ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದ ಉಂಟಾಗಿರುವ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಕೊರತೆಯ ಪರಿಣಾಮ ಇದೀಗ ನಂದಿನಿ ಉತ್ಪನ್ನಗಳ ಮೇಲೂ ತಟ್ಟಿದೆ. ಕಳೆದ ಕೆಲ ದಿನಗಳಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಸರಬರಾಜು ವ್ಯತ್ಯಯವಾಗುತ್ತಿದ್ದು, ಕೆಎಂಎಫ್ ಹಾಲಿನ ಉತ್ಪಾದನಾ ಘಟಕಗಳು ಒತ್ತಡಕ್ಕೆ ಸಿಲುಕಿವೆ.
ಬೆಂಗಳೂರು : ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದ ಉಂಟಾಗಿರುವ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಕೊರತೆಯ ಪರಿಣಾಮ ಇದೀಗ ನಂದಿನಿ ಉತ್ಪನ್ನಗಳ ಮೇಲೂ ತಟ್ಟಿದೆ.
ಕಳೆದ ಕೆಲ ದಿನಗಳಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಸರಬರಾಜು ವ್ಯತ್ಯಯವಾಗುತ್ತಿದ್ದು, ಕೆಎಂಎಫ್ ಹಾಲಿನ ಉತ್ಪಾದನಾ ಘಟಕಗಳು ಒತ್ತಡಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಐಒಸಿಎಲ್‌ಗೆ (ಇಂಡಿಯನ್ ಆಯಿಲ್) ಕೆಎಂಎಫ್ ಪತ್ರ ಬರೆದಿದ್ದು, ಗ್ಯಾಸ್ ಸಿಲಿಂಡರ್ ಪೂರೈಸುವಂತೆ ಮನವಿ ಮಾಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
428 ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬಳಕೆ
ಹಾಲಿನ ಉತ್ಪನ್ನಗಳ ತಯಾರಿಕೆಗೆ ಪ್ರತಿ ತಿಂಗಳು 428 ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಕೆಎಂಎಫ್ ಬಳಸುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್‌ಗಳು ಲಭ್ಯವಾಗುತ್ತಿಲ್ಲ. ಸದ್ಯ ಲಭ್ಯವಿರುವ ಗ್ಯಾಸ್ ಸಂಗ್ರಹವು ಒಂದೆರಡು ದಿನಗಳಲ್ಲಿ ಖಾಲಿಯಾಗಲಿದ್ದು, ಉತ್ಪಾದನೆಯ ಮೇಲೆ ಪರಿಣಾಮ ಬೀರಲಿದೆ. ಮಾ.21ರೊಳಗೆ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆ ಆಗದಿದ್ದರೆ ನಂದಿನಿ ಸಿಹಿ ಮತ್ತು ಖಾರದ ತಿಂಡಿ ತಿನಿಸುಗಳ ತಯಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ ಎನ್ನಲಾಗಿದೆ.
ಗ್ಯಾಸ್ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ
ಗ್ಯಾಸ್ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ತುರ್ತು ಕ್ರಮ ಕೈಗೊಳ್ಳುವಂತೆ ಕೆಎಂಎಫ್ ಮನವಿ ಮಾಡಿದೆ. ಅಗತ್ಯ ಗ್ಯಾಸ್ ಪೂರೈಕೆ ಆಗದಿದ್ದರೆ, ಮುಂದಿನ ದಿನಗಳಲ್ಲಿ ನಂದಿನಿ ಉತ್ಪನ್ನಗಳನ್ನು ಸೀಮಿತ ಪ್ರಮಾಣದಲ್ಲೇ ಉತ್ಪಾದಿಸುವ ಅನಿವಾರ್ಯತೆ ಎದುರಾಗಬಹುದು ಎಂದು ತಿಳಿಸಲಾಗಿದೆ.
ಕನಕಪುರದ ಶಿವನಹಳ್ಳಿ ನಂದಿನಿ ಮೆಗಾ ಡೈರಿ ಸೇರಿದಂತೆ ಇತರೆ ಹಾಲು ಒಕ್ಕೂಟಗಳಲ್ಲಿ ಹಾಲಿನ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಎಲ್‌ಪಿಜಿ ಗ್ಯಾಸ್ ಬಳಕೆ ಮಾಡುತ್ತಿಲ್ಲ. ಬದಲಿಗೆ ತ್ಯಾಜ್ಯ ಸಂಸ್ಕರಣಾ ಘಟಕದಿಂದ (ಇಟಿಪಿ) ಉತ್ಪಾದನೆಯಾಗುವ ಅನಿಲವನ್ನು ಬಳಸಲಾಗುತ್ತಿದೆ. ಕನಕಪುರದ ಡೈರಿಯಲ್ಲಿ ಕಳೆದೊಂದು ತಿಂಗಳಿನಿಂದ ಸೌದೆಯನ್ನು ಉಪಯೋಗಿಸಲಾಗುತ್ತದೆ. ಅತ್ಯಲ್ಪ ಪ್ರಮಾಣದಲ್ಲಿ ಇಂಡಿಯನ್ ಆಯಿಲ್ ಸಂಸ್ಥೆಯ ಗ್ಯಾಸ್ ಬಳಸಲಾಗುತ್ತಿದ್ದು, ಹಾಲಿನ ಉತ್ಪಾದನೆಗಳ ತಯಾರಿಕೆಗೆ ಹೆಚ್ಚು ವ್ಯತ್ಯಯವಾಗದು ಎಂದು ಬಮೂಲ್ ಮೂಲಗಳು ತಿಳಿಸಿವೆ.
