂ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ ತೆಲಂಗಾಣ ರಾಜ್ಯಕ್ಕೆ 1.27 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ.
ಕೃಷಿ ಮತ್ತು ಕುಡಿಯುವ ನೀರಿನ ಉದ್ದೇಶಕ್ಕಾಗಿ 5 ಟಿಎಂಸಿ ನೀರನ್ನು ತೆಲಾಂಗಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಜುರಾಲಾ ಜಲಾಶಯಕ್ಕೆ ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ತೆಲಂಗಾಣ ರಾಜ್ಯ ಸರ್ಕಾರ ಪತ್ರ ಬರೆದು ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಫೆ.20 ಮತ್ತು 21ರಂದು 1.27 ಟಿಎಂಸಿ ನೀರನ್ನು ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ಕೂಡ ತಿಳಿಸಿದ್ದಾರೆ. ತೀವ್ರ ವಿರೋಧವಿದ್ದರೂ ತೆಲಂಗಾಣಕ್ಕೆ ನೀರು ಬಿಡುಗಡೆ ಮಾಡಿದ್ದು ಕೃಷ್ಣಾ ನದಿ ತೀರ ವ್ಯಾಪ್ತಿಯ ರೈತರು ಹಾಗೂ ರೈತ ಸಂಘದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ.
ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಒಂದು ಟಿಎಂಸಿ ನೀರು ಬಿಡುಗಡೆಗೊಳಿಸಲು ಸರ್ಕಾರದಿಂದ ಆದೇಶ ಬಂದಿತ್ತು. ಅದರಂತೆ ಫೆಬ್ರುವರಿ 20 ಹಾಗೂ 21ರಂದು ಆಲಮಟ್ಟಿಯಿಂದ ನಾರಾಯಣಪುರಕ್ಕೆ ನೀರು ಬಿಡಲಾಗಿದೆ. ಬಳಿಕ ಮಾನವೀಯತೆಯ ದೃಷ್ಟಿಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ತೆಲಂಗಾಣಕ್ಕೆ ನೀರು ಬಿಡುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ ತೆಲಂಗಾಣಕ್ಕೆ 1 ಟಿಎಂಸಿ ನೀರು ಬಿಡಲಾಗಿದೆ ಎಂದು ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ್ ಡಿ.ಬಸವರಾಜ ಅವರು ತಿಳಿಸಿದ್ದಾರೆ.
‘ಹೆಚ್ಚು ನೀರು ಇದ್ದಾಗ ಕೊಟ್ಟರೆ ತಪ್ಪೇನು?’
ಇದೇ ವೇಳೆ ‘ಕುಡಿಯುವ ನೀರಿನ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ನಮ್ಮಲ್ಲಿ ಹೆಚ್ಚು ನೀರಿದ್ದರೆ ಕೊಡುವುದರಲ್ಲಿ ತಪ್ಪೇನಿಲ್ಲ’ ಎಂದು ನೀರು ಬಿಡುಗಡೆ ಮಾಡಿರುವುದನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ಸಮರ್ಥಿಸಿಕೊಂಡಿದ್ದಾರೆ.
ಪ್ರತಿ ವರ್ಷಕ್ಕಿಂತ ಈ ವರ್ಷ ಮಳೆ ಹೆಚ್ಚಾಗಿದೆ. ನೀರು ಹೆಚ್ಚಿದೆ. ಈಗಿರುವ ನಮ್ಮ ಬೆಳೆಗೆ ಮಾರ್ಚ್ ಅಂತ್ಯದವರೆಗೆ ನೀರು ಕೊಡುತ್ತಾರೆ. ಮಾರ್ಚ್ ನಂತರ ಕುಡಿಯಲು ನೀರು ಉಳಿಸಿಕೊಂಡು ಮಾನವೀಯತೆ ದೃಷ್ಟಿಯಿಂದ ನೀರು ಕೊಡುವುದರಲ್ಲಿ ತಪ್ಪೇನಿಲ್ಲ. ನಮಗೆ ಕಷ್ಟವಿದ್ದಾಗ ಕೊಯ್ನಾ ಜಲಾಶಯದಿಂದ ಒಮ್ಮೆ ದುಡ್ಡು ಕೊಟ್ಟು ಹಾಗೂ ಮತ್ತೊಮ್ಮೆ ಮಾನವೀಯತೆ ದೃಷ್ಟಿಯಿಂದ ನೀರು ಬಿಡಿಸಿಕೊಂಡಿದ್ದೇವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂದು ನೀರು ಬಿಡುಗಡೆ ಮಾಡಲಾಗಿದೆ ಎನ್ನುವುದು ತಪ್ಪು ಎಂದು ಶಿವಾನಂದ ಪಾಟೀಲ ಹೇಳಿದ್ದಾರೆ.
ಮಾಹಿತಿ ಇಲ್ಲ: ಎಂಬಿಪಾ
ವಿಜಯಪುರ: ಆಲಮಟ್ಟಿ ಜಲಾಶಯದಿಂದ ತೆಲಂಗಾಣ ರಾಜ್ಯಕ್ಕೆ ನೀರು ಬಿಡುಗಡೆ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನೀರನ್ನು ಮಾನವೀಯತೆಯ ದೃಷ್ಟಿಯಿಂದ ಬಿಡಲಾಗಿದೆಯೋ? ಅಥವಾ ನೀರನ್ನು ಬಿಡಲೇ ಬೇಕಿತ್ತಾ ಎಂಬ ಬಗ್ಗೆ ತಿಳಿದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದ್ದಾರೆ.
ಬುಧವಾರ ಇಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ನಮ್ಮಲ್ಲಿ ಸಾಕಷ್ಟು ನೀರಿದೆ. ನಮಗೆ ಬೇಸಿಗೆ ಕಳೆಯಲು ಯಾವುದೇ ತೊಂದರೆ ಇಲ್ಲ. ಒಂದು ವೇಳೆ ನೀರು ಕಡಿಮೆ ಬಿದ್ದರೆ ಡೆಡ್ ಸ್ಟೋರೇಜ್ ನಿಂದ ಕೂಡ ನಾವು ನೀರನ್ನು ತಗೆಯಬಹುದಾಗಿದೆ ಎಂದು ಅವರು ಹೇಳಿದರು. ಅಧಿಕಾರಿಗಳು ನೀರು ಬಿಟ್ಟಿದ್ದಾರೆ ಎಂದರೆ ಎಲ್ಲವನ್ನೂ ಆಲೋಚಿಸಿಯೇ ಬಿಟ್ಟಿರುತ್ತಾರೆ ಎಂದು ಸಚಿವರು ಸಮರ್ಥಿಸಿಕೊಂಡರು.