ನಮ್ಮ ಊರಿನ ಹೆಸರನ್ನು ನಾವು ಹೇಗೆ ಇಟ್ಟುಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತಿಗೆ ಕಿಮ್ಮತ್ತು ನೀಡುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀಕ್ಷ್ಣವಾಗಿ ಹೇಳಿದ್ದಾರೆ.
ಬೆಂಗಳೂರು : ನಮ್ಮ ಊರಿನ ಹೆಸರನ್ನು ನಾವು ಹೇಗೆ ಇಟ್ಟುಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತಿಗೆ ಕಿಮ್ಮತ್ತು ನೀಡುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀಕ್ಷ್ಣವಾಗಿ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಶಿಫಾರಸುಗಳು ಬಂದಿವೆ. ಆದರೆ, ಕುಮಾರಸ್ವಾಮಿ ಮಾತ್ರ ಕೇಂದ್ರ ಗೃಹ ಸಚಿವರ ಬಳಿ ಹೋಗಿ ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದಿದ್ದಾರೆ. ಅದಕ್ಕಾಗಿಯೇ ಕೇಂದ್ರ ಗೃಹ ಸಚಿವರು ಇದು ಕಾರ್ಯಸಾಧುವಲ್ಲ ಎಂದು ಹೇಳಿದ್ದಾರೆ. ಈಗ ಆ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ ಎಂದರು.
ಕುಮಾರಸ್ವಾಮಿ ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ. ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಎಂಬುದನ್ನು ತಿಳಿಸಲಿ. ಅವರು ಅಧಿಕಾರದಲ್ಲಿದ್ದಾಗ ಬಿಬಿಎಂಪಿ ವ್ಯಾಪ್ತಿ ವಿಸ್ತರಿಸಿದ್ದೇಕೆ ಎಂಬುದನ್ನು ಹೇಳಲಿ. ಬೆಂಗಳೂರು ಈಗ ಮತ್ತಷ್ಟು ಬೆಳೆಯುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಪ್ರತ್ಯೇಕ ಬೆಂಗಳೂರಿನ ರೀತಿಯಾಗಿದೆ. ಈ ಕಾರಣದಿಂದಾಗಿ ಬಿಬಿಎಂಪಿ ವಿಭಜಿಸಲು ಚರ್ಚಿಸಲಾಗುತ್ತಿದೆ. ಟೀಕೆ ಮಾಡುವವರು ಮಾಡಲಿ ನಾವು ಪ್ರಗತಿ ಮಾರ್ಗದಲ್ಲಿ ಮುನ್ನಡೆಯುತ್ತೇವೆ ಎಂದರು.
ಟನಲ್ ರಸ್ತೆಗೆ ಬಿಜೆಪಿ ವಿರೋಧದ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಹಿಂದೆ ಕೆ.ಜೆ. ಜಾರ್ಜ್ ಅವರು ಸ್ಟೀಲ್ ಬ್ರಿಡ್ಸ್ ಮಾಡಲು ಮುಂದಾದಾಗ ಬಿಜೆಪಿ ನಾಯಕರು ವಿರೋಧಿಸಿದ್ದರು. ಈಗ ಮತ್ತೆ ವಿರೋಧ ಮಾಡುತ್ತಿದ್ದಾರೆ. ಅವರ ಟೀಕೆಯನ್ನು ಸ್ವಾಗತಿಸುತ್ತೇನೆ. ಅವರು ಟೀಕೆ ಮಾಡುತ್ತಿರಲಿ, ನಾವು ಕೆಲಸ ಮಾಡುತ್ತಿರುತ್ತೇವೆ. ಧೀರ್ಘಾವಧಿ ಪರಿಹಾರಕ್ಕಾಗಿ ಸುರಂಗ ಮಾರ್ಗ ಸೇರಿದಂತೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದು ವಿವರಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತ್ಯಾಜ್ಯ ವಿಲೇವಾರಿ ಗುತ್ತಿಗೆ ಸಂಬಂಧಿಸಿದಂತೆ ಹೈಕೋರ್ಟ್ ನಮಗೆ ಅವಕಾಶ ನೀಡಿಲ್ಲ. ಆದರೂ, ನಾನು 15 ಸಾವಿರ ಕೋಟಿ ರು. ಭ್ರಷ್ಟಾಚಾರ ಎಸಗಿದ್ದೇನೆ ಎಂದು ಕುಮಾರಸ್ವಾಮಿ ಸುಳ್ಳು ಆರೋಪ ಮಾಡುತ್ತಾರೆ. ನಾನು ಅದನ್ನೆಲ್ಲ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಯಾರು ಕಿಕ್‌ಬ್ಯಾಕ್ ನೀಡಿದ್ದಾರೆ ಎಂಬುದು ಗೊತ್ತಾಗಬೇಕು. ಹೀಗಾಗಿ ಪ್ರಕರಣವನ್ನು ಸಿಬಿಐಗೆ ಕೊಡಲಿ. ಕುಮಾರಸ್ವಾಮಿ ಸಂಸದರಾಗುವ ಮುನ್ನ ಕಸ ಹೊಡೆದು ಅಭ್ಯಾಸವಿದೆ. ಏಕೆಂದರೆ ಅವರು ಹಿಂದೆ ತ್ಯಾಜ್ಯ ಸಾಗಿಸುವ ಲಾರಿ ಇಟ್ಟುಕೊಂಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.