ದಾಬಸ್‍ಪೇಟೆ: ಸೋಂಪುರ ಕೈಗಾರಿಕೆಯಲ್ಲಿರುವ ಖಾಸಗಿ ಕಂಪನಿಯೊಂದು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಹಾಗೂ ಅದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಇಂಜಿನಿಯರ್‌ ಒಬ್ಬರು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು ಈತನನ್ನು ಕಂಪನಿಯಿಂದ ವಜಾಗೊಳಿಸಬೇಕು ಹಾಗೂ ಜಮೀನು ಕಳೆದುಕೊಂಡವರಿಗೆ ಕೆಲಸ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಹೊರಟು ಪ್ರತಿಭಟನೆ ನಡೆಸಿದ

ದಾಬಸ್‍ಪೇಟೆ: ಸೋಂಪುರ ಕೈಗಾರಿಕೆಯಲ್ಲಿರುವ ಖಾಸಗಿ ಕಂಪನಿಯೊಂದು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಹಾಗೂ ಅದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಇಂಜಿನಿಯರ್‌ ಒಬ್ಬರು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು ಈತನನ್ನು ಕಂಪನಿಯಿಂದ ವಜಾಗೊಳಿಸಬೇಕು ಹಾಗೂ ಜಮೀನು ಕಳೆದುಕೊಂಡವರಿಗೆ ಕೆಲಸ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಹೊರಟು ಪ್ರತಿಭಟನೆ ನಡೆಸಿದರು.

ಇಂಜಿನಿಯರ್ ಗಂಗಾಧರ್ ವಜಾಮಾಡಿ:

ಬಿಲ್ಲನಕೋಟೆ ರೈತ ಮುಖಂಡ ಕೃಷ್ಣಸ್ವಾಮಿ ಮಾತನಾಡಿ, ಸೋಂಪುರ ಕೈಗಾರಿಕಾ ಪ್ರದೇಶದ ಬಿಲ್ಲನಕೋಟೆಯಲ್ಲಿರುವ ವಿನಾರ ಇನ್ಪ್ರಾ ಎಲ್‍ಎಲ್‌ಪಿ ಕಂಪನಿ 120 ಎಕರೆ ಪ್ರದೇಶದಲ್ಲಿ ಕಂಪನಿ ನಿರ್ಮಾಣ ಮಾಡುತ್ತಿದ್ದು, ಜಮೀನು ಕಳೆದುಕೊಂಡಿರುವ ರೈತರು ಈ ಕಂಪನಿಯಲ್ಲಿ ವಿದ್ಯಾಭ್ಯಾಸಕ್ಕೆ ತಕ್ಕಂತೆ ಸ್ಥಳೀಯರಿಗೆ ಉದ್ಯೋಗ ನೀಡಿ ಹಾಗೂ ಕೆಲಸಗಳಿಗೆ ನಮ್ಮ ವಾಹನಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡರೂ ನಮ್ಮ ಮನವಿಗೆ ಈ ಕಂಪನಿ ಸ್ಪಂದಿಸುತ್ತಿಲ್ಲ. ಇಂಜಿನಿಯರ್ ಗಂಗಾಧರ್ ನಮ್ಮ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಪೊಲೀಸರು, ರೌಡಿಗಳನ್ನು ಕರೆಯಿಸಿ ಬೆದರಿಕೆ ಹಾಕಿಸುತ್ತಿದ್ದಾರೆ. ಸ್ಥಳೀಯರ ಮೇಲೆ ದೌರ್ಜನ್ಯ ಮಾಡುತ್ತಿರುವ ಇಂಜಿನರ್ ಗಂಗಾಧರ್‌ನನ್ನು ವಜಾ ಮಾಡುವಂತೆ ಆಗ್ರಹಿಸಿದರು.

ಮನವಿಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ: ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಸರ್ಕಾರ ನಮ್ಮ ಫಲವತ್ತಾದ ಕೃಷಿಭೂಮಿಯನ್ನು ವಶಪಡಿಸಿಕೊಂಡು ನಮ್ಮನ್ನು ಗುಲಾಮರನ್ನಾಗಿಸಿದೆ. ಬೇರೆ ಕಡೆಯಿಂದ ಬಂದ ಉದ್ಯಮಿಗಳು ಕಂಪನಿಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಕೆಲಸ ನೀಡದೆ ಅವರಿಗೆ ಬೇಕಾದವರಿಗೆ ನೀಡುತ್ತಾರೆ. ಕಂಪನಿಯ ಇಂಜಿನಿಯರ್ ಗಂಗಾಧರ್ ಸ್ಥಳೀಯರಿಗೆ ಕೆಲಸ ನೀಡದೆ ತಮ್ಮ ಹೆಂಡತಿ ಹೆಸರಿನಲ್ಲಿ ಮತ್ತೊಂದು ಕಂಪನಿ ತೆಗೆದು ಕೋಟ್ಯಂತರ ರುಪಾಯಿ ಸಂಪಾದಿಸುತ್ತಿದ್ದಾನೆ. ಅದಲ್ಲದೆ ಕ್ರಷರ್ ಮಾಲೀಕ ನಟರಾಜು ಜೊತೆ ಶಾಮಿಲಾಗಿ ಅವನೇ ನೇರವಾಗಿ ಮೆಟಿರಿಯಲ್ ಖರೀದಿಸುತ್ತಿದ್ದು, ಸ್ಥಳೀಯರಿಗೆ ಕೆಲಸ ಇಲ್ಲದಂತಾಗಿದ್ದು, ಮುಂದೆ ಸ್ಥಳೀಯರಿಗೆ ಕೆಲಸ ಕೊಡದೆ ಹೋದರೆ ಉಗ್ರ ಪ್ರತಿಭಟನೆಗೆ ಕರೆ ನೀಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಭಾವಿಗಳಿಂದ ಬೆದರಿಕೆ:

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಕುಮಾರ್ ಮಾತನಾಡಿ, ಪ್ರತಿಭಟನೆ ಮಾಡದಂತೆ ಕಂಪನಿಯ ಇಂಜಿನಿಯರ್ ಗಂಗಾಧರ್ ಸ್ಥಳೀಯ ಪ್ರಭಾವಿಗಳ ಮುಖಾಂತರ ಕರೆ ಮಾಡಿಸಿ ಬೆದರಿಕೆ ಹಾಕಿಸುತ್ತಿದ್ದಾನೆ. ಇಂತಹ ಬೆದರಿಕೆಗಳಿಗೆ ಜಗ್ಗದೆ ಇಂದು ನೂರಾರು ರೈತರ ಜೊತೆಗೂಡಿ ಪ್ರತಿಭಟನೆ ನಡೆಸುತ್ತಿದ್ದೇವೆ. ಮುಂದೆಯೂ ಸಹ ನಮ್ಮ ಸಮಸ್ಯೆ ಬಗೆಹರಿಯದಿದ್ದರೆ ರಸ್ತೆ ತಡೆದು ಕೆಐಎಡಿಬಿ ಕಚೇರಿಯವರೆಗೂ ಪಾದಯಾತ್ರೆ ನಡೆಸಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಪಿಎಸ್‌ಐ ರಾಜು ಪ್ರತಿಭಟನಾಕಾರರ ಮನವೊಲಿಸಿ ಕಂಪನಿಯ ನಿರ್ದೇಶಕ ತಿರುಪತಿ ಜೊತೆ ಸಂಧಾನ ನಡೆಸಿ ಪ್ರತಿಭಟನೆ ಹಿಂಪಡೆಯುವಂತೆ ರೈತರ ಮನವೊಲಿಸಿದರು.

ಮನವಿಗೆ ಸ್ಪಂದಿಸುತ್ತೇನೆ:

ಕಂಪನಿ ನಿರ್ದೇಶಕ ತಿರುಪತಿ ಮಾತನಾಡಿ, ನಾನು ಸ್ಥಳೀಯರಿಗೆ ಕೆಲಸ ನೀಡುವ ಬಗ್ಗೆ ಆರಂಭದಲ್ಲೇ ಮಾತುಕೊಟ್ಟಿದ್ದೇವೆ. ಆದರೆ ಇಂಜಿನಿಯರ್ ಗಂಗಾಧರ್ ಸ್ಥಳೀಯರ ಜೊತೆ ಸೇರಿ ದೌರ್ಜನ್ಯವೆಸಗುತ್ತಿರುವುದು ಗಮನಕ್ಕೆ ಬಂದಿದೆ. ಇನ್ನು ಮುಂದೆ ಗಂಗಾಧರ್ ಅವರ ಬದಲಾಗಿ ಬೇರೆಯವರಿಗೆ ವಹಿಸಿದ್ದು, ಅವರ ಬಳಿ ನಿಮ್ಮ ಅಹವಾಲು, ಕೆಲಸದ ಪಟ್ಟಿಯನ್ನು ನೀಡಿದರೆ ಹಂತ ಹಂತವಾಗಿ ಸ್ಥಳೀಯರಿಗೆ ಕೆಲಸ ನೀಡುತ್ತೇವೆ, ಸ್ಥಳೀಯರ ಸಹಕಾರ ಮುಖ್ಯ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹಸಿರು ಸೇನೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣರೆಡ್ಡಿ, ಉಪಾಧ್ಯಕ್ಷ ಅಂದಪ್ಪ ಹುರುಳಿ, ಜಿಲ್ಲಾಧ್ಯಕ್ಷರಾದ ಗೋವಿಂದರೆಡ್ಡಿ, ಮಹೇಂದ್ರ, ರಾಜಣ್ಣ, ಸ್ಥಳೀಯರಾದ ಚಂದ್ರಶೇಖರ್, ಕೃಷ್ಣಸ್ವಾಮಿ, ಮಂಜುನಾಥ್, ಅನಿಲ್ ಕುಮಾರ್, ಪ್ರದೀಪ್ ಕುಮಾರ್, ಪುನೀತ್, ವಿನಯ್, ಮಂಜುನಾಥ್, ಹೊನ್ನಪ್ಪ ಇತರರಿದ್ದರು.

ಪೋಟೋ 4 :

ಸೋಂಪುರ ಕೈಗಾರಿಕಾ ಪ್ರದೇಶದ ಬಿಲ್ಲನಕೋಟೆಯಲ್ಲಿರುವ ವಿನಾರ ಇನ್ಪ್ರಾ ಎಲ್‍ಎಲ್‌ಪಿ ಕಂಪನಿ ವಿರುದ್ಧ ಸ್ಥಳೀಯ ರೈತರು ಪ್ರತಿಭಟನೆ ನಡೆಸಿ, ಕಂಪನಿ ನಿರ್ದೇಶಕ ತಿರುಪತಿಗೆ ಮನವಿ ಸಲ್ಲಿಸಿದರು.