ದಾಬಸ್‍ಪೇಟೆ: ಖಾಸಗಿ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಧಗಧಗನೆ ಹೊತ್ತುರಿದ ಭೀಕರ ಘಟನೆ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-48ರ ಸೋಂಪುರ ಹೋಬಳಿಯ ಹನುಮಂತಪುರ ಗೇಟ್ ಬಳಿ ಶುಕ್ರವಾರ ಮುಂಜಾನೆ 3 ಗಂಟೆ ಸಮಯದಲ್ಲಿ ನಡೆದಿದೆ

ದಾಬಸ್‍ಪೇಟೆ: ಖಾಸಗಿ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಧಗಧಗನೆ ಹೊತ್ತುರಿದ ಭೀಕರ ಘಟನೆ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-48ರ ಸೋಂಪುರ ಹೋಬಳಿಯ ಹನುಮಂತಪುರ ಗೇಟ್ ಬಳಿ ಶುಕ್ರವಾರ ಮುಂಜಾನೆ 3 ಗಂಟೆ ಸಮಯದಲ್ಲಿ ನಡೆದಿದೆ.

ಬೆಂಗಳೂರಿನಿಂದ ಕಲ್ಬುರ್ಗಿ ಕಡೆಗೆ ಹೊರಟಿದ್ದ ಸಂಜನಾ ಟ್ರಾವಲ್ಸ್ ಸ್ಲೀಪರ್ ಕೋಚ್ ಖಾಸಗಿ ಬಸ್ ಅಪಘಾತಕ್ಕೀಡಾಗಿ ಬಸ್ ನಲ್ಲಿದ್ದ ಸುಮಾರು 40 ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಘಟನಾ ವಿವರ: ನೆಲಮಂಗಲ-ದಾಬಸ್‍ಪೇಟೆ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಸ್ ನಿಧಾನವಾಗಿ ಸಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡಿದೆ. ಬಸ್‌ನಲ್ಲಿ ಬೆಂಕಿ ಕಾಣುತ್ತಿದ್ದಂತೆ ಚಾಲಕ ಹಾಗೂ ಪ್ರಯಾಣಿಕರು ತಕ್ಷಣ ಬಸ್‍ನಿಂದ ಹೊರಬಂದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಕಣ್ಣೆದುರೇ ಖಾಸಗಿ ಬಸ್ ಧಗಧಗನೆ ಹೊತ್ತುರಿದ ದೃಶ್ಯ ಭಯಾನಕವಾಗಿತ್ತು. ಘಟನೆ ಬಳಿಕ ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ಪರಾರಿಯಾಗಿದ್ದಾರೆ.

ಬೆಂಕಿಗೆ ಆಹುತಿಯಾದ ವಸ್ತುಗಳು: ಪ್ರಯಾಣಿಕರ ಲಗೇಜ್ ಬಾಕ್ಸ್‌ನಲ್ಲಿದ್ದ ಸೆಂಟ್ ಬಾಟಲ್, ಕಾಸ್ಮೆಟಿಕ್ ಉತ್ಪನ್ನಗಳು, ಅಗರಬತ್ತಿ, ಹಿತ್ತಾಳೆ ತಂಬುಗೆ, ಬಟ್ಟೆಗಳು ಸೇರಿದಂತೆ ಎಲ್ಲವೂ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಟೋಲ್ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಬರುವಷ್ಟರಲ್ಲಿ, ಸಂಜನಾ ಟ್ರಾವಲ್ಸ್ ಖಾಸಗಿ ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ನೆಲಮಂಗಲ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರ ಠಾಣೆ ಪೊಲೀಸರು, ತ್ಯಾಮಗೊಂಡ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಪೋಟೋ 4 *5 :

ಹನುಮಂತಪುರದ ಬಳಿ ಹೊತ್ತಿ ಉರಿದ ಖಾಸಗಿ ಬಸ್.