ಒಂದೇ ಕೊಠಡಿಯಲ್ಲಿ ಕೆಎಎಸ್‌ ಪರೀಕ್ಷೆ ಬರೆದ 15 ಮಂದಿ ಸಂದರ್ಶನಕ್ಕೆ ಆಯ್ಕೆ!

Published : Mar 05, 2026, 03:04 AM IST
KAS

ಸಾರಾಂಶ

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಪರೀಕ್ಷಾ ಪ್ರಕ್ರಿಯೆಯಲ್ಲಿ ಮತ್ತೆ ಅಕ್ರಮದ ಆರೋಪ ಕೇಳಿಬಂದಿದ್ದು, ಕಳೆದ ಸೋಮವಾರ ಪ್ರಕಟಿಸಲಾದ ಕೆಎಎಸ್ (ಗೆಜೆಟೆಡ್‌ ಪ್ರೊಬೇಷನರಿ ಹುದ್ದೆ) ಗ್ರೂಪ್‌ ‘ಎ’ ಮತ್ತು ‘ಬಿ’ ಮುಖ್ಯ ಪರೀಕ್ಷೆ ಫಲಿತಾಂಶದ ಬಗ್ಗೆ ಶಂಕೆ ವ್ಯಕ್ತವಾಗಿದೆ.

  ಬೆಂಗಳೂರು :  ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಪರೀಕ್ಷಾ ಪ್ರಕ್ರಿಯೆಯಲ್ಲಿ ಮತ್ತೆ ಅಕ್ರಮದ ಆರೋಪ ಕೇಳಿಬಂದಿದ್ದು, ಕಳೆದ ಸೋಮವಾರ ಪ್ರಕಟಿಸಲಾದ ಕೆಎಎಸ್ (ಗೆಜೆಟೆಡ್‌ ಪ್ರೊಬೇಷನರಿ ಹುದ್ದೆ) ಗ್ರೂಪ್‌ ‘ಎ’ ಮತ್ತು ‘ಬಿ’ ಮುಖ್ಯ ಪರೀಕ್ಷೆ ಫಲಿತಾಂಶದ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಒಂದೇ ಕೊಠಡಿಯಲ್ಲಿ ಮುಖ್ಯ ಪರೀಕ್ಷೆ ಬರೆದಿದ್ದ 15 ಮಂದಿ ಸಂದರ್ಶನಕ್ಕೆ ಆಯ್ಕೆಯಾಗಿದ್ದು, ಒಂದೇ ಕುಟುಂಬದ ಮೂವರು ವ್ಯಕ್ತಿತ್ವ ಪರೀಕ್ಷೆಗೆ ಅರ್ಹತೆ ಪಡೆದಿರುವ ಬಗ್ಗೆ ಅಪಸ್ವರ ಎದ್ದಿದೆ. ಅದರ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕೆಪಿಎಸ್‌ಸಿಯಿಂದ ವರದಿ ಕೇಳಿದ್ದಾರೆ. ಫಲಿತಾಂಶದ ಕುರಿತು ಹಲವು ಅಭ್ಯರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

384 ಗ್ರೂಪ್‌ ‘ಎ’ ಮತ್ತು ‘ಬಿ’ ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್ಸಿಯು ಪರೀಕ್ಷೆ ನಡೆಸಿತ್ತು. 2024ರ ಫೆಬ್ರವರಿ 26ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಈ ನಡುವೆ ಪ್ರಾಥಮಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಕನ್ನಡ ಅನುವಾದದಲ್ಲಿ ಸಾಕಷ್ಟು ತಪ್ಪುಗಳು ಆಗಿದ್ದರಿಂದ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆಗೆ ಆದೇಶಿಸಿತ್ತು. ಆ ನಂತರ ಕಳೆದ ವರ್ಷ ಮೇ ತಿಂಗಳಲ್ಲಿ ಮರು ಪರೀಕ್ಷೆ ನಡೆದಿದ್ದು 1:3 ಅನುಪಾತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿತ್ತು. ಇತ್ತೀಚೆಗೆ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಈ ಕುರಿತು ಕೆಪಿಎಸ್ಸಿ ಕಾರ್ಯದರ್ಶಿ ಜ್ಯೋತಿ ಅವರು, ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಸಾಧ್ಯತೆಗಳನ್ನು ತಳ್ಳಿ ಹಾಕಿದ್ದಾರೆ. ಕೆಪಿಎಸ್ಸಿ ಫಲಿತಾಂಶದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಿ ಫಲಿತಾಂಶ ಬಿಡುಗಡೆ ಮಾಡಲಾಗಿದೆ. ಯಾವುದೇ ಆಧಾರವಿಲ್ಲದೆ ಭ್ರಷ್ಟಾಚಾರದ ಆರೋಪ ಮಾಡುವುದು ಸರಿಯಲ್ಲ. ಈ ವಿಚಾರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಗಂಭೀರವಾಗಿ ಪರಿಗಣಿಸಿದ್ದು, ವರದಿ ಕೇಳಿದ್ದಾರೆ. ‘ಇನ್ನೆರಡು ದಿನಗಳಲ್ಲಿ ನಾವು ಸರ್ಕಾರಕ್ಕೆ ವಿವರವಾದ ವರದಿ ಸಲ್ಲಿಸಲಿದ್ದೇವೆ. ಆಂತರಿಕವಾಗಿಯೂ ತನಿಖೆ ನಡೆಯಲಿದೆ’ ಎಂದು ತಿಳಿಸಿದ್ದಾರೆ.

ಇಷ್ಟು ಮಂದಿ ಪಾಸ್‌ ಆಗಿರೋದು ಮೊದಲು:

ಸುಮಾರು 5,700ಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಂದು ಕೊಠಡಿಯಲ್ಲಿ 24 ಅಭ್ಯರ್ಥಿಗಳು ಇರುತ್ತಾರೆ. ಅದರಲ್ಲಿ 10 ರಿಂದ 12 ಅಭ್ಯರ್ಥಿಗಳು ಆಯ್ಕೆಯಾಗುವುದು ಸಂಭವನೀಯ. ಆದರೆ, ಕೆಪಿಎಸ್‌ಸಿ ಇತಿಹಾಸದಲ್ಲೇ ಒಂದೇ ರೂಮ್‌ನಲ್ಲಿ ಇಷ್ಟು ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಪಾಸ್ ಆಗಿರುವುದು ಇದೇ ಮೊದಲು ಎನಿಸುತ್ತದೆ. ಇದನ್ನು ನಾನು ಖುದ್ದಾಗಿ ತನಿಖೆ ನಡೆಸುತ್ತಿದ್ದೇನೆ, ಇದಕ್ಕಾಗಿ ಯಾವುದೇ ಪ್ರತ್ಯೇಕ ಸಮಿತಿ ರಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯಾವುದು ಈ ಪರೀಕ್ಷೆ?

- 384 ಗ್ರೂಪ್‌ ‘ಎ’ ಮತ್ತು ‘ಬಿ’ ಹುದ್ದೆಗಳ ನೇಮಕಾತಿಗೆ 2024ರ ಫೆ.26ರಂದು ಕೆಪಿಎಸ್ಸಿ ಅಧಿಸೂಚನೆ

- ಪ್ರಶ್ನೆಪತ್ರಿಕೆಯಲ್ಲಿ ಕನ್ನಡ ಅನುವಾದದಲ್ಲಿ ಸಾಕಷ್ಟು ಲೋಪ. ವಿವಾದ. ಮರುಪರೀಕ್ಷೆಗೆ ಸರ್ಕಾರ ಆದೇಶ

- 2025ರ ಮೇ ತಿಂಗಳಿನಲ್ಲಿ ಮರುಪರೀಕ್ಷೆ. 1:3 ಅನುಪಾತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

- ಈಗ ಮುಖ್ಯ ಪರೀಖ್ಷೆ ಫಲಿತಾಂಶ ಪ್ರಕಟ. ಅದರಲ್ಲಿ ಅಕ್ರಮವಾಗಿರುವ ಬಗ್ಗೆ ಅಭ್ಯರ್ಥಿಗಳ ಅನುಮಾನ

ಆಕ್ರೋಶ ಏಕೆ?

- ಕೆಪಿಎಸ್‌ಸಿ ನಡೆಸಿದ್ದ ಮುಖ್ಯ ಪರೀಕ್ಷೆಯನ್ನು ಒಂದೇ ಕೊಠಡಿಯಲ್ಲಿ ಬರೆದಿದ್ದ 15 ಮಂದಿ ಸಂದರ್ಶನಕ್ಕೆ ಆಯ್ಕೆ

- ಒಂದೇ ಕುಟುಂಬದ ಮೂವರಿಗೆ ವ್ಯಕ್ತಿತ್ವ ಪರೀಕ್ಷೆಗೆ ಅರ್ಹತೆ. ಪರೀಕ್ಷೆ ಬರೆದಿದ್ದ ಇತರೆ ಅಭ್ಯರ್ಥಿಗಳಿಗೆ ಶಂಕೆ

- ಅಕ್ರಮ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫಲಿತಾಂಶದ ವಿರುದ್ಧ ಅಭ್ಯರ್ಥಿಗಳಿಂದ ಆಕ್ರೋಶ

- ಬೆನ್ನಲ್ಲೇ ವರದಿ ನೀಡುವಂತೆ ಕೆಪಿಎಸ್‌ಸಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಸೂಚನೆ

ತನಿಖೆ ನಡೆಯುತ್ತಿದೆ

ಒಂದು ಕೊಠಡಿಯಲ್ಲಿ 24 ಅಭ್ಯರ್ಥಿಗಳು ಇರುತ್ತಾರೆ. ಅದರಲ್ಲಿ 10 ರಿಂದ 12 ಅಭ್ಯರ್ಥಿಗಳು ಆಯ್ಕೆಯಾಗುವುದು ಸಂಭವನೀಯ. ಆದರೆ, ಕೆಪಿಎಸ್‌ಸಿ ಇತಿಹಾಸದಲ್ಲೇ ಒಂದೇ ರೂಮ್‌ನಲ್ಲಿ ಇಷ್ಟು ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಪಾಸ್ ಆಗಿರುವುದು ಇದೇ ಮೊದಲು ಎನಿಸುತ್ತದೆ. ಭ್ರಷ್ಟಾಚಾರ ನಡೆದಿಲ್ಲ. ಆದರೂ ಇದನ್ನು ನಾನು ಖುದ್ದಾಗಿ ತನಿಖೆ ನಡೆಸುತ್ತಿದ್ದೇನೆ.

- ಜ್ಯೋತಿ, ಕೆಪಿಎಸ್ಸಿ ಕಾರ್ಯದರ್ಶಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

60 ವರ್ಷದ ಬಳಿಕ ಆಲೂರು ಕಾಲೋನಿಗೆ ಸಿಸಿ ರಸ್ತೆ ಭಾಗ್ಯ
ಭೂದಾಖಲೆಗಳಿಗಾಗಿ ರೈತರು ಅಲೆದಾಡುವಂತಿಲ್ಲ