2 ಲಕ್ಷ ಶಾಲಾ ಮಕ್ಕಳಿಗೆ ಇನ್ನೂ ಸಿಕ್ಕಿಲ್ಲ ಶೂ, ಸಾಕ್ಸ್‌!

Published : Aug 20, 2026, 05:45 AM IST
Leather shoes

ಸಾರಾಂಶ

ಶಾಲೆ ಆರಂಭವಾಗಿ ಮೂರು ತಿಂಗಳು ಕಳೆದರೂ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೈಕಿ 2 ಲಕ್ಷಕ್ಕೂ ಹೆಚ್ಚು ಚಿಣ್ಣರಿಗೆ ಇನ್ನೂ ಶೂ, ಸಾಕ್ಸ್‌ ದೊರಕಿಲ್ಲ. ಇದರ ಜತೆಗೆ, ಹೆಚ್ಚುವರಿಯಾಗಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಈವರೆಗೂ ಕೆಲ ಪುಸ್ತಕಗಳು ಸಿಗದೆ ಸಮಸ್ಯೆ ಅನುಭವಿಸುವಂತಾಗಿದೆ.

 ಲಿಂಗರಾಜು ಕೋರಾ

ಬೆಂಗಳೂರು : ಶಾಲೆ ಆರಂಭವಾಗಿ ಮೂರು ತಿಂಗಳು ಕಳೆದರೂ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೈಕಿ 2 ಲಕ್ಷಕ್ಕೂ ಹೆಚ್ಚು ಚಿಣ್ಣರಿಗೆ ಇನ್ನೂ ಶೂ, ಸಾಕ್ಸ್‌ ದೊರಕಿಲ್ಲ. ಇದರ ಜತೆಗೆ, ಹೆಚ್ಚುವರಿಯಾಗಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಈವರೆಗೂ ಕೆಲ ಪುಸ್ತಕಗಳು ಸಿಗದೆ ಸಮಸ್ಯೆ ಅನುಭವಿಸುವಂತಾಗಿದೆ.

ಅನೇಕ ವರ್ಷಗಳಿಂದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (ಎಸ್‌ಡಿಎಂಸಿ) ಖಾತೆಗೆ ಹಣ ನೀಡಿ ಆಯಾ ಶಾಲಾ ಮಕ್ಕಳಿಗೆ ಸ್ಥಳೀಯವಾಗಿಯೇ ಶೂ, ಸಾಕ್ಸ್‌ ಖರೀದಿಸಲು ಸೂಚಿಸುತ್ತಿದ್ದ ಸರ್ಕಾರ ಈ ಬಾರಿ ಇಡೀ ರಾಜ್ಯದ ಎಲ್ಲಾ ಶಾಲೆಗಳ ಮಕ್ಕಳಿಗೆ ಟೆಂಡರ್‌ ಮೂಲಕ ಶೂ, ಸಾಕ್ಸ್‌ ಖರೀದಿ ನಡೆಸಿ ಸರಬರಾಜು ಮಾಡುತ್ತಿದೆ. ಇದರಿಂದ ಶಾಲೆ ಆರಂಭವಾಗುವ ವೇಳೆಗೆ ಶೂ, ಸಾಕ್ಸ್‌ ವಿತರಣೆ ಆಗದೆ ತಡವಾಗಿದೆ.

ಇಲಾಖೆ ಮಾಹಿತಿ ಪ್ರಕಾರ, ಸರ್ಕಾರಿ ಶಾಲೆಗಳಲ್ಲಿನ 1ರಿಂದ 10ನೇ ತರಗತಿವರೆಗಿನ 36.61 ಲಕ್ಷ ಮಕ್ಕಳಿಗೆ ಈ ಬಾರಿ ತಲಾ ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್‌ ವಿತರಣೆಗೆ ಕಳೆದ ಮಾ.16ರಂದೇ ಕಾರ್ಯಾದೇಶ ನೀಡಲಾಗಿದೆ. ಇದಕ್ಕಾಗಿ 111 ಕೋಟಿ ರು. ಅನುದಾನ ಒದಗಿಸಲಾಗಿದೆ. ಆದರೆ, ಆ.10ರವರೆಗೆ 21.92 ಲಕ್ಷ ಮಕ್ಕಳಿಗೆ ಶೂ, ಸಾಕ್ಸ್‌ ವಿತರಿಸಲಾಗಿದೆ. ಉಳಿದ 14 ಲಕ್ಷಕ್ಕೂ ಹೆಚ್ಚು ಮಕ್ಕಳ ಪೈಕಿ 12.59 ಲಕ್ಷಕ್ಕೂ ಹೆಚ್ಚು ಮಕ್ಕಳ ಶೂ, ಸಾಕ್ಸ್‌ ಸಾಗಣೆ ಹಂತದಲ್ಲಿದ್ದರೆ, 2.09 ಲಕ್ಷ ಮಕ್ಕಳ ಶೂ, ಸಾಕ್ಸ್‌ಗಳು ಉತ್ಪಾದನಾ ಹಂತದಲ್ಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಚ್ಚುವರಿ ಮಕ್ಕಳಿಗೆ ಸಿಗದ ಪಠ್ಯಪುಸ್ತಕ:

ಇನ್ನು, ಇಲಾಖೆ ನಿರೀಕ್ಷಿತ ಲೆಕ್ಕಾಚಾರಕ್ಕಿಂತ ಕೊಂಚ ಹೆಚ್ಚಿನ ಸಂಖ್ಯೆಯಲ್ಲಿ ಅಥವಾ ತಡವಾಗಿ ದಾಖಲಾದ ಮಕ್ಕಳಿಗೆ ವಿವಿಧ ಪಠ್ಯಪುಸ್ತಕಗಳೂ ದೊರಕಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಇದು ಸರ್ಕಾರಿ ಶಾಲೆಗಳಲ್ಲಿ ಮಾತ್ರವಲ್ಲ, ಖಾಸಗಿ ಶಾಲೆಗಳ ಮಕ್ಕಳಿಗೂ ಸಮಸ್ಯೆಯಾಗಿದೆ. ಈ ಪೈಕಿ ಪ್ರೌಢಶಾಲಾ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನ ಪಠ್ಯಪುಸ್ತಕಗಳು ಸಿಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ.

ಪ್ರತಿ ವರ್ಷ ಶಿಕ್ಷಣ ಇಲಾಖೆಯ ಸ್ಟೂಡೆಂಟ್ ಅಚೀವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಮ್‌(ಎಸ್‌ಎಟಿಎಸ್‌) ತಂತ್ರಾಂಶದಲ್ಲಿ ಲಭ್ಯವಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಮುದ್ರಿಸಿ ಸರಬರಾಜು ಮಾಡಲಾಗುತ್ತದೆ. ಖಾಸಗಿ ಶಾಲೆಗಳಿಂದ ಬೇಡಿಕೆ ಪಡೆದು ಮುದ್ರಿಸಿ ನೀಡಲಾಗುತ್ತದೆ. ಆದರೆ, ಪ್ರತೀ ವರ್ಷ ವಿವಿಧ ಕಾರಣಗಳಿಂದ ಹೆಚ್ಚುವರಿಯಾಗಿ ಒಂದಷ್ಟು ಮಕ್ಕಳು ದಾಖಲಾಗುತ್ತಿರುತ್ತಾರೆ. ಪೋಷಕರ ವಲಸೆ, ಉದ್ಯೋಗ, ಸ್ಥಳ ಬದಲಾವಣೆ, ಮತ್ತಿತರ ಕಾರಣಗಳಿಂದ ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಮಕ್ಕಳ ವರ್ಗಾವಣೆ ಆಗುತ್ತಿರುತ್ತದೆ. ಇದರಿಂದ ಕೆಲ ಶಾಲೆಗಳಿಗೆ ಹೆಚ್ಚುವರಿ ದಾಖಲಾತಿ ಆಗುತ್ತಿರುತ್ತದೆ. ಈ ಪೈಕಿ ಕೆಲ ಮಕ್ಕಳು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ, ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗೂ ದಾಖಲಾಗುತ್ತಾರೆ. ಅಂಥ ಮಕ್ಕಳ ಲೆಕ್ಕ ಇಲಾಖೆಗೆ ಸಿಗುವುದು ಅವರ ದಾಖಲಾತಿ ಆದ ಬಳಿಕವೇ. ಆ ಮಕ್ಕಳ ಲೆಕ್ಕದಲ್ಲಿ ಹೆಚ್ಚುವರಿ ಪಠ್ಯಪುಸ್ತಕಕ್ಕೆ ಶಾಲೆಗಳು ಹೆಚ್ಚುವರಿ ಬೇಡಿಕೆ ಸಲ್ಲಿಸಿದ್ದರೂ ಈವರೆಗೂ ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘ ಸರಬರಾಜು ಮಾಡಿಲ್ಲ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿ, ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ಪ್ರತಿನಿಧಿಗಳ ಆರೋಪವಾಗಿದೆ.

ಪ್ರತಿ ವರ್ಷ ಸಮಸ್ಯೆ

ಹೆಚ್ಚುವರಿ ದಾಖಲಾತಿ ಮಕ್ಕಳಿಗೆ ಹೊಸದಾಗಿ ಲೆಕ್ಕ ಪಡೆದು ತಡವಾಗಿ ಪುಸ್ತಕ ಮುದ್ರಿಸಿಕೊಡುವುದರಿಂದ ಪ್ರತೀ ವರ್ಷ ಈ ಸಮಸ್ಯೆ ಆಗುತ್ತಿದೆ. ಅಷ್ಟರೊಳಗೆ ಮೊದಲನೇ ಸೆಮಿಸ್ಟರ್ ಮುಗಿದೇ ಹೋಗಿರುತ್ತದೆ. ಇದರಿಂದ ಮಕ್ಕಳು ಕಲಿಕೆಯಲ್ಲಿ ತುಂಬಾ ಹಿಂದೆ ಬೀಳುತ್ತಾರೆ. ಇಲಾಖೆ ವಿಳಂಬ ನೀತಿ ಸರಿಪಡಿಸಿಕೊಳ್ಳಬೇಕು. ಮೊದಲೇ ಒಂದಷ್ಟು ಪುಸ್ತಕಗಳನ್ನು ಹೆಚ್ಚುವರಿಯಾಗಿ ಮುದ್ರಿಸಿಕೊಂಡರೆ ಸರ್ಕಾರವೇನೂ ಬಡವಾಗುವುದಿಲ್ಲ.

- ನಿರಂಜನಾರಾಧ್ಯ, ಶಿಕ್ಷಣ ತಜ್ಞ

ಟಾಪ್‌- ಸಿಗೋದ್ಯಾವಾಗ?

- ಹೆಚ್ಚುವರಿಯಾಗಿ ದಾಖಲಾದ ಮಕ್ಕಳಿಗೆ ಪುಸ್ತಕಗಳೂ ಇಲ್ಲ

- ಈ ಮೊದಲೆಲ್ಲಾ, ಎಸ್‌ಡಿಎಂಸಿಗಳ ಬ್ಯಾಂಕ್‌ ಖಾತೆಗೆ ರಾಜ್ಯ ಸರ್ಕಾರ ಹಣ ವರ್ಗಾವಣೆ ಮಾಡುತ್ತಿತ್ತು

- ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿಗಳೇ ಶೂ, ಸಾಕ್ಸ್‌ ಖರೀದಿಸಿ ಮಕ್ಕಳಿಗೆ ವಿತರಣೆ ಮಾಡುತ್ತಿದ್ದವು

- ಆದರೆ ಈ ಬಾರಿ ಟೆಂಡರ್‌ ಮೂಲಕ ಶೂ, ಸಾಕ್ಸ್‌ ಖರೀದಿ. ಹೀಗಾಗಿ ವಿದ್ಯಾರ್ಥಿಗಳಿಗೆ ವಿತರಣೆ ವಿಳಂಬ

- ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 36.61 ಲಕ್ಷ ವಿದ್ಯಾರ್ಥಿಗಳು. 21.91 ಲಕ್ಷ ಮಕ್ಕಳಿಗೆ ಸಿಕ್ಕಿದೆ ಶೂ, ಸಾಕ್ಸ್‌.

-12.59 ಲಕ್ಷ ಮಕ್ಕಳಿಗೆ ಸದ್ಯದಲ್ಲೇ ಸಿಗಲಿದೆ ಶೂ, ಸಾಕ್ಸ್. 2.09 ಲಕ್ಷ ಮಕ್ಕಳಿಗೆ ಸದ್ಯ ಸಿಗೋದು ಡೌಟು

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಅರಣ್ಯ ಇಲಾಖೆಯ ವಿರುದ್ಧ ಜನರಿಂದ ಬಾಂಬ್‌ ರಿವೆಂಜ್‌
ನಾಗೇಂದ್ರ ವಜಾವರೆಗೆ ಹೋರಾಟ: ಪ್ರತಿಪಕ್ಷ