ಪಂಪ್‌ಸೆಟ್‌ ಸಬ್ಸಿಡಿಗೆ ವಾರ್ಷಿಕ ₹19000 ಕೋಟಿ : ಸಿಎಂ ಸಿದ್ದರಾಮಯ್ಯ

Published : Jun 12, 2025, 08:17 AM IST
Karnataka CM Siddaramaiah (Photo: ANI)

ಸಾರಾಂಶ

ರಾಜ್ಯ ಸರ್ಕಾರ ಪ್ರತಿ ವರ್ಷ 19,000 ಕೋಟಿ ರು.ಗಳನ್ನು ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸಬ್ಸಿಡಿಯಾಗಿ ನೀಡುತ್ತಿದೆ. ನಾವೇ ಅಧಿಕಾರಕ್ಕೆ ಬಂದು ಈ ಯೋಜನೆಯನ್ನು ಜಾರಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಿಕ್ಕಬಳ್ಳಾಪುರ/ಗೌರಿಬಿದನೂರು : ರಾಜ್ಯ ಸರ್ಕಾರ ಪ್ರತಿ ವರ್ಷ 19,000 ಕೋಟಿ ರು.ಗಳನ್ನು ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸಬ್ಸಿಡಿಯಾಗಿ ನೀಡುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಆರಂಭಿಸಲೇ ಇಲ್ಲ. ನಾವೇ ಅಧಿಕಾರಕ್ಕೆ ಬಂದು ಈ ಯೋಜನೆಯನ್ನು ಜಾರಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ನೇತಾಜಿ ಕ್ರೀಡಾಂಗಣದಲ್ಲಿ ಬುಧವಾರ ‘ಕುಸುಮ್-ಸಿ’ ಯೋಜನೆಗೆ ಚಾಲನೆಗೆ ನೀಡಿ ಅವರು ಮಾತನಾಡಿದರು. ಕೃಷಿ ಫೀಡರ್‌ಗಳ ಸೋಲಾರ್‌ ವಿದ್ಯುತ್‌ ಮೂಲಕ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸುವ ಯೋಜನೆಯಿದು.

ಇದೇ ವೇಳೆ, 70 ಮೆ.ವ್ಯಾ ಸಾಮರ್ಥ್ಯದ ಸೌರವಿದ್ಯುತ್‌ ಘಟಕಕ್ಕೆ ಸಿಎಂ ಚಾಲನೆ ನೀಡಿದರು. 70 ಮೆವ್ಯಾ ವಿದ್ಯುತ್ ಉತ್ಪಾದನೆಯ ಈ ಸೌರವಿದ್ಯುತ್‌ ಘಟಕದಿಂದ ರೈತರಿಗೆ ಹಗಲಿನಲ್ಲೇ 3 ಫೇಸ್ ವಿದ್ಯುತನ್ನು 5 ಗಂಟೆಗಳ ಕಾಲ ಒದಗಿಸಲಾಗುತ್ತದೆ. ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಹೋಬಳಿ ಹನುಮೇನಹಳ್ಳಿ ಮತ್ತು ಚರಕಮಟ್ಟೇನಹಳ್ಳಿ ಗ್ರಾಮದ ಸುಮಾರು 60 ಎಕರೆ ಪ್ರದೇಶದಲ್ಲಿ 20 ಮೆ.ವ್ಯಾ.ಸಾಮರ್ಥ್ಯದಲ್ಲಿ ಸೋಲಾರ್ ಘಟಕ ಸ್ಥಾಪಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಕುಸುಮ್- ಸಿ ಯೋಜನೆಯಡಿ ಸ್ಥಾಪಿಸಲಾಗಿರುವ ಅತಿ ದೊಡ್ಡ ಘಟಕ ಇದಾಗಿದೆ ಎಂದರು.

ಸಂಪೂರ್ಣ ಗುಣಮಟ್ಟದ ವಿದ್ಯುತ್ ರೈತರ ಪಂಪ್ ಸೆಟ್‌ಗಳಿಗೆ ಸಿಗುತ್ತಿರುವುದರಿಂದ ವಿದ್ಯುತ್ ಅಪವ್ಯಯ ಆಗುವುದು ತಪ್ಪಿದೆ. ಹೆಸರಿಗೆ ಇದು ಕೇಂದ್ರದ ಯೋಜನೆ. ಆದರೆ, ರಾಜ್ಯ ಸರ್ಕಾರ ಶೇ. 50ರಷ್ಟು ಹಣ ಕೊಡುತ್ತದೆ. ಶೇ.20ರಷ್ಟು ಹಣ ಹೂಡಿಕೆದಾರರದ್ದು. ಕೇಂದ್ರ ಸರ್ಕಾರ ಕೊಡುವುದು ಕೇವಲ ಶೇ. 30ರಷ್ಟು ಹಣ. ಆದರೂ ಇದಕ್ಕೆ ಕೇಂದ್ರದ ಯೋಜನೆ ಎಂದು ಹೆಸರಿಟ್ಟಿದ್ದಾರೆ. ಒಂದು ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ 3 ಕೋಟಿ ಖರ್ಚಾದರೆ ಒಂದು ಕೋಟಿ ಮಾತ್ರ ಕೇಂದ್ರ ಸರ್ಕಾರದ್ದು. ಉಳಿದದ್ದನ್ನು ನಾವು ಕೊಡ್ತೇವೆ ಎಂದು ವಿವರಿಸಿದರು.

ನಾವು ಚುನಾವಣೆಗೂ ಮೊದಲು ಕೊಟ್ಟಿದ್ದ ಭರವಸೆಗಳಲ್ಲಿ ಬಹುಪಾಲನ್ನು ಈಗಾಗಲೇ ಈಡೇರಿಸಿ ರಾಜ್ಯದ ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ್ದದ್ದೆಲ್ಲವನ್ನೂ ಈಡೇರಿಸಿ ನುಡಿದಂತೆ ನಡೆಯುವ ನಮ್ಮ ಪರಂಪರೆಯನ್ನು ಮುಂದುವರೆಸುತ್ತೇವೆ ಎಂದರು.

ಜಲಜೀವನ್ ಯೋಜನೆ

ಜಲಜೀವನ್ ಯೋಜನೆಯಡಿ ರಾಜ್ಯ ಸರ್ಕಾರ ಶೇ.50ರಷ್ಟು ಅನುದಾನ ನೀಡಿದೆ. ಶೇ. 30ರಷ್ಟು ಮಾತ್ರ ಕೇಂದ್ರ ಸರ್ಕಾರ ನೀಡುತ್ತದೆ. ಶೇ.20ರಷ್ಟನ್ನು ಫಲಾನುಭವಿಗಳು ನೀಡುತ್ತಾರೆ. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ರಾಜ್ಯ ಸರ್ಕಾರದ ಪಾಲು ಹೆಚ್ಚಿದ್ದರೂ ಆಯುಷ್ಮಾನ್ ಭಾರತ್ ಯೋಜನೆ ಎನ್ನುತ್ತಾರೆ. ಅನೇಕ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಪ್ರಧಾನ ಮಂತ್ರಿಗಳ ಹೆಸರಿರುತ್ತದೆ. ಒಪ್ಪದೇ ಹೋದರೆ ಆ ಅನುದಾನವೂ ಬರುವುದಿಲ್ಲ. ರೈತರಿಗೆ ಒಳ್ಳೆಯದಾಗಬೇಕು ಎಂಬ ಉದ್ದೇಶದಿಂದ ಇದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.

ಬಿಜೆಪಿ ಎಲ್ಲದರಲ್ಲಿಯೂ ರಾಜಕೀಯ ಮಾಡುತ್ತದೆ:

ಇದಕ್ಕೂ ಮೊದಲು ಗೌರಿಬಿದನೂರಿನ ಹೆಲಿಪ್ಯಾಡ್‌ನಲ್ಲಿ ಮಾತನಾಡಿ, ಬಿಜೆಪಿಯವರಿಗೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದು ಮತ್ತು ರಾಜಕೀಯವಾಗಿ ರಾಜೀನಾಮೆ ಕೇಳುವುದು ಅಭ್ಯಾಸವಾಗಿದೆ. ಬಿಜೆಪಿ ಎಲ್ಲದರಲ್ಲೂ ರಾಜಕೀಯ ಮಾಡೇ ಮಾಡುತ್ತದೆ ಎಂದು ಆರೋಪಿಸಿದರು.

ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ 40-50 ಜನ ಕಾಲ್ತುಳಿತದಲ್ಲಿ ಸತ್ತರು. ಆಗ ಅಲ್ಲಿನ ಮುಖ್ಯಮಂತ್ರಿಗಳ ರಾಜೀನಾಮೆ ಕೇಳಿದರೇ?. ಬಿಹಾರದಲ್ಲಿ ಸೇತುವೆಯೊಂದು ಉದ್ಘಾಟನೆಯಾದ ದಿನವೇ ಬಿದ್ದು 140 ಜನ ಸತ್ತರು. ಆಗ ಪ್ರಧಾನಿಗಳ ರಾಜಿನಾಮೆ ಕೇಳಿದರೇ?. ಗುಜರಾತ್‌ನ ಗೋಧ್ರಾ ಹತ್ಯಾಕಾಂಡದಲ್ಲಿ ಎಷ್ಟು ಜನ ಸತ್ತರು. ಆಗ ಗುಜರಾತ್ ಮುಖ್ಯಮಂತ್ರಿ ಯಾರಾಗಿದ್ದರು, ಅವರ ರಾಜಿನಾಮೆ ಕೇಳಿದರೇ?. ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಸರಬರಾಜು ಮಾಡದೇ 23 ಜನ ಸತ್ತಾಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಿದರೆ? ಎಂದು ಪ್ರಶ್ನಿಸಿದರು.

ಆರ್ಥಿಕ ಸ್ಥಿತಿ ಚೆನ್ನಾಗಿದೆ:

ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಕಳೆದ ವರ್ಷ 52,000 ಕೋಟಿ ರೂ.ಗಳ ಬಂಡವಾಳ ವೆಚ್ಚ ಇತ್ತು. ಈ ವರ್ಷ 83 ಸಾವಿರ ಕೋಟಿಯಾಗಿದೆ. ಬಂಡವಾಳ ವೆಚ್ಚ ಒಂದು ವರ್ಷದಲ್ಲಿ 31,000 ಕೋಟಿ ಹೆಚ್ಚಾಗಿದೆ. ಹೀಗಿರುವಾಗ ಸರ್ಕಾರ ದಿವಾಳಿ ಹೇಗೆ ಆಗುತ್ತದೆ. ಗ್ಯಾರಂಟಿ ಯೋಜನೆಗಳಿಗೆ ಐವತ್ತು ಸಾವಿರ ಕೋಟಿಗೂ ಹೆಚ್ಚು ಅನುದಾನ ಒದಗಿಸಲಾಗಿದೆ ಎಂದರು.

ನಮ್ಮ ಸರ್ಕಾರ ಎರಡು ವರ್ಷಗಳಲ್ಲಿ 593 ಭರವಸೆಗಳಲ್ಲಿ 242 ಭರವಸೆಗಳನ್ನು ಈಡೇರಿಸಿದ್ದು, ಕೇಂದ್ರ ಸರ್ಕಾರ 600 ಭರವಸೆಗಳನ್ನು ನೀಡಿ ಶೇ.10ರಷ್ಟನ್ನೂ ಅನುಷ್ಠಾನ ಮಾಡಿಲ್ಲ ಎಂದರು.

90 ದಿನದಲ್ಲಿ ಮರು ಜಾತಿಗಣತಿ:

ಇಂದು ಕರ್ನಾಟದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿದ್ದೇನೆ. ಜಾತಿಗಣತಿ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಳ್ಳಲಾಗುವುದು ಹಾಗೂ ಜಾತಿಗಣತಿಯ ದತ್ತಾಂಶ ಹತ್ತು ವರ್ಷ ಹಳೆಯದಾಗಿರುವುದರಿಂದ ಮರುಗಣತಿ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಪರಿಶಿಷ್ಟ ಜಾತಿಗಳ ಜನಗಣತಿ ನಡೆದಂತೆ, ಇತರ ಜಾತಿಗಳ ಗಣತಿಯನ್ನು ಹೊಸದಾಗಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಸಮೀಕ್ಷಾ ಕಾರ್ಯವನ್ನು 90 ದಿನದೊಳಗೆ ಪೂರ್ಣಗೊಳಿಸಿ ವರದಿ ನೀಡಬೇಕಾಗುವುದು. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಕಡಿಮೆ ಅವಧಿಯಲ್ಲಿ ಮರುಗಣತಿ ಕೈಗೊಳ್ಳಲು ಸೂಚಿಸಿದ್ದಾರೆ ಎಂದರು.

ಕಾಂತರಾಜ ಆಯೋಗ ವರದಿ ಕುರಿತು ಪಕ್ಷದ ವರಿಷ್ಠರು ತೆಗೆದುಕೊಂಡ ನಿರ್ಧಾರದಿಂದ ತಮಗೆ ನಿರಾಸೆ ಆಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷದ ವರಿಷ್ಠರು ನಿರ್ಧಾರ ಮಾಡಿದಂತೆ ನಾವು ಕ್ರಮ ಕೈಗೊಳ್ಳುತ್ತೇವೆ. ಇದು ನಮ್ಮ ತೀರ್ಮಾನವಲ್ಲ ಎಂದರು.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು