ಡಿಸೆಂಬರ್ 31ರಂದು ಗದಗದಲ್ಲಿ ಕೆಎಂಎಫ್ ಬೆಂಬಲ ಬೆಲೆಯ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿದ್ದು, ಮಾರಾಟಕ್ಕೆ ರೈತರು ಪೈಪೋಟಿ ನಡೆಸಿದ್ದಾರೆ. ಕೇಂದ್ರದ ಮುಂದೆ ಟ್ರ್ಯಾಕ್ಟರ್ ಸಾಲು ನಿಂತಿದೆ.
ಮಹೇಶ ಛಬ್ಬಿ
ಗದಗ: ಇಲ್ಲಿಯ ಎಪಿಎಂಸಿ ಆವರಣದಲ್ಲಿ ಕೆಎಂಎಫ್ (ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ) ಆರಂಭಿಸಿರುವ ಬೆಂಬಲ ಬೆಲೆ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ರೈತರು ದಾಂಗುಡಿ ಇಟ್ಟಿದ್ದಾರೆ.ಡಿ. 31ರಂದು ಕೆಎಂಎಫ್ ಖರೀದಿ ಕೇಂದ್ರ ಆರಂಭಿಸಿದೆ. ರೈತರಿಂದ ನೇರವಾಗಿ ಕ್ವಿಂಟಲ್‌ಗೆ ₹2400ರಂತೆ ಒಬ್ಬ ರೈತರಿಂದ (ಒಂದು ಖಾತೆಯಿಂದ) ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳ ಖರೀದಿಸುತ್ತಿವೆ. ಈಗ ಕಿಲೋಮೀಟರ್‌ಗಟ್ಟಲೆ ಟ್ರ್ಯಾಕ್ಟರ್‌ಗಳು ಸರದಿಯಲ್ಲಿ ನಿಂತಿವೆ.ಕೆಎಂಎಫ್‌ನಿಂದ ಮಕ್ಕೆಜೋಳ ಖರೀದಿಗೆ 2700ಕ್ಕೂ ಅಧಿಕ ರೈತರು ನೋಂದಣಿ ಮಾಡಿದ್ದಾರೆ. ನೋಂದಣಿ ಮಾಡಿಸುವಾಗಲೇ ಮೆಕ್ಕೆಜೋಳ ಮಾರಾಟಕ್ಕೆ ತರುವ ದಿನಾಂಕ ನಿಗದಿ ಮಾಡಲಾಗಿದೆ. ಆದರೆ ಖರೀದಿ ಕೇಂದ್ರ ಪ್ರಾರಂಭವಾಗಿದೆ ಎನ್ನುವ ಸುದ್ದಿ ತಿಳಿಯುತ್ತಲೆ ನೋಂದಣಿ ಮಾಡಿಸಿದ ಜಿಲ್ಲೆಯ ರೈತರು ಒಮ್ಮೆಲೆ ಧಾವಿಸಿದ್ದಾರೆ. ಜತೆಗೆ ಮಾರಾಟಕ್ಕೆ ಪೈಪೋಟಿ ನಡೆಸಿದ್ದಾರೆ. ಅದರಿಂದ ಸಮಸ್ಯೆಗಳು ಸೃಷ್ಟಿಯಾಗಿದೆ ಎನ್ನುತ್ತಾರೆ ಕೆಎಂಎಫ್ ಅಧಿಕಾರಿಗಳು.
ರೈತರ ಹೋರಾಟಕ್ಕೆ ಬೆಲೆ ಇಲ್ಲ: ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲ, ರೈತರು ಏನೇ ಪಡೆಯಬೇಕಾದರೂ ಹೋರಾಟ ಅನಿವಾರ್ಯವಾಗಿದೆ. ರೈತರ ಹೋರಾಟಕ್ಕೆ ಮಣಿದು ಸರ್ಕಾರ ಖರೀದಿ ಕೇಂದ್ರ ತೆರೆಯುವಂತೆ ಆದೇಶಿಸಿದೆ. ಅದರಂತೆ ಕೆಎಂಎಫ್ ಜಿಲ್ಲೆಯ ರೈತರಿಂದ ನೋಂದಣಿ ಮಾಡಿಸಿ, ಖರೀದಿ ಕೇಂದ್ರವನ್ನು ಆರಂಭಿಸಿದೆ. ಆದರೆ ಎರಡು-ಮೂರು ನೋಂದಣಿಯಾದ ಬಳಿಕ ಸ್ಥಗಿತಗೊಳಿಸಲಾಯಿತು. ಜಿಲ್ಲೆಯ ಕೆಲವು ರೈತರು ಮಾತ್ರ ನೋಂದಣಿ ಮಾಡಲು ಸಾಧ್ಯವಾಯಿತು. ಈಗ ಸದ್ಯ ಖರೀದಿ ಕೇಂದ್ರ ಆರಂಭವಾಗಿದೆ. ಆದರೆ ಒಬ್ಬ ರೈತರಿಂದ 20 ಕ್ವಿಂಟಲ್ ಮೆಕ್ಕೆಜೋಳ ಮಾತ್ರ ಖರೀದಿಸುತ್ತಿದ್ದಾರೆ. ಇನ್ನುಳಿದ ಮೆಕ್ಕೆಜೋಳವನ್ನು ಏನು ಮಾಡಬೇಕು ಎಂದು ತಿಂಗಳು ಹಿಂದೆ ನೋಂದಣಿ ಮಾಡಿಸಿ, ಮೆಕ್ಕೆಜೋಳದ ರಾಶಿ ಕಾಯ್ದಿಟ್ಟುಕೊಂಡ ರೈತರಿಗೆ ಚಿಂತೆಯಾಗಿದೆ. ಇದು ಮೂಗಿಗೆ ತುಪ್ಪ ಸವರುವ ಕೆಲಸ, ರೈತರ ಹೋರಾಟಕ್ಕೆ ಬೆಲೆಯೇ ಇಲ್ಲದಂತಾಗಿದೆ, ಒಬ್ಬ ರೈತರಿಂದ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಬೇಕು ಎಂದು ರೈತರು ಆಗ್ರಹಿಸಿದರು.ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭವಾದ 4 ದಿನಗಳಲ್ಲಿ 464 ಎಫ್‌ಐಡಿ ಕ್ಲಿಯರ್ ಆಗಿದ್ದು, 819 ಮೆಟ್ರಿಕ್ ಟನ್ ಖರೀದಿಸಲಾಗಿದೆ. 50 ಕ್ವಿಂಟಲ್ ಆದೇಶ ಬರುವುದಕ್ಕಿಂದ ಮೊದಲೆ ಸರ್ಕಾರದ 20 ಕ್ವಿಂಟಲ್ ಆದೇಶವಿತ್ತು. ಆ ಆದೇಶದ ಅನುಗುಣವಾಗಿ ನೋಂದಣಿ ಪ್ರಕ್ರಿಯೆ ಆಗಿದ್ದವು, ಅದರ ಪ್ರಕಾರ ಒಬ್ಬ ರೈತರಿಂದ ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಲಾಗುತ್ತಿದೆ ಎಂದು ಕೆಎಂಎಫ್ ಗದಗ ಜಿಲ್ಲಾ ಮುಖ್ಯಸ್ಥ ಡಾ. ಪ್ರಸನ್ನ ಎಸ್. ಪಟ್ಟೇದ ಹೇಳಿದರು. ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಬೆಲೆ ಇಲ್ಲದ ಕಾರಣ ಜಿಲ್ಲೆಯ ಹಲವು ರೈತರು ಮಾರಾಟ ಮಾಡದೇ ಹಾಗೆಯೇ ಇಟ್ಟು ಕುಳಿತಿದ್ದಾರೆ. ಮೆಕ್ಕೆಜೋಳ ರಾಶಿಗೆ ನುಶಿ ಹತ್ತುತ್ತಿವೆ. ಕೆಲವು ರೈತರು ಖರೀದಿದಾರರು ಕೇಳಿದ ಬೆಲೆಗೆ ಕೊಟ್ಟು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಸದ್ಯ ಕೆಎಂಎಫ್‌ನಲ್ಲಿ ಒಬ್ಬ ರೈತನಿಂದ 20 ಕ್ವಿಂಟಲ್ ಮಾತ್ರ ಖರೀದಿಸುತ್ತಿದೆ. ಇನ್ನುಳಿದ ಮೆಕ್ಕೆಜೋಳವನ್ನು ಏನು ಮಾಡಬೇಕು ಎಂದು ಮುಳಗುಂದ ರೈತ ಮಹಾಂತೇಶ ಗುಂಜಳ ಪ್ರಶ್ನಿಸಿದರು.