ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಈಶ ಯೋಗ ಕೇಂದ್ರದಲ್ಲಿ ಸಂಸ್ಥಾಪಕ ಸದ್ಗುರು ನೇತೃತ್ವದಲ್ಲಿ ಬುಧವಾರ ಶಿವರಾತ್ರಿ ಉತ್ಸವ ಸಂಭ್ರಮದಿಂದ ನಡೆಯಿತು.
ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಈಶ ಯೋಗ ಕೇಂದ್ರದಲ್ಲಿ ಸಂಸ್ಥಾಪಕ ಸದ್ಗುರು ನೇತೃತ್ವದಲ್ಲಿ ಬುಧವಾರ ಶಿವರಾತ್ರಿ ಉತ್ಸವ ಸಂಭ್ರಮದಿಂದ ನಡೆಯಿತು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಬುಧವಾರ ಸಂಜೆ 6ರಿಂದ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೂ ವಿವಿಧ ಧಾರ್ಮಿಕ ಹಾಗೂ ಕಾರ್ಯಕ್ರಮಗಳು ನಡೆದವು.
ಸದ್ಗುರುಗಳು ಭಕ್ತರಿಗೆ ಮಧ್ಯರಾತ್ರಿ ಮಹಾಮಂತ್ರ ‘ಓಂ ನಮಃ ಶಿವಾಯ’ ದೀಕ್ಷೆಯನ್ನು ನೀಡಿದರು. ಜನರಿಗೆ ಧ್ಯಾನ ಮಾಡಲು ಅನುಕೂಲವಾಗಬಲ್ಲ 7 ನಿಮಿಷಗಳ ಮಾರ್ಗದರ್ಶನವನ್ನು ಒಳಗೊಂಡ ಆ್ಯಪ್ ಅನ್ನು ಅನಾವರಣಗೊಳಿಸಿದರು. ಬೆಳಗಿನ ಜಾವ 3:40ರ ಬ್ರಾಹ್ಮೀ ಮುಹೂರ್ತದಲ್ಲಿ ಜನರಿಗೆ ‘ಶಂಭೋ ಧ್ಯಾನ’ವನ್ನು ಹೇಳಿಕೊಟ್ಟರು. ಪ್ರಸಿದ್ಧ ಗಾಯಕರಾದ ಅಜಯ್-ಅತುಲ್, ಮುಕ್ತಿದಾನ್ ಗಧ್ವಿ ಮೊದಲಾದವರಿಂದ ಸಂಗೀತ ಕಾರ್ಯಕ್ರಮಗಳು ನಡೆದವು. ರಾತ್ರಿಯಿಡೀ ನಡೆದ ಸಾಂಪ್ರದಾಯಿಕ ಹಾಗೂ ಮಾರ್ಷಲ್ ಕಲೆಗಳ ಪ್ರದರ್ಶನ, ಆದಿಯೋಗಿಯ ದಿವ್ಯ ದರ್ಶನ, ನೃತ್ಯ, ಧ್ಯಾನ ಮೊದಲಾದವುಗಳಿಗೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದಂತೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
ಆದಿಯೋಗಿ ಮೂಲಕ ಯೋಗಕ್ಕೆ ಸದ್ಗುರು ಹೊಸ ರೂಪ: ಅಮಿತ್
ಕೊಯಮತ್ತೂರು: ‘ಜೀವನದ ಅಂತಿಮ ಗುರಿಯೇ ಶಿವತ್ವ. ಈಶ ಯೋಗಕೇಂದ್ರ ಯುವಜನತೆಯನ್ನು ಶಿವತ್ವದೊಂದಿಗೆ ಜೋಡಿಸುವ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಇಲ್ಲಿನ ಈಶ ಯೋಗಕೇಂದ್ರದಲ್ಲಿ ಬುಧವಾರ ನಡೆದ ಶಿವರಾತ್ರಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
‘ಧ್ಯಾನ ಮತ್ತು ಸಾಧನೆ ಮೂಢನಂಬಿಕೆಗಳಲ್ಲ, ಅವು ವಿಜ್ಞಾನದಲ್ಲಿ ಬೇರೂರಿವೆ. ಶಿವನು ಶಾಶ್ವತ. ಆತ ಪ್ರಜ್ಞೆಯನ್ನು ಪ್ರತಿನಿಧಿಸುತ್ತಾನೆ ಎಂಬುದನ್ನು ಸದ್ಗುರು ಸಾಬೀತುಪಡಿಸಿದ್ದಾರೆ. ಆದಿಯೋಗಿಯ ಮೂಲಕ ಸದ್ಗುರುಗಳು ಯೋಗಕ್ಕೆ ಹೊಸ ಆಯಾಮ ನೀಡಿದ್ದಾರೆ. ಹಾಗೆಯೇ, ಪ್ರಧಾನಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯ ಯೋಗ ದಿನದ ಮೂಲಕ ಯೋಗದತ್ತ ಜಾಗತಿಕ ಗಮನವನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಹೇಳಿದರು.
ರಾಜ್ಯಾದ್ಯಂತ ಶಿವ ನಾಮಸ್ಮರಣೆ
ಬೆಂಗಳೂರು : ಮಹಾಶಿವರಾತ್ರಿ ಅಂಗವಾಗಿ ರಾಜ್ಯಾದ್ಯಂತ ವಿವಿಧ ಶಿವನ ದೇಗುಲಗಳಲ್ಲಿ ಶಿವನಾಮ ಸ್ಮರಣೆ ಮಾಡುವ ಮೂಲಕ ಸಂಭ್ರಮಾಚರಣೆಯಿಂದ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು.
ಮಲೆಮಹದೇಶ್ವರ ಬೆಟ್ಟ, ಗೋಕರ್ಣ, ಕೋಟಿಲಿಂಗೇಶ್ವರ, ಧರ್ಮಸ್ಥಳದ ಮಂಜುನಾಥ, ಗಂಗಾಧರೇಶ್ವರ, ನಂಜನಗೂಡಿನ ಶ್ರೀಕಂಠೇಶ್ವರ, ಮುರುಡೇಶ್ವರ, ಹಂಪಿಯ ವಿರೂಪಾಕ್ಷ ದೇವಾಲಯ ಸೇರಿದಂತೆ ವಿವಿಧ ಶಿವನ ದೇಗುಲಗಳಲ್ಲಿ ಬೆಳಗ್ಗೆಯಿಂದಲೇ ಶಿವನ ಲಿಂಗಕ್ಕೆ ವಿಶೇಷ ಪೂಜೆ, ರುದ್ರಾಭಿಷೇಕ, ಅರ್ಚನೆ, ಬಿಲ್ವಾರ್ಚನೆ ಅಭಿಷೇಕ ಮಾಡಲಾಯಿತು.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ 5 ದಿನಗಳ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೇರವೇರಿದವು. ಸ್ವಾಮಿಗೆ ವಿಶೇಷ ಅಭಿಷೇಕ, ದೂಪದ ಅಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿಯೊಂದಿಗೆ ಬೇಡಗಂಪಣ ಸರದಿ ಅರ್ಚಕರು ಸಂಪ್ರದಾಯದಂತೆ ಪೂಜಾ ಕಾರ್ಯಕ್ರಮಗಳನ್ನು ನಡೆಸಿದರು.
ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ, ರುದ್ರಾಕ್ಷಿ ಮಂಟಪೋತ್ಸವ, ಬಸವ ವಾಹನ ಉತ್ಸವ, ಹುಲಿವಾಹನ ಉತ್ಸವ ಹರಕೆ ಹೊತ್ತ ಭಕ್ತರಿಂದ ದೂಪದ ಸೇವೆ, ಪಂಜಿನ ಸೇವೆ, ಉರುಳು ಸೇವೆ, ಮುಡಿಸೇವೆ ವಿವಿಧ ಸೇವೆಗಳೊಂದಿಗೆ ಇಷ್ಟಾರ್ಥ ಸಿದ್ಧಿಸುವಂತೆ ಮಾದೇಶ್ವರನಲ್ಲಿ ಭಕ್ತರು ನಿವೇದನೆ ಮಾಡಿಕೊಂಡರು.
ಇನ್ನೂ ಕೋಲಾರದ ಕೋಟಿಲಿಂಗೇಶ್ವರ ದೇವಾಲಯಕ್ಕೆ ಶಿವರಾತ್ರಿ ಪ್ರಯುಕ್ತ ಲಕ್ಷಾಂತರ ಭಕ್ತರ ಸಮೂಹವೇ ಹರಿದು ಬಂದು ಶಿವಲಿಂಗಳನ್ನು ಪ್ರತಿಷ್ಠಾಪನೆ ಮಾಡಿದರು. ದೇವಾಲಯದ ಅರ್ಚಕರಿಂದ 108 ಅಡಿ ಬೃಹತ್ ಶಿವಲಿಂಗಕ್ಕೆ ಮತ್ತು 51 ಅಡಿ ಎತ್ತರದ ಶಿವಲಿಂಗಕ್ಕೆ ಹಾಲು ತುಪ್ಪದ ಅಭಿಷೇಕ ಮಾಡಿ ಪುಷ್ಪರ್ಚನೆ ಮಾಡಲಾಯಿತು.
ಚಿಕ್ಕಬಳ್ಳಾಪುರ ಸಮೀಪದ ಇಶಾ ಕೇಂದ್ರದ ಆದಿಯೋಗಿ ದರ್ಶನಕ್ಕೂ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ, ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಾವೂರು ಶ್ರೀ ಮಹಾಲಿಂಗೇಶ್ವರ ದೇವಲಯಕ್ಕೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿ ಹಾಗೂ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ವಿಶೇಷ ಪೂಜೆ, ಅಭಿಷೇಕಾದಿ ಕೈಂಕರ್ಯಗಳು ನೆರವೇರಿದವು. ಭೈರವೈಕ್ಯಶ್ರೀ ಡಾ.ಬಾಲಗಂಗಾಧರನಾಥಸ್ವಾಮಿ ಅವರ ಪಾದುಕಾಭಿಷೇಕವನ್ನು ಚುಂಚಶ್ರೀಗಳು ಸಾಂಗವಾಗಿ ನೆರವೇರಿಸಿದರು.
ಗೋಕರ್ಣದ ಮಹಾಬಲೇಶ್ವರ ದೇವಾಲಯ, ಮುರುಡೇಶ್ವರ, ಹಂಪಿ ವಿರುಪಾಕ್ಷೇಶ್ವರ, ಹುಬ್ಬಳ್ಳಿಯ ಸಿದ್ದಾರೂಢ ಮಠದಲ್ಲಿ ಶಿವರಾತ್ರಿ ಪ್ರಯುಕ್ತ ಜನಸಾಗರವೇ ಹರಿದು ಬಂದಿತ್ತು. ಮುಂಜಾನೆಯಿಂದಲೇ ಜನರು ಶಿವನ ದೇಗುಲಗಳಲ್ಲಿ ಸರದಿಯಲ್ಲಿ ನಿಂತು ದರ್ಶನ ಪಡೆದರು. ಗೋಕರ್ಣದಲ್ಲಿ ಆತ್ಮಲಿಂಗ ದರ್ಶನಕ್ಕೆ 50 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು. ಮುರುಡೇಶ್ವರಕ್ಕೂ 20 ಸಾವಿರಕ್ಕೂ ಹೆಚ್ಚು ಭಕ್ತರು ಬಂದಿದ್ದರೆ, ಹಂಪಿಗೆ ಸುಮಾರು 12 ಸಾವಿರ ಭಕ್ತರು ಆಗಮಿಸಿ ವಿರೂಪಾಕ್ಷೇಶ್ವರನ ದರ್ಶನ ಪಡೆದರೆಂದು ಅಂದಾಜಿಸಲಾಗಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೂ ಸುಮಾರು 2 ಲಕ್ಷ ಜನರು ಆಗಮಿಸಿದ್ದರೆಂದು ಅಂದಾಜಿಸಲಾಗಿದೆ.
ದಕ್ಷಿಣ ಕಾಶಿಯಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರನ ಸನ್ನಿಧಿಗೆ ಭಕ್ತಸಾಗರವೇ ಭಕ್ತರ ಹರಿದು ಬಂದಿತ್ತು. ಮುಂಜಾನೆ ಯಿಂದಲೇ ಭಕ್ತರು ಕಪಿಲಾ ನದಿಯಲ್ಲಿ ಮುಳುಗಿ ಮಿಂದೆದ್ದರು. ಭಕ್ತರಿಂದ ಉರುಳು ಸೇವೆ, ಧೂಪಸೇವೆ, ತುಲಾಭಾರ ಸೇವೆಗಳನ್ನು ನೆರವೇರಿಸಿದರು. ಕಪಿಲಾ ನದಿಯಲ್ಲಿ ದೀಪಗಳನ್ನು ತೇಲಿ ಬಿಟ್ಟು ಹರ್ಷ ವ್ಯಕ್ತಪಡಿಸಿದರು. ಮಂಗಳವಾರ ರಾತ್ರಿಯೇ ದೇವಾಲಯದ ಕೈಸಾಲೆಗಳಲ್ಲಿ ರಾತ್ರಿ ಕಳೆದ ಭಕ್ತರು, ಮಹಾಶಿವರಾತ್ರಿಯ ಜಾಗರಣೆಯ ಪ್ರಯುಕ್ತ ರಾತ್ರಿಯಿಡೀ ಶಿವನಾಮ ಸ್ಮರಣೆ, ಜಾಗರಣೆ ಮಾಡುವ ಮೂಲಕ ಜನರು ಭಕ್ತಿ ಸಾಗರದಲ್ಲಿ ಮಿಂದೆದ್ದು ದೇವರ ಕೃಪೆಗೆ ಪಾತ್ರರಾದರು.ಶಿವಲಿಂಗದ ಮೇಲೆ 1 ವಾರ ಸೂರ್ಯನ ರಶ್ಮಿ:
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠದ ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ದಿನದಿಂದ 1 ವಾರದ ತನಕ ಸೂರ್‍ಯರಶ್ಮಿ ಶಿವಲಿಂಗದ ಮೇಲೆ ಬೀಳುತ್ತದೆ.