ರಾಜ್ಯ ಸರ್ಕಾರ 2025-26ನೇ ಸಾಲಿನಿಂದ 1ನೇ ತರಗತಿಗೆ ದಾಖಲಿಸಲು ಮಕ್ಕಳಿಗೆ ಜೂ.1ಕ್ಕೆ ಕಡ್ಡಾಯವಾಗಿ ಆರು ವರ್ಷ ಪೂರ್ಣಗೊಂಡಿರಬೇಕೆಂದು ಎರಡು ವರ್ಷಗಳ ಹಿಂದೆಯೇ ಜಾರಿಗೊಳಿಸಿದ್ದ ನಿಯಮ ಈಗ ಮತ್ತೆ ಚರ್ಚೆಗೀಡಾಗಿದೆ.
ಬೆಂಗಳೂರು : ರಾಜ್ಯ ಸರ್ಕಾರ 2025-26ನೇ ಸಾಲಿನಿಂದ 1ನೇ ತರಗತಿಗೆ ದಾಖಲಿಸಲು ಮಕ್ಕಳಿಗೆ ಜೂ.1ಕ್ಕೆ ಕಡ್ಡಾಯವಾಗಿ ಆರು ವರ್ಷ ಪೂರ್ಣಗೊಂಡಿರಬೇಕೆಂದು ಎರಡು ವರ್ಷಗಳ ಹಿಂದೆಯೇ ಜಾರಿಗೊಳಿಸಿದ್ದ ನಿಯಮ ಈಗ ಮತ್ತೆ ಚರ್ಚೆಗೀಡಾಗಿದೆ.
ಈ ನಿಯಮ ಜಾರಿಯಿಂದ ಆರು ವರ್ಷ ಪೂರ್ಣಗೊಳ್ಳಲು ಕೆಲವೇ ದಿನಗಳಿರುವ, ವಾರ ಕಡಿಮೆ ಇರುವ ಸಾಕಷ್ಟು ಮಕ್ಕಳು ಶಾಲಾ ದಾಖಲಾತಿಯಿಂದ ವಂಚಿತರಾಗುತ್ತಾರೆ. ಹೀಗಾಗಿ ಕೆಲ ತಿಂಗಳು ವಿನಾಯಿತಿ ನೀಡಬೇಕೆಂದು ಪೋಷಕರ ಸಂಘಟನೆಗಳು ಆಗ್ರಹಿಸುತ್ತಿವೆ.
ಆದರೆ, ಕೆಲ ಖಾಸಗಿ ಶಾಲಾ ಸಂಘಟನೆಗಳು ಸರ್ಕಾರ ಯಾವುದೇ ಕಾರಣಕ್ಕೂ ವಿನಾಯಿತಿ ನೀಡಬಾರದು. ಇದು ಇಂದಿನ ಆದೇಶವಲ್ಲ, ಕೇವಲ 1ನೇ ತರಗತಿಗೆ ಮಾಡಿರುವ ಆದೇಶ ಅಲ್ಲ. ಎರಡು ವರ್ಷಗಳ ಹಿಂದೆಯೇ ಎಲ್‌ಕೆಜಿ ಯುಕೆಜಿ ದಾಖಲಾತಿಗೂ ವಯೋಮಿತಿ ನಿಗದಿಪಡಿಸಿ ಆದೇಶ ಮಾಡಲಾಗಿದೆ. ಹಾಗಾಗಿ ಈಗ ಎಲ್‌ಕೆಜಿ ಯುಕೆಜಿ ತರಗತಿ ಮಕ್ಕಳು ಬರುವ ಸಾಲಿನಲ್ಲಿ 1ನೇ ತರಗತಿಗೆ ದಾಖಲಾಗಲು ವಯೋಮಿತಿಯಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ಯಾವುದೇ ಶಾಲೆಗಳು ಸರ್ಕಾರ ನಿಗದಿಪಡಿಸಿರುವ ವಯೋಮಿತಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಎಲ್‌ಕೆಜಿ ಯುಕೆಜಿಗೆ ದಾಖಲಿಸಿಕೊಂಡಿದ್ದರೆ ಅದು ಶಾಲೆಗಳ ತಪ್ಪಾಗುತ್ತದೆ ಎಂದು ಪ್ರತಿಪಾದಿಸುತ್ತಿವೆ.
ಲಕ್ಷಾಂತರ ಮಕ್ಕಳಿಗೆ ಅನ್ಯಾಯ: ಈ ವಿಚಾರವಾಗಿ ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ರಾಜ್ಯ ಖಾಸಗಿ ಶಾಲಾ ಸಂಘಟನೆಗಳ ಸಮನ್ವಯ ಸಮಿತಿಯ ಬಿ.ಎನ್.ಯೋಗಾನಂದ, 1ನೇ ತರಗತಿ ದಾಖಲಾತಿಗೆ ಗೆರೆ ಎಳೆದಂತೆ ಆಯಾ ಶೈಕ್ಷಣಿಕ ವರ್ಷದ ಜೂ.1ಕ್ಕೆ 6 ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮ ಅವೈಜ್ಞಾನಿಕ. ಇದರಿಂದ ಲಕ್ಷಾಂತರ ಮಕ್ಕಳು 1ನೇ ತರಗತಿ ಬದಲು ಪೂರ್ವ ಪ್ರಾಥಮಿಕ ತರಗತಿಯಲ್ಲೇ ಮತ್ತೊಂದುವರ್ಷ ಕಳೆಯಬೇಕಾಗುತ್ತದೆ. ಅಲ್ಲದೆ, ಈಗ ಪೂರ್ವ ಪ್ರಾಥಮಿಕ ತರಗತಿ ಸೇರದೆ ನೇರ 1ನೇ ತರಗತಿಗೆ ದಾಖಲಾಗುವ ಮಕ್ಕಳು ಶಾಲಾ ದಾಖಲಾತಿಯಿಂದಲೇ ವಂಚಿತರಾಗುತ್ತಾರೆ. ಹಾಗಾಗಿ ಹಿಂದೆ ಇದ್ದಂತೆ ಕನಿಷ್ಠ ಕೆಲವು ತಿಂಗಳ ವಿನಾಯಿತಿ ನೀಡಬೇಕು ಮನವಿ ಮಾಡಿದ್ದಾರೆ.
ಆದರೆ, ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಸೇರಿ ವಿವಿಧ ಶಾಲಾ ಆಡಳಿತ ಮಂಡಳಿಗಳು, ಸರ್ಕಾರ ವಯೋಮಿತಿ ನಿಯಮ ಸಡಿಲಗೊಳಿಸಿದರೆ ಮತ್ತೆ ಸಮಸ್ಯೆ ಶುರುವಾಗಲಿದೆ. ಸರ್ಕಾರದ ಆದೇಶದಂತೆ ಈಗಾಗಲೇ 2025-26ಕ್ಕೆ 1ನೇ ತರಗತಿಗೆ ಬರುವ ಮಕ್ಕಳಿಗೆ 6 ವರ್ಷ ಪೂರ್ಣಗೊಳ್ಳುವ ಲೆಕ್ಕಾಚಾರದಲ್ಲೇ ಎಲ್‌ಕೆಇ, ಯುಕೆಜಿಗೆ ಕಳೆದ ಎರಡು ವರ್ಷಗಳಿಂದ ಕ್ರಮವಾಗಿ 4 ವರ್ಷ ಮತ್ತು 5 ವರ್ಷ ಪೂರ್ಣಗೊಂಡಿರುವ ಮಕ್ಕಳನ್ನೇ ದಾಖಲಾತಿ ಮಾಡಿಕೊಳ್ಳಲಾಗಿದೆ. ಹಾಗಾಗಿ ಯಾವುದೇ ಸಮಸ್ಯೆ ಇರುವುದಿಲ್ಲ. ಒಂದು ವೇಳೆ ಸರ್ಕಾರ ವಯೋಮಿತಿ ಸಡಿಲಿಸಿದರೆ ಕೆಲ ತಾಂತ್ರಿಕ ಸಮಸ್ಯೆಗಳು ಉದ್ಭವಿಸಲಿವೆ ಎಂದು ಎಚ್ಚರಿಸಿದ್ದಾರೆ.