ಸಹಕಾರಿ ಬ್ಯಾಂಕಿಂದ ರನ್ಯಾಗೆ ಸಿಕ್ಕಿತ್ತು ₹10 ಲಕ್ಷ! ಜಮೀನು ಮಂಜೂರಾತಿಗೆ ಬಿಜೆಪಿ ಸರ್ಕಾರದಲ್ಲಿದ್ದ ಪ್ರಭಾವಿ ನೆರವು?

ಸಾರಾಂಶ

ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದ ಆರೋಪಿ, ನಟಿ ರನ್ಯಾ ರಾವ್ ಮಾಲಿಕತ್ವದ ಖಾಸಗಿ ಕಂಪನಿಗೆ ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) 12 ಎಕರೆ ಭೂ ಮಂಜೂರಾತಿ ಹಗರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.

  ಬೆಂಗಳೂರು : ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದ ಆರೋಪಿ, ನಟಿ ರನ್ಯಾ ರಾವ್ ಮಾಲಿಕತ್ವದ ಖಾಸಗಿ ಕಂಪನಿಗೆ ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) 12 ಎಕರೆ ಭೂ ಮಂಜೂರಾತಿ ಹಗರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.

ಈ ಭೂಮಿ ಪಡೆಯುವ ಆರು ತಿಂಗಳ ಮುನ್ನ ರನ್ಯಾಳ ಕಂಪನಿಗೆ ಸಹಕಾರಿ ಬ್ಯಾಂಕ್‌ವೊಂದರಿಂದ 10 ಲಕ್ಷ ರು. ಹಣ ವರ್ಗಾ‍ವಣೆಯಾಗಿದ್ದು, ಈ ಹಣವನ್ನು ಮೂಲ ಬಂಡವಾಳ ಎಂದು ಉಲ್ಲೇಖಿಸಿ ಅವರು ಜಮೀನು ಪಡೆದಿದ್ದಾರೆ. ಈ ಹಣ ವರ್ಗಾವಣೆ ಹಾಗೂ ಕಂಪನಿ ಸ್ಥಾಪನೆಗೆ ಸಂಬಂಧಿಸಿದ ದಾಖಲೆಗಳು ‘ಕನ್ನಡಪ್ರಭ’ಕ್ಕೆ ಲಭ್ಯವಾಗಿವೆ.

ಹಳೆ ಕಂಪನಿ ಹೆಸರು ಬದಲಾಯಿಸಿ ನೋಂದಾಯಿಸಿಕೊಂಡಿದ್ದಲ್ಲದೆ, ಕೆಲವೇ ದಿನಗಳಲ್ಲಿ ಷೇರು ಸಂಗ್ರಹಿಸಿ ತರಾತುರಿಯಲ್ಲಿ ಸರ್ಕಾರದಿಂದ ಜಮೀನು ಪಡೆದಿರುವ ಹಿಂದೆ ಅವರಿಗೆ ಹಿಂದಿನ ಬಿಜೆಪಿ ಸರ್ಕಾರದ ಪ್ರಭಾವಿ ಸಚಿವರೊಬ್ಬರ ನೆರವು ಸಿಕ್ಕಿದೆ ಎಂದು ತಿಳಿದು ಬಂದಿದೆ.

ಗಮನಾರ್ಹ ಸಂಗತಿ ಎಂದರೆ, ರನ್ಯಾ ಅವರು ಈ ಕಂಪನಿ ಆರಂಭಿಸುವ ಮುಂಚೆ ತಮ್ಮ ಕುಟುಂಬ ಸದಸ್ಯರು ಹಾಗೂ ತಾನು ಆರಂಭಿಸಿದ್ದ ಎರಡು ಕಂಪನಿಗಳನ್ನು ನಷ್ಟದ ಕಾರಣಕ್ಕೆ ಬಂದ್ ಮಾಡಿದ್ದರು. ಅಲ್ಲದೆ ಕೆಐಎಡಿಬಿ ಜಮೀನು ಪಡೆಯುವ ಸಲುವಾಗಿ ರನ್ಯಾ ಅವರು ಹೆಸರು ಬದಲಿಸಿದ ಕಂಪನಿಯ ಮೂಲ ಮಾಲೀಕರ ಕುರಿತು ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ 10 ಲಕ್ಷ ರು. ಬಂಡವಾಳ ಹಾಗೂ ಸರ್ಕಾರದ ಭೂಮಿ ಪಡೆಯಲು ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂಬ ಆರೋಪವಿದೆ.

ಏನಿದು ರನ್ಯಾರಾವ್‌ ಭಾನಗಡಿ?:

2023ರ ಜನವರಿಯಲ್ಲಿ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ರನ್ಯಾ ರಾವ್ ಹಾಗೂ ಅವರ ಸೋದರ ವೃಷಭ್ ನಿರ್ದೇಶಕರಾಗಿರುವ ‘ಕ್ಸಿರೋದಾ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌’ ಕಂಪನಿಗೆ 12 ಎಕರೆ ಜಮೀನು ಮಂಜೂರಾಗಿತ್ತು. ಆದರೆ ‘ಬಯೋಎನ್‌ಜೋ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌’ ಹೆಸರನ್ನು 2022ರ ಆ.16ರಂದು ‘ಕ್ಸಿರೋದಾ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌’ ಎಂದು ರನ್ಯಾ ರಾವ್ ಬದಲಿಸಿದ್ದರು.

ಆದರೆ ಈ ಹೆಸರು ಬದಲಾವಣೆಗೆ ನಿರ್ದೇಶಕ ಮಂಡಳಿ ಸಭೆ ನಡೆಸಿ ನಿರ್ಣಯಿಸಿದ್ದಾಗಿ ಕೇಂದ್ರ ಬೃಹತ್ ಕೈಗಾರಿಕೆ ಇಲಾಖೆಗೆ ಅವರು ಪತ್ರ ಬರೆದಿದ್ದರು. ಈ ಬಯೋಎನ್‌ಜೋ ಕಂಪನಿಯ ಮೂಲ ಮಾಲಿಕರು ಯಾರು? ಅದರ ಕಾರ್ಯಚಟುವಟಿಕೆಗಳೇನು? ಎಂಬ ಬಗ್ಗೆ ಮಾಹಿತಿ ಇಲ್ಲ. ಅಲ್ಲದೆ ಬಯೋಎನ್‌ಜೋ ಕಂಪನಿ ಖಾತೆಗೆ ಸಹಕಾರಿ ಬ್ಯಾಂಕ್‌ನಿಂದ 10 ಲಕ್ಷ ರು. ಹಣ ವರ್ಗಾವಣೆಯಾಗಿದೆ. ಇದಾದ ಬಳಿಕ ಕಂಪನಿ ಹೆಸರು ಬದಲಾಗಿದೆ. ಅದಾದ ಆರು ತಿಂಗಳಿಗೆ ಆ ಕಂಪನಿಗೆ ಕೆಐಎಡಿಬಿ ಜಮೀನು ಮಂಜೂರಾಗಿದೆ. ಅಲ್ಲದೆ ಆ ಕಂಪನಿ ಹೆಸರಿನಲ್ಲಿ ಉಕ್ಕಿನಿಂದ ತಯಾರಿಸಲಾಗುವ ಟಿಎಂಟಿ ಪಟ್ಟಿ, ಸರಳು ಹಾಗೂ ಸಹ-ಉತ್ಪನ್ನಗಳನ್ನು ಉತ್ಪಾದಿಸುವುದಾಗಿ ಹೇಳಲಾಗಿತ್ತು. ಅಲ್ಲದೆ 138 ಕೋಟಿ ರು. ಹೂಡಿಕೆ ಹಾಗೂ 160 ಜನರಿಗೆ ಉದ್ಯೋಗ ಕೊಡುವುದಾಗಿ ಸಹ ರನ್ಯಾ ರಾವ್ ಹೇಳಿದ್ದರು. ಹೀಗಾಗಿ ಮೂಲ ಷೇರು ಖರೀದಿಸಲು ಹಣ ಕೊಟ್ಟವರ ಬಗ್ಗೆ ಶಂಕೆ ಮೂಡಿದೆ.

ದಲಿತರ ಹೆಸರಿನಲ್ಲಿ ಜಮೀನು?

ಕೆಐಎಡಿಬಿಯಲ್ಲಿ ದಲಿತರ ಹೆಸರಿನಲ್ಲಿ ರನ್ಯಾ ರಾವ್‌ ಜಮೀನು ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿದೆ. ರನ್ಯಾರವರ ಮಲ ತಂದೆ ಹಾಗೂ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ರಾವ್‌ ದಲಿತರಾಗಿದ್ದಾರೆ. ಆದರೆ ಮಲತಂದೆ ಕಾರಣಕ್ಕೆ ರನ್ಯಾ ಅವರಿಗೆ ದಲಿತ ಮೀಸಲಾತಿ ಸಿಗುವುದಿಲ್ಲ. ಹೀಗಿದ್ದರೂ ದಲಿತರ ಕೋಟಾದಡಿ ಅವರು ಜಮೀನು ಮಂಜೂರಾತಿ ಪಡೆದಿದ್ದರು ಎನ್ನಲಾಗುತ್ತಿದೆ.

ಮತ್ತೆರಡು ಕಂಪನಿಗಳು:

2021ರಲ್ಲಿ ‘ರನ್ಯಾ ರಾವ್‌ ಫೋಟೋಗ್ರಫಿ ಪ್ರೈವೇಟ್‌ ಲಿಮಿಟೆಡ್’ ಹೆಸರಿನ ಕಂಪನಿಯನ್ನು ರನ್ಯಾ ಸ್ಥಾಪಿಸಿದ್ದರು. ಈ ಕಂಪನಿಯ ಮೂಲ ಬಂಡವಾಳವಾಗಿ ಆಕೆ 95 ಸಾವಿರ ರು. ಹಾಗೂ ಅವರ ತಾಯಿ 5 ಸಾವಿರ ರು. ತೊಡಗಿಸಿದ್ದರು. ಆ ಕಂಪನಿಗೆ ರನ್ಯಾ ನಿರ್ದೇಶಕಿಯಾಗಿದ್ದರು.

ಆದರೆ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ 2022ರಲ್ಲಿ ಆ ಕಂಪನಿಯನ್ನು ಅವರು ಬಂದ್ ಮಾಡಿದ್ದರು. 2023ರ ಸುಮಾರಿಗೆ ತನ್ನ ತಾಯಿ, ಸೋದರ, ಮಲ ತಂದೆ ಹಾಗೂ ಮಲ ತಾಯಿ ಮಗಳು ಜತೆ ಪಾಲುದಾರಿಕೆಯಲ್ಲಿ ಅವರು ಮತ್ತೊಂದು ಕಂಪನಿಯನ್ನು ಸ್ಥಾಪಿಸಿದ್ದರು. ವಿದೇಶಗಳಿಂದ ಗಿಡಗಳನ್ನು ತಂದು ಮಾರಾಟ ಮಾಡುವ ಕಂಪನಿ ಇದಾಗಿತ್ತು ಎನ್ನಲಾಗಿದ್ದು, ಈ ಕಂಪನಿಗೆ ಅವರ ಕುಟುಂಬ ಸದಸ್ಯರು ನಿರ್ದೇಶಕರಾಗಿದ್ದರು. ಆದರೆ ಆ ಕಂಪನಿ ಸಹ ವಹಿವಾಟು ಇಲ್ಲದೆ ಮುಚ್ಚುವ ಹಂತಕ್ಕೆ ತಲುಪಿತು ಎಂದು ತಿಳಿದು ಬಂದಿದೆ.

ಈ ಕಂಪನಿಗಳ ಸ್ಥಗಿತವಾದ ಬಳಿಕ ‘ಬಯೋಎನ್‌ಜೋ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌’ ಕಂಪನಿ ಹೆಸರನ್ನು 2022ರ ಆಗಸ್ಟ್‌ 16ರಂದು ‘ಕ್ಸಿರೋದಾ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌’ ಎಂದು ಬದಲಿಸಿ ಕೆಐಎಡಿಬಿಯಿಂದ ಅವರು ಜಮೀನು ಪಡೆದಿದ್ದರು ಎನ್ನಲಾಗಿದೆ.

ಸ್ಮಗ್ಲರ್‌ ರನ್ಯಾ ಮನೆಯಲ್ಲಿ

39 ವಿದೇಶಿ ವಾಚ್‌ ಪತ್ತೆ! 

ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಣಿಕೆ ಪ್ರಕರಣ ಸಂಬಂಧ ನಟಿ ರನ್ಯಾ ರಾವ್‌ ಮನೆ ಮೇಲೆ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿದ ವೇಳೆ ದುಬಾರಿ ಮೌಲ್ಯದ 39 ವಿದೇಶಿ ವಾಚ್‌ಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಆದರೆ ಆ ವಾಚ್‌ಗಳನ್ನು ಜಪ್ತಿ ಮಾಡದೆ ದಾಖಲೆಗಳನ್ನು ಮಾತ್ರ ಅಧಿಕಾರಿಗಳು ಉಲ್ಲೇಖಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಕರಣದಲ್ಲಿ ಮತ್ತೊಬ್ಬ ವಶಕ್ಕೆ?:

ಉದ್ಯಮಿ ಮೊಮ್ಮಗ ತರುಣ್ ರಾಜ್‌ ಬಂಧನ ಬೆನ್ನಲ್ಲೇ ಈ ಪ್ರಕರಣದಲ್ಲಿ ನಟಿ ರನ್ಯಾ ರಾವ್‌ ಅವರ ತಂಡದ ನಂಟು ಹೊಂದಿದ್ದ ಶಂಕೆ ಮೇರೆಗೆ ಮತ್ತೊಬ್ಬನನ್ನು ವಶಕ್ಕೆ ಪಡೆದು ಡಿಆರ್‌ಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಆತ ಶಾಸಕರೊಬ್ಬರ ಕಾರು ಚಾಲಕ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಈತ ಯಾರು, ಪ್ರಕರಣದಲ್ಲಿ ಆತನ ಪಾತ್ರ ಏನು?, ರನ್ಯಾಗೆ ಈತ ಹೇಗೆ ಪರಿಚಯ ಎಂಬಿತ್ಯಾದಿ ಮಾಹಿತಿಗಳು ಲಭ್ಯವಾಗಿಲ್ಲ.

Share this article