ಹೂಗುಚ್ಛಗಳು ನ್ಯಾಷನಲ್ ವೇಸ್ಟ್ ಎನ್ನುವ ತಮ್ಮ ಹೇಳಿಕೆಯನ್ನು ಸಂಸದ ತೇಜಸ್ವಿ ಸೂರ್ಯ ಅವರು ವಾಪಸ್ ಪಡೆಯಬೇಕು ಎಂದು ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಎಂ.ಅರವಿಂದ್ ಮನವಿ ಮಾಡಿದ್ದಾರೆ.
ಬೆಂಗಳೂರು: ಹೂಗುಚ್ಛಗಳು ನ್ಯಾಷನಲ್ ವೇಸ್ಟ್ ಎನ್ನುವ ತಮ್ಮ ಹೇಳಿಕೆಯನ್ನು ಸಂಸದ ತೇಜಸ್ವಿ ಸೂರ್ಯ ಅವರು ವಾಪಸ್ ಪಡೆಯಬೇಕು ಎಂದು ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಎಂ.ಅರವಿಂದ್ ಮನವಿ ಮಾಡಿದ್ದಾರೆ.
ತಮ್ಮ ವಿವಾಹದ ಆರತಕ್ಷತೆಗೆ ಸಾರ್ವಜನಿಕರನ್ನು ಆಹ್ವಾನಿಸುವ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡುವಾಗ ತೇಜಸ್ವಿ ಸೂರ್ಯ ಅವರು ‘ಹೂಗುಚ್ಛಗಳು ನ್ಯಾಷನಲ್ ವೇಸ್ಟ್. ಇವುಗಳನ್ನು ನೀಡುವುದು ಬೇಡ’ ಎಂದಿದ್ದಾರೆ. ರಾಜ್ಯದಲ್ಲಿ ಸುಮಾರು 38 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪುಷ್ಪ ಬೆಳೆ ಬೆಳೆಯಲಾಗುತ್ತಿದೆ. ಇದರಿಂದ ನೇರ ಹಾಗೂ ಪರೋಕ್ಷವಾಗಿ 11 ಲಕ್ಷ ಜನರ ಜೀವನ ಅವಲಂಬಿತವಾಗಿದೆ. ಹಾಗಾಗಿ ಸಂಸದರ ಹೇಳಿಕೆಯು ಲಕ್ಷಾಂತರ ರೈತರ ಶ್ರಮಕ್ಕೆ ಧಕ್ಕೆಯಾಗುತ್ತದೆ ಎಂದಿದ್ದಾರೆ.
ಗುಲಾಬಿ, ಸೇವಂತಿಗೆ, ಚೆಂಡು, ಸುಗಂಧರಾಜ, ಕನಕಾಂಬರ ಇತ್ಯಾದಿ ಬಿಡಿ ಹೂ ಹಾಗೂ ಕಟ್ ಗುಲಾಬಿ, ಕಟ್ ಸೇವಂತಿಗೆ, ಜೆರ್ಬೆರ, ಆಂತುರಿಯಮ್ಸ್, ಆರ್ಕಿಡ್ಸ್ ಇತ್ಯಾದಿ ವಾಣಿಜ್ಯ ಬೆಳೆಗಳನ್ನು ಹಸಿರು ಮನೆ, ಪಾಲಿಮನೆಯಲ್ಲಿ ಬೆಳೆಲಾಗುತ್ತಿದೆ. ಇದರಿಂದ ನೇರ ಹಾಗೂ ಪರೋಕ್ಷವಾಗಿ 11 ಲಕ್ಷ ಜನರ ಜೀವನ ಅವಲಂಬಿತವಾಗಿದೆ ಎಂದು ಅವರು ವಿವರಿಸಿದ್ದಾರೆ.
ಅಲ್ಲದೆ, ರಾಜ್ಯದಲ್ಲಿ 2.8 ಲಕ್ಷ ಏಕರೆ ಪ್ರದೇಶದಲ್ಲಿ ಕಾಕಡ, ಮಲ್ಲಿಗೆ, ಮ್ಯಾರಿಗೋಲ್ಡ್, ಸಂಪಂಗಿ, ಕನಕಾಂಬರ ಸೇರಿದಂತೆ 40 ಬಗೆಯ ಹೂಗಳನ್ನು ಬೆಳೆಯಲಾಗುತ್ತದೆ. ಇದರ ಮೇಲೆ ಅವಲಂಬಿತರಾಗಿರುವ ಜನಸಂಖ್ಯೆ 52 ಲಕ್ಷಕ್ಕೂ ಹೆಚ್ಚು. ಕೃತಕ ಹೂವು ಬಳಕೆಯಿಂದ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಿರುವಾಗ ಸಂಸದರ ಹೇಳಿಕೆಯು ಲಕ್ಷಾಂತರ ರೈತರ ಶ್ರಮಕ್ಕೆ ಧಕ್ಕೆಯಾಗುತ್ತದೆ. ಆದ್ದರಿಮದ ತಕ್ಷಣ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.