ವ್ಯಾಸನಕೆರೆ ಅಕ್ರಮ ಗಣಿಗಾರಿಕೆ ಕೇಸ್‌: ಮಾಜಿ ಸಚಿವ ಆನಂದ್‌ ಸಿಂಗ್‌ ಖುಲಾಸೆ - ಜನಪ್ರತಿನಿಧಿಗಳ ವಿಶೇಷ ನ್ಯಾಯಾಲ ಆದೇಶ

ಸಾರಾಂಶ

ಬಳ್ಳಾರಿಯ ವ್ಯಾಸನಕೆರೆ ಗಣಿ ಪ್ರದೇಶದಲ್ಲಿ ಅಕ್ರಮವಾಗಿ ಸಾವಿರಾರು ಟನ್‌ ಅದಿರು ತೆಗೆದು, ರಫ್ತು ಮಾಡಿದ ಆರೋಪದಿಂದ ಮಾಜಿ ಸಚಿವ ಬಿಜೆಪಿಯ ಆನಂದ್ ಸಿಂಗ್‌ ಅವರನ್ನು ಖುಲಾಸೆಗೊಳಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

 ಬೆಂಗಳೂರು : ಬಳ್ಳಾರಿಯ ವ್ಯಾಸನಕೆರೆ ಗಣಿ ಪ್ರದೇಶದಲ್ಲಿ ಅಕ್ರಮವಾಗಿ ಸಾವಿರಾರು ಟನ್‌ ಅದಿರು ತೆಗೆದು, ರಫ್ತು ಮಾಡಿದ ಆರೋಪದಿಂದ ಮಾಜಿ ಸಚಿವ ಬಿಜೆಪಿಯ ಆನಂದ್ ಸಿಂಗ್‌ ಅವರನ್ನು ಖುಲಾಸೆಗೊಳಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಒಂದು ದಶಕದ ಹಿಂದೆ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ದೂರು ಕುರಿತು ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (ನಗರದ 81ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ) ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಮಾ.7ರಂದು ತೀರ್ಪು ಈ ನೀಡಿದ್ದಾರೆ.

ಇದೇ ವೇಳೆ ಗೋವಾದ ಮೆ.ನೈವೇದ್ಯ ಲಾಜಿಸ್ಟಿಕ್ಸ್‌ ಕಂಪನಿಯ ನಿರ್ದೇಶಕರೂ ಆದ ಗೋವಾ ಹಾಲಿ ಪ್ರವಾಸೋದ್ಯಮ ಸಚಿವ ರೋಹನ್‌ ಕೌಂಟೆ, ರಾಜೇಶ್‌ ಅಶೋಕ್‌ ಕೌಂಟೆ, ಮಾಜಿ ಸಚಿವ ಆನಂದ್‌ ಸಿಂಗ್‌ ಅವರು ಪಾಲುದಾರಿಕೆ ಹೊಂದಿರುವ ಹೊಸಪೇಟೆಯ ಎಸ್‌.ಬಿ.ಮಿನರಲ್ಸ್‌ನ ಇತರೆ ಪಾಲುದಾರರಾಗಿರುವ ಬಿ.ಪಿ.ಆನಂದ್‌ ಕುಮಾರ್‌ ಸಿಂಗ್‌, ಬಿ.ಎಸ್‌.ಗೋಪಾಲ್‌ ಸಿಂಗ್‌, ಬಿ.ಎಸ್‌.ಪಾಂಡುರಂಗ ಸಿಂಗ್‌ ಮತ್ತಿತರೆ ಆರೋಪಿಗಳನ್ನೂ ಖುಲಾಸೆಗೊಳಿಸಿ ನ್ಯಾಯಾಲಯ ಆದೇಶಿಸಿದೆ.

ಆನಂದ್‌ ಸಿಂಗ್‌ ಅವರು ಪಾಲುದಾರಿಕೆ ಹೊಂದಿರುವ ಹೊಸಪೇಟೆಯ ಎಸ್‌.ಬಿ.ಮಿನರಲ್ಸ್‌ ಕಂಪನಿ, 16,987.69 ಮೆಟ್ರಿಕ್‌ ಟನ್‌ ಅದಿರು ತೆಗೆದು ಮೆ.ಈಗಲ್‌ ಟ್ರೇಡರ್ಸ್‌ ಕಂಪನಿ ಸೇರಿ ಹಲವು ಗಣಿ ಕಂಪನಿಗೆ ಮಾರಾಟ ಮಾಡಿದೆ. ಇನ್ನು ಮುಂಬೈನ ಪಿಸೆಸ್‌ ಎಕ್ಸಿಮ್‌ ಕಂಪನಿಯೊಂದಿಗೆ 14 ಸಾವಿರ ಟನ್‌ ಅದಿರನ್ನು ಕಾರವಾರ ಬಂದರಿನಿಂದ ಮತ್ತು 16 ಸಾವಿರ ಟನ್‌ ಅದಿರನ್ನು ಬೇಲೇಕೇರಿ ಬಂದರಿನಿಂದ ಸಾಗಣೆ ಮಾಡುವುದಾಗಿ ಎಸ್‌.ಬಿ.ಮಿನರಲ್ಸ್‌ ಒಪ್ಪಂದ ಮಾಡಿಕೊಂಡಿತ್ತು.

ಪಿಸೆಸ್‌ ಕಂಪನಿಯು 2009-10ರಲ್ಲಿ 11,397 ಟನ್‌ ಅದಿರನ್ನು ವಿವಿಧ ಡೀಲರ್‌ಗಳಿಂದ ಪಡೆದಿದೆ. ಆದರೆ, ಆ ಅದಿರು ತೆಗೆಯಲು ಮತ್ತು ಸಾಗಿಸಲು ಸರ್ಕಾರದಿಂದ ಪರವಾನಗಿ ಪಡೆದಿಲ್ಲ. ಹೀಗಿದ್ದರೂ ಅಷ್ಟು ಅದಿರನ್ನು ಮುಂಬೈನ ಪಿಸೆಸ್ ಎಕ್ಸಿಮ್‌ ಮಾಲೀಕರು ಪಡೆಯಲು ಆನಂದ್‌ ಸಿಂಗ್‌ ನೆರವು ನೀಡಿದ್ದಾರೆ ಎಂದು ಲೋಕಾಯುಕ್ತ ತನಿಖಾಧಿಕಾರಿಗಳು (ಪ್ರಾಸಿಕ್ಯೂಷನ್‌) ಆರೋಪಿಸಿದ್ದರು.

ಆದರೆ, ಮೊದಲಿಗೆ ಅದಿರು ಅಕ್ರಮ ಸಾಗಣೆ ಮಾಡಿದ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಕೊನೆಯ ತನಿಖಾಧಿಕಾರಿ ಮಾತ್ರ ಆ ಆರೋಪಿಗಳನ್ನು ಸಾಕ್ಷಿಗಳಾಗಿ ಪರಿಗಣಿಸಿ ದೊಷಾರೋಪಪಟ್ಟಿ ಸಲ್ಲಿಸಿದ್ದಾರೆ. ಅಂದರೆ ಅದಿರು ಸಾಗಿಸಿದವರನ್ನು ಪ್ರಕರಣದಿಂದ ಹೊರಗಿಡಲಾಗಿದೆ. ಅದಕ್ಕೆ ಕಾರಣಗಳು ಆ ತನಿಖಾಧಿಕಾರಿಗೇ ಗೊತ್ತಾಗಬೇಕು.

ಸಾಕಷ್ಟು ಲೋಪ:

ಇನ್ನೂ ದೊಷಾರೋಪ ಪಟ್ಟಿಯಲ್ಲಿ ಸಾಕಷ್ಟು ಲೋಪಗಳಿದ್ದು, ಅವುಗಳನ್ನು ವಿಚಾರಣೆ ಸಂದರ್ಭದಲ್ಲಿ ಸರಿಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಲಿಲ್ಲ. ಯಾವುದೇ ಅನುಮಾನಗಳಿಗೆ ಎಡೆಮಾಡಿಕೊಡದೆ ಆನಂದ್‌ ಸಿಂಗ್‌ ಅವರ ಮೇಲಿನ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಲೋಕಾಯುಕ್ತ ಪೊಲೀಸರು ವಿಫಲವಾಗಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಇಡೀ ಪ್ರಕರಣದಲ್ಲಿ ಅಕ್ರಮವಾಗಿ ಅದಿರು ಸಾಗಿಸಿದವರನ್ನು ಪ್ರಕರಣದಿಂದ ಕೈ ಬಿಟ್ಟು ವಹಿವಾಟಿನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕೆಲವರನ್ನು ಮಾತ್ರ ಆರೋಪಿಗಳೆಂದು ಪರಿಗಣಿಸಲಾಗಿದೆ. ಅಕ್ರಮವಾಗಿ ಅದಿರು ತೆಗೆಯಲಾಗಿದೆ ಎಂದು ಆರೋಪ ಮಾಡಿದಾಗ, ಆ ಅದಿರನ್ನು ಅನಧಿಕೃತವಾಗಿ ತೆಗೆದು, ಸಂಗ್ರಹಿಸಿ, ಸಾಗಣೆ ಹಾಗೂ ಮಾರಾಟ ಮಾಡಿದವರನ್ನು ಆರೋಪಿಗಳಾಗಿ ಪರಿಗಣಿಸಬೇಕಿತ್ತು. ಅಕ್ರಮ ಎಸಗಿದವರ ಚೈನ್‌ ಲಿಂಕ್‌ ತಿಳಿಸದ ಹೊರತು ಅಪರಾಧ ಕೃತ್ಯ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ಅದಿರು ತೆಗೆಯಲು ಗಣಿ ಗುತ್ತಿಗೆ ಕಂಪನಿಗಳಿಗೆ ಸರ್ಕಾರ ನೀಡಿದ್ದ ಪರವಾನಗಿಗಳ ಕುರಿತು ಸತ್ಯಾಸತ್ಯತೆ ಪರಿಶೀಲಿಸದೆ ಲೋಕಾಯುಕ್ತ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಕಾನೂನಿನ ಪ್ರಕಾರ ತನಿಖೆ ನಡೆಸುತ್ತಾರೆ ಎಂಬ ನಂಬಿಕೆಯಿಂದ ಸರ್ಕಾರ ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸಿತ್ತು. ಲೋಕಾಯುಕ್ತ ಪೊಲೀಸರು ಮಾತ್ರ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧದ ಅಪರಾಧಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದ್ದಾರೆ. ಇದು ದುರದೃಷ್ಟಕರ ಎಂದು ಆದೇಶದಲ್ಲಿ ನ್ಯಾಯಾಧೀಶರು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ವಿವರ: ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ, ಅದಿರು ಸಂಗ್ರಹಿಸಿದ ಮತ್ತು ವಿದೇಶಕ್ಕೆ ರಫ್ತು ಮಾಡಿದ ಆರೋಪದಡಿ 2015ರಲ್ಲಿ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿದ್ದರು. ನಂತರ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಸರ್ಕಾರಕ್ಕೆ ತೆರಿಗೆ ಹಾಗೂ ರಾಜಧನ ಪಾವತಿಸದೆ ಸಾವಿರಾರು ಟನ್‌ ಅದಿರು ತೆಗೆಯಲಾಗಿದೆ. ಗೋವಾದ ಪಿಸೆಸ್‌ ಎಕ್ಸಿಮ್‌ ಕಂಪನಿಗೆ 11 ಸಾವಿರ ಮೆಟ್ರಿಕ್‌ ಟನ್‌ ಅದಿರು ಖರೀದಿಸಲು ಆನಂದ್‌ ಸಿಂಗ್‌ ಅವರು ಸಹಾಯ ಮಾಡಿದ್ದಾರೆ.

ಬೇಲಿಕೇರಿ ಮತ್ತು ಕಾರವಾರ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮಾಡಿ ರಾಜ್ಯ ಸರ್ಕಾರಕ್ಕೆ 1.53 ಕೋಟಿ ರು. ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ತನಿಖೆ ನಡೆಸಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌, ಗಣಿ ಮತ್ತು ಖನಿಜಗಳು(ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ)-1957 ಮತ್ತು ಕರ್ನಾಟಕ ಅರಣ್ಯ ಅಧಿನಿಯಮಗಳು-1969 ಅಡಿ ಶಿಕ್ಷಾರ್ಹ ಅಪರಾಧಗಳ ಸಂಬಂಧ ಆನಂದ್‌ ಸಿಂಗ್‌ ಸೇರಿ ಇತರೆ ಹಲವು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Share this article