ನಾಡಿದ್ದಿಂದ 2 ದಿನ ಉಷ್ಣ ಅಲೆ - ಮಾ.20ರಿಂದ 2 ದಿನ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಸಾರಾಂಶ

ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಮಾ.18 ಹಾಗೂ 19ಕ್ಕೆ ಉಷ್ಣ ಅಲೆ ಬೀಸುವ ಸಾಧ್ಯತೆ ಇದೆ. ಜತೆಗೆ. ಮಾ.20 ರಿಂದ ಎರಡು ದಿನ ರಾಜ್ಯದ ವಿವಿಧ ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು : ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಮಾ.18 ಹಾಗೂ 19ಕ್ಕೆ ಉಷ್ಣ ಅಲೆ ಬೀಸುವ ಸಾಧ್ಯತೆ ಇದೆ. ಜತೆಗೆ. ಮಾ.20 ರಿಂದ ಎರಡು ದಿನ ರಾಜ್ಯದ ವಿವಿಧ ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಉಷ್ಣಾಂಶದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದೆ. ಈಗಾಗಲೇ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 40 ಡಿ.ಸೆ. ಹಾಗೂ ಬಾಗಲಕೋಟೆಯಲ್ಲಿ 39.5 ಡಿ.ಸೆ. ದಾಖಲಾಗಿದೆ. ಇದರಿಂದ ಉಷ್ಣಅಲೆ ಬೀಸುವ ಸಾಧ್ಯತೆ ಇದೆ.

ಹೀಗಾಗಿ, ಸಾರ್ವಜನಿಕರು ಮಧ್ಯಾಹ್ನ 12 ರಿಂದ 3 ಗಂಟೆ ಅವಧಿಯಲ್ಲಿ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ, ಹೊರಗೆ ಹೋಗುವಾದ ಛತ್ರಿ, ಟೋಪಿ ಬಳಕೆ ಮಾಡಿ. ಪ್ರಾಣಿಗಳಿಗೆ ನೆರಳು ಹಾಗೂ ಕುಡಿಯಲು ನೀರಿನ ವ್ಯವಸ್ಥೆ ಮಾಡಿ ಎಂದು ಸಲಹೆ ನೀಡಿದೆ. ಇನ್ನು ರಾಯಚೂರು 38.4, ಬೀದರ್‌ 38.2, ವಿಜಯಪುರ 38, ಗದಗ 37.6, ಬೆಳಗಾವಿ, ಕೊಪ್ಪಳದಲ್ಲಿ ತಲಾ 37, ಧಾರಾವಾಡ 36.7, ಮಂಡ್ಯದಲ್ಲಿ 37, ಚಿತ್ರದುರ್ಗ 36.5, ದಾವಣಗೆರೆ ಹಾಗೂ ಶಿವಮೊಗ್ಗದಲ್ಲಿ 36, ಬೆಂಗಳೂರಿನಲ್ಲಿ 35.4 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಮಾ.20 ರಿಂದ ಹಗುರ ಮಳೆ ಸೂಚನೆ:

ಮಾ.20 ರಿಂದ ಎರಡು ದಿನ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ವಿವಿಧ ಜಿಲ್ಲೆಗಳಾದ ಬೆಂಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಬೀದರ್‌, ಕಲಬುರಗಿ, ರಾಯಚೂರು ಸೇರಿ ಹಲವು ಕಡೆ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Share this article