ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪೊಲೀಸ್ ಭದ್ರತೆ ಮತ್ತು ಗಸ್ತು ಹೆಚ್ಟಿಸುವ ಜೊತೆ ರಾತ್ರಿ ವೇಳೆ ಶಂಕಾಸ್ಪದ ವ್ಯಕ್ತಿಗಳ ಬೆರಳಚ್ಚು ಪರಿಶೀಲನೆ ವ್ಯವಸ್ಥೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರು : ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪೊಲೀಸ್ ಭದ್ರತೆ ಮತ್ತು ಗಸ್ತು ಹೆಚ್ಟಿಸುವ ಜೊತೆ ರಾತ್ರಿ ವೇಳೆ ಶಂಕಾಸ್ಪದ ವ್ಯಕ್ತಿಗಳ ಬೆರಳಚ್ಚು ಪರಿಶೀಲನೆ ವ್ಯವಸ್ಥೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಆಕರ್ಷಕಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಹೀಗಿರುವಾಗ, ಇಂಥ ಘಟನೆಗಳು ನಡೆದರೆ ಪ್ರವಾಸಿಗರು ನಮ್ಮ ರಾಜ್ಯ, ದೇಶಕ್ಕೆ ಭೇಟಿ ನೀಡಲು ಹಿಂಜರಿಯುತ್ತಾರೆ. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಭದ್ರತೆ ಮತ್ತು ಗಸ್ತು ಹೆಚ್ಚಿಸಲಾಗುತ್ತದೆ ಎಂದರು.
ರಾತ್ರಿ ವೇಳೆ ಅಪರಾಧ ಹಿನ್ನೆಲೆಯ ವ್ಯಕ್ತಿಗಳ ಓಡಾಟದ ಮೇಲೆ ನಿಗಾ ಇರಿಸಲು ಬೆಂಗಳೂರಿನಲ್ಲಿ ಬೆರಳಚ್ಚು ಪರಿಶೀಲನೆ ವ್ಯವಸ್ಥೆ ಇದೆ. ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗುತ್ತದೆ. ರಾತ್ರಿ ವೇಳೆ ನಾಕಾ ಬಂದಿ ಹಾಕಿರುವ ಪೊಲೀಸರು, ಶಂಕಾಸ್ಪದ ವ್ಯಕ್ತಿಗಳ ಬೆರಳಚ್ಚು ಪರಿಶೀಲಿಸುತ್ತಾರೆ. ಅಪರಾಧ ಹಿನ್ನೆಲೆಯವರು ಕಂಡು ಬಂದರೆ ವಿಚಾರಣೆಗೆ ಒಳಪಡಿಸುತ್ತಾರೆ ಎಂದು ತಿಳಿಸಿದರು.
ಘಟನೆ ಸಂಬಂಧಿಸಿ ಸಂತ್ರಸ್ತ ವಿದೇಶಿಯರನ್ನು ಅವರ ದೇಶಕ್ಕೆ ಕಳುಹಿಸಲು ರಾಯಭಾರ ಕಚೇರಿಯೊಂದಿಗೆ ಪೊಲೀಸ್ ಇಲಾಖೆ ಸಂಪರ್ಕದಲ್ಲಿದೆ. ಅವರಿಗೆ ಎಲ್ಲಾ ರೀತಿಯ ನೆರವು, ಸಹಾಯ ಮಾಡುತ್ತೇವೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯಲ್ಲಿ ಮಾದಕ ವಸ್ತು ಬಳಕೆ ಕಂಡು ಬಂದಿಲ್ಲ. ಅಕ್ರಮ ಹೋಂ ಸ್ಟೇಗಳ ಕುರಿತು ಪರಿಶೀಲಿಸುತ್ತೇವೆ ಎಂದು ಹೇಳಿದರು.