ಕನ್ನಡಪ್ರಭ ವರದಿಯಿಂದ 12 ಹಳ್ಳಿಗೆ ಕುಡಿವ ನೀರು : ತುರ್ತು ಸ್ಪಂದಿಸಿದ ಸಿಎಂ ಕಚೇರಿ

Published : Mar 11, 2025, 08:59 AM IST
UN report on Packaged drinking water bottle

ಸಾರಾಂಶ

ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಯಕ್ತಾಪುರದ ನೀರಿನ ಸಮಸ್ಯೆ ಕುರಿತಂತೆ ‘ಕನ್ನಡಪ್ರಭ’ದಲ್ಲಿ ಪ್ರಕಟವಾದ ವರದಿಗೆ ಮುಖ್ಯಮಂತ್ರಿಗಳ ಕಚೇರಿ ಸ್ಪಂದಿಸಿದೆ.

 ಯಾದಗಿರಿ : ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಯಕ್ತಾಪುರದ ನೀರಿನ ಸಮಸ್ಯೆ ಕುರಿತಂತೆ ‘ಕನ್ನಡಪ್ರಭ’ದಲ್ಲಿ ಪ್ರಕಟವಾದ ವರದಿಗೆ ಮುಖ್ಯಮಂತ್ರಿಗಳ ಕಚೇರಿ ಸ್ಪಂದಿಸಿದೆ. ಯಕ್ತಾಪುರ ಸೇರಿ ಸುತ್ತಮುತ್ತಲ 12 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯ ಭರವಸೆ ದೊರೆತಿದ್ದು, ಒಂದೂವರೆ ವರ್ಷದಲ್ಲಿ ಯೋಜನೆ ಜಾರಿಯಾಗಲಿದೆ.

ತಕ್ಷಣದ ಕ್ರಮವಾಗಿ ಟ್ಯಾಂಕರ್‌ ಮೂಲಕ ದಿನಂಪ್ರತಿ ಶುದ್ಧ ನೀರು ಸರಬರಾಜು ಮಾಡಲಾಗುವುದು. ಅಲ್ಲದೆ ಕಲ್ಯಾಣ ಕರ್ನಾಟಕ ಪ್ರದೇಶಾವೃದ್ಧಿ ಮಂಡಳಿ 65 ಲಕ್ಷ ರು. ಅನುದಾನದಡಿ ಒಂದು ಹೊಸ ತೆರೆದ ಬಾವಿ ನಿರ್ಮಾಣಕ್ಕೆ ಟೆಂಡರ್‌ ಆಗಿದ್ದು, ಎರಡು ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಯಾದಗಿರಿ ಸಿಇಒ ಲವೀಶ್‌ ಒರಡಿಯಾ ತಿಳಿಸಿದ್ದಾರೆ.

ಮಾ.5ರಂದು ‘ಕನ್ನಡಪ್ರಭ’ದಲ್ಲಿ ‘ಕಬ್ಬಿಣದ ಬುಟ್ಟೀಲಿ ಕುಳಿತು ಸ್ನಾನ, ಅದೇ ನೀರು ಬಟ್ಟೆ ಸ್ವಚ್ಛತೆಗೆ ಬಳಕೆಗೆ’ ಶೀರ್ಷಿಕೆಯಡಿ ಪ್ರಕಟಗೊಂಡಿದ್ದ ವಿಶೇಷ ವರದಿಗೆ ಸ್ಪಂದಿಸಿದ ಮುಖ್ಯಮಂತ್ರಿಯವರ ಸಚಿವಾಲಯದ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರು, ಈ ಕುರಿತು ಪರಿಶೀಲಿಸಿ ಕೈಗೊಂಡ ಕ್ರಮದ ಬಗ್ಗೆ ತಕ್ಷಣವೇ ವರದಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಯಾದಗಿರಿ ಸಿಇಒ ಲವೀಶ್‌ ಒರಡಿಯಾ ಹಾಗೂ ಮತ್ತಿತರ ಅಧಿಕಾರಿಗಳ ತಂಡ, ಯಕ್ತಾಪುರ ಸೇರಿ ಸುತ್ತಮುತ್ತಲಿನ 12 ಗ್ರಾಮಗಳಿಗೆ ನಾರಾಯಣಪುರ ಜಲಾಶಯದಿಂದ ನೀರನ್ನು ಎತ್ತಿ, ಕಾಲುವೆಗಳ ಮೂಲಕ ಶಾಶ್ವತ-ನಿರಂತರ ಕುಡಿಯುವ ನೀರಿನ ಯೋಜನೆ ರೂಪಿಸಿರುವುದಾಗಿ ತಿಳಿಸಿದ್ದಾರೆ.

ಯಕ್ತಾಪುರ ಗ್ರಾಮದ ಆಶ್ರಯ ಕಾಲೋನಿ, ಕಸ್ತೂರ್‌ ಬಾ ವಸತಿ ಶಾಲೆ ಹಾಗೂ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಸುತ್ತಮುತ್ತ 12ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕುರಿತ ‘ಕನ್ನಡಪ್ರಭ’ ವರದಿ ಸಂಚಲನ ಮೂಡಿಸಿತ್ತು. ವಿಧಾನ ಪರಿಷತ್ತಿನಲ್ಲಿ ಸದಸ್ಯ ಬಿ.ಜಿ. ಪಾಟೀಲ್‌ ಅವರು ವರದಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ಮಾ.6ರಂದು ಗ್ರಾಮಕ್ಕೆ ತೆರಳಿದ್ದ ಸಿಇಒ ಲವೀಶ ಒರಡಿಯಾ, ಕೈಗೊಂಡ ಕ್ರಮಗಳ ಬಗ್ಗೆ ಸಿಎಂ ಕಚೇರಿಗೆ ವರದಿ ನೀಡಿದ್ದಾರೆ.

ಅಲ್ಲದೆ ಖಾಸಗಿ ಬೋರ್‌ವೆಲ್‌ಗಳ ಗುರುತಿಸಿ ಅಲ್ಲಿಂದ ಜನರಿಗೆ ನೀರು ಪೂರೈಕೆ ಕುರಿತಂತೆ ಕ್ರಮದ ಬಗ್ಗೆಯೂ ಅವರು ವರದಿಯಲ್ಲಿ ಮಾಹಿತಿ ನೀಡಿದ್ದಾರೆ.

ಇನ್ನು ಶಾಶ್ವತ-ನಿರಂತರ ಕುಡಿಯುವ ನೀರಿನ ಪೂರೈಕೆ ವಿಚಾರವಾಗಿ, ನಾರಾಯಣಪುರದ ಬಸವ ಸಾಗರ ಜಲಾಶಯದಿಂದ ಯಕ್ತಾಪುರ ಗ್ರಾಮ ಪಂಚಾಯಿತಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ನೀರು ಪೂರೈಕೆ ಮಾಡಲು ಸುಮಾರು 43 ಕಿ.ಮೀ. ಪೈಪ್‌ಲೈನ್‌ ಕಾಮಗಾರಿ ಕೈಗೊಳ್ಳಲಾಗುತ್ತಿದೆ. 23 ಕಿ.ಮೀ. ಬಾಕಿ ಕಾಮಗಾರಿ ಪೂರ್ಣಗೊಂಡ ನಂತರ ಯಕ್ತಾಪುರ ಹಾಗೂ ಇದರ ವ್ಯಾಪ್ತಿಯ 12 ಗ್ರಾಮಗಳಿಗೆ ನಿರಂತರ ನೀರು ಸರಬರಾಜು ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುತ್ತದೆ. ಈ ಕಾಮಗಾರಿ ಪೂರ್ಣಗೊಳ್ಳಲು ಒಂದೂವರೆ ವರ್ಷ ಅವಧಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ನೀರಿನ ಸಮಸ್ಯೆ ಉಲ್ಬಣಿಸದಂತೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮುಂತಾದ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಶಾಶ್ವತ-ನಿರಂತರ ನೀರು ಸರಬರಾಜು ಪೂರೈಕೆಗೆ ಯೋಜನೆ ಕೈಗೊಳ್ಳಲಾಗಿದೆ.

-ಲವೀಶ ಒರಡಿಯಾ, ಸಿಇಒ, ಜಿ.ಪಂ. ಯಾದಗಿರಿ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ