ಸಾವಿರ ವರ್ಷದ ಇತಿಹಾಸವಿರುವ ಗುಜರಾತ್‌ನ ಸೋಮನಾಥ ಜ್ಯೋತಿರ್ಲಿಂಗವನ್ನು ಮಹಾ ಶಿವರಾತ್ರಿ ಅಂಗವಾಗಿ ದೇಶ-ವಿದೇಶಗಳ ಭಕ್ತರು ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್‌ನಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಣ್ತುಂಬಿಕೊಂಡಿದ್ದು ವಿಶೇಷವಾಗಿತ್ತು.
ಬೆಂಗಳೂರು : ಸಾವಿರ ವರ್ಷದ ಇತಿಹಾಸವಿರುವ ಗುಜರಾತ್‌ನ ಸೋಮನಾಥ ಜ್ಯೋತಿರ್ಲಿಂಗವನ್ನು ಮಹಾ ಶಿವರಾತ್ರಿ ಅಂಗವಾಗಿ ದೇಶ-ವಿದೇಶಗಳ ಭಕ್ತರು ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್‌ನಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಣ್ತುಂಬಿಕೊಂಡಿದ್ದು ವಿಶೇಷವಾಗಿತ್ತು.
ಶಿವರಾತ್ರಿ ಅಂಗವಾಗಿ ಬುಧವಾರ ಬೆಳಗ್ಗಿನಿಂದ ರಾತ್ರಿಯೆಲ್ಲ ಆರ್ಟ್ ಆಫ್ ಲಿವಿಂಗ್‌ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ರವಿಶಂಕರ್ ಗುರೂಜಿ ಅವರ ನೇತೃತ್ವದಲ್ಲಿ ಹಲವು ಕಾರ್ಯಕ್ರಮ ಆಯೋಜಿಸಿದ್ದು, ಸೋಮನಾಥ ಜ್ಯೋತಿರ್ಲಿಂಗ ದರ್ಶನ ಈ ಬಾರಿಯ ವಿಶೇಷವಾಗಿತ್ತು. ಸುಮಾರು 180 ದೇಶಗಳ ಭಕ್ತರು ಪ್ರತ್ಯಕ್ಷವಾಗಿ ಮತ್ತು ಆನ್‌ಲೈನ್‌ನಲ್ಲಿ ಕಾರ್ಯಕ್ರಮ ವೀಕ್ಷಿಸಿ ಭಕ್ತಿ ಪರವಶರಾದರು.
ಮಹಮದ್ ಘಜ್ನಿಯು ಸಾವಿರ ವರ್ಷದ ಹಿಂದೆ ದಾಳಿ ನಡೆಸಿ ಸೋಮನಾಥ ದೇವಾಲಯ ಮತ್ತು ಅದರಲ್ಲಿದ್ದ 12 ಜ್ಯೋತಿರ್ಲಿಂಗಳ ಪೈಕಿ ಮೊದಲನೆಯದಾದ ಜ್ಯೋತಿರ್ಲಿಂಗಕ್ಕೆ ಹಾನಿ ಉಂಟು ಮಾಡಿದ. ಆಗ ಕೆಲ ಬ್ರಾಹ್ಮಣರು ಆ ಜ್ಯೋತಿರ್ಲಿಂಗದ ಚೂರನ್ನು ತಮಿಳುನಾಡಿಗೆ ತೆಗೆದುಕೊಂಡು ಬಂದು ಅದಕ್ಕೆ ಚಿಕ್ಕ ಶಿವಲಿಂಗದ ರೂಪ ನೀಡಿ ಹಲವು ತಲೆಮಾರುಗಳಿಂದ ರಹಸ್ಯವಾಗಿ ಪೂಜಿಸುತ್ತಿದ್ದರು ಎಂದು ಆರ್ಟ್ ಆಫ್ ಲಿವಿಂಗ್ ತಿಳಿಸಿದೆ.
ರಹಸ್ಯವಾಗಿ ಶಿವಲಿಂಗ ಪೂಜೆ:
100 ವರ್ಷದ ಹಿಂದೆ ಸಂತ ಪ್ರಣವೇಂದ್ರ ಸರಸ್ವತಿ ಅವರು ಕಂಚಿಯ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮೀಜಿ ಅವರಿಗೆ ಜ್ಯೋತಿರ್ಲಿಂಗವನ್ನು ಹಸ್ತಾಂತರಿಸಲು ಮುಂದಾದಾಗ ಇನ್ನೂ ಒಂದು ಶತಮಾನ ಜ್ಯೋತಿರ್ಲಿಂಗವನ್ನು ರಹಸ್ಯವಾಗಿರಿಸುವಂತೆ ಸ್ವಾಮೀಜಿ ಸೂಚಿಸಿದ್ದರು. ಈ ವರ್ಷ ವಾರಸುದಾರರಾದ ಸೀತಾರಾಮ ಶಾಸ್ತ್ರಿಗಳು ಕಂಚಿ ಶಂಕರಾಚಾರ್ಯರನ್ನು ಭೇಟಿಯಾದಾಗ ಸನಾತನ ಧರ್ಮದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬೆಂಗಳೂರಿನಲ್ಲಿರುವ ಸಂತ ರವಿಶಂಕರ್ ಗುರೂಜಿ ಅವರಿಗೆ ಹಸ್ತಾಂತರಿಸುವಂತೆ ಸೂಚಿಸಿದ್ದರು. ಅದರಂತೆ ಜ್ಯೋತಿರ್ಲಿಂಗವನ್ನು ಜನವರಿಯಲ್ಲಿ ಹಸ್ತಾಂತರಿಸಲಾಗಿತ್ತು ಎಂದು ಆರ್ಟ್ ಆಫ್ ಲಿವಿಂಗ್ ಪ್ರಕಟಣೆ ತಿಳಿಸಿದೆ.
ಶಿವರಾತ್ರಿ ಹಿನ್ನೆಲೆಯಲ್ಲಿ ವಿಶಾಲಾಕ್ಷಿ ಮಂಟಪದ ಸಮೀಪ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ರಾಜ ಕುಮಾರಿ ಅವರ ಸಿರಿಕಂಠದಲ್ಲಿ ಹೊರಹೊಮ್ಮಿದ ಭಕ್ತಿ ಗೀತೆಗಳು ಪ್ರೇಕ್ಷಕರ ಮನಸೂರೆಗೊಂಡವು. ರವಿಶಂಕರ್ ಗುರೂಜಿ ಅವರು ಭಕ್ತರಿಗೆ ಆಶೀರ್ವಚನ ನೀಡಿದರು. ಸೋಮನಾಥ ಜ್ಯೋತಿರ್ಲಿಂಗಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು.
ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್‌ನಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ರವಿಶಂಕರ್ ಗುರೂಜಿ ಅವರು ಸೋಮನಾಥ ಜ್ಯೋತಿರ್ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು.