ನಾಗೇಂದ್ರ ವಜಾವರೆಗೆ ಹೋರಾಟ: ಪ್ರತಿಪಕ್ಷ

Published : Aug 20, 2026, 05:33 AM IST
Nagendra

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣದ ಆರೋಪ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬುಧವಾರವೂ ವಿಧಾನಸಭೆಯಲ್ಲಿ ಪ್ರತಿಪಕ್ಷಗಳಿಂದ ಗದ್ದಲ ಮುಂದುವರೆದಿದ್ದು, ಗಲಾಟೆಗೆ ಅರ್ಧ ದಿನದ ಕಲಾಪ ಬಲಿಯಾಯಿತು.

ವಿಧಾನಸಭೆ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣದ ಆರೋಪ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬುಧವಾರವೂ ವಿಧಾನಸಭೆಯಲ್ಲಿ ಪ್ರತಿಪಕ್ಷಗಳಿಂದ ಗದ್ದಲ ಮುಂದುವರೆದಿದ್ದು, ಗಲಾಟೆಗೆ ಅರ್ಧ ದಿನದ ಕಲಾಪ ಬಲಿಯಾಯಿತು. ಗದ್ದಲದ ನಡುವೆಯೇ ಪ್ರಶ್ನೋತ್ತರ ನಡೆಸಿ, ವಿಧೇಯಕಗಳ ಮಂಡನೆ ಮಾಡಿ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಬುಧವಾರ ಮಧ್ಯಾಹ್ನ ಮಾಜಿ ಸಚಿವ ಬಿ.ಸಿ.ನಾಗೇಶ್‌ ಅವರ ಕುರಿತ ಸಂತಾಪ ಸೂಚನೆ ನಿರ್ಣಯ ಅಂಗೀಕರಿಸಿದ ಬೆನ್ನಲ್ಲೇ ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಲು ಶುರು ಮಾಡಿದರು. ಭ್ರಷ್ಟ ನಾಗೇಂದ್ರ ಅವರನ್ನು ವಜಾಗೊಳಿಸಬೇಕು. ಅಲ್ಲಿಯವರೆಗೆ ಸದನ ನಡೆಯಲು ಬಿಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಸ್ಪಷ್ಟಪಡಿಸಿದರು.

ಬಿಜೆಪಿ ಸದಸ್ಯರು, ‘ದಲಿತರ ಹಣ ಎಲ್ಲಿ ಹೋಯಿತು.. ರಾಹುಲ್‌ಗಾಂಧಿ ಮನೆಗೆ ಹೋಯಿತು’ ಎಂದು ಘೋಷಣೆಗಳನ್ನು ಕೂಗಿದ್ದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಅಯೋಧ್ಯೆ ರಾಮಮಂದಿರ ಹಣ ಆರ್‌ಎಸ್‌ಎಸ್‌, ಬಿಜೆಪಿ ಕಚೇರಿಗೆ ಹೋಯಿತು ಘೋಷಣೆ ಕೂಗತೊಡಗಿದರು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸದನ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.

ಅರ್ಧಗಂಟೆ ಬಳಿಕ ಸೇರಿದಾಗಲೂ ಗಲಾಟೆ

ಅರ್ಧಗಂಟೆ ಬಳಿಕ ಸೇರಿದಾಗಲೂ ಗಲಾಟೆ ಮುಂದುವರೆಯಿತು. ಗಲಾಟೆ ನಡುವೆಯೇ ಬಿ.ನಾಗೇಂದ್ರ ಅವರನ್ನು ಸಮರ್ಥಿಸಿಕೊಂಡು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಹೇಳಿಕೆ ನೀಡಿದರು. ಬಳಿಕ ಗದ್ದಲ ಜೋರಾದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಮಧ್ಯಾಹ್ನದ ಅವಧಿಗೆ ಕಲಾಪ ಮುಂದೂಡಿದರು.

ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಭೋಜನ ವಿರಾಮದ ಬಳಿಕ ಸದನಕ್ಕೆ ಬಂದ ಪ್ರತಿಪಕ್ಷಗಳ ಸದಸ್ಯರು ಭಿತ್ತಿಪತ್ರ ಪ್ರದರ್ಶಿಸಿ ಹೋರಾಟ ಮುಂದುವರೆಸಿದರು.

ರಾಹುಲ್‌ಗಾಂಧಿ, ರಾಜ್ಯ ಸರ್ಕಾರ, ಬಿ.ನಾಗೇಂದ್ರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಸದಸ್ಯರು ರಾಮಮಂದಿರ ಹುಂಡಿ ಹಣ ಎಲ್ಲಿ ಹೋಯಿತು ಎಂದು ಘೋಷಣೆ ಕೂಗಿದ್ದರಿಂದ ಗದ್ದಲ ತೀವ್ರಗೊಂಡಿತು. ಗಲಾಟೆ, ಗದ್ದಲದ ನಡುವೆಯೇ ಪ್ರಶ್ನೋತ್ತರ, ಮೂರು ವಿಧೇಯಕಗಳ ಮಂಡನೆ ಮಾಡಿ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಸದನ ಬಾವಿಗಿಳಿದು ಧರಣಿ ನಡೆಸಿ: ಸ್ಪೀಕರ್‌ ಆಹ್ವಾನ!

ಈ ವೇಳೆ ಸಭಾಧ್ಯಕ್ಷ ಜಿ.ಎಸ್‌.ಪಾಟೀಲ್‌, ‘ನಿಮ್ಮ ಸಮಸ್ಯೆ, ಒತ್ತಾಯಗಳನ್ನು ಸರ್ಕಾರಕ್ಕೆ ಮುಟ್ಟಿಸಲು ಅವಕಾಶ ನೀಡಬೇಕು ಎಂದು ನಿಮ್ಮ ಪ್ರತಿಭಟನೆಗೆ ಅವಕಾಶ ನೀಡಿದ್ದೇನೆ. ಆದರೆ, ನೀವು ನಿಮ್ಮ ಸ್ಥಾನಗಳಲ್ಲೇ ನಿಂತು ಕೂಗಾಡಲು ಅವಕಾಶವಿಲ್ಲ. ಸದನದ ಬಾವಿಗೆ ಬಂದು ಧರಣಿ ಮಾಡಿ’ ಎಂದು ಹೇಳಿದರು.

ಈ ವೇಳೆ ಬಿಜೆಪಿಯ ಸುನೀಲ್‌ಕುಮಾರ್‌, ಸದಸ್ಯರನ್ನು ಸದನದ ಬಾವಿಗೆ ಆಹ್ವಾನಿಸಿದ ಇತಿಹಾಸದ ಮೊದಲ ಸ್ಪೀಕರ್‌ ನೀವು. ನಮ್ಮ ಪರ ಇದ್ದೀರಿ ಸರ್‌. ನೀವು ಏನು ಹೇಳಿದರೂ ಕೇಳುತ್ತೇವೆ ಎಂದು ವ್ಯಂಗ್ಯವಾಡಿದರು.

ಸಚಿವ ನಾಗೇಂದ್ರ ದೋಷಿಯಲ್ಲ: ಪರಂ

ಸಚಿವ ಬಿ.ನಾಗೇಂದ್ರ ಅವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ಯಾವ ನ್ಯಾಯಾಲಯವೂ ದೋಷಿಯೆಂದು ತೀರ್ಪು ನೀಡಿಲ್ಲ. ಎಸ್ಐಟಿ ದೋಷಾರೋಪ ಪಟ್ಟಿಯಲ್ಲೂ ನಾಗೇಂದ್ರ ಹೆಸರಿಲ್ಲ. ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ನಡೆ ಸಂಸದೀಯ ವ್ಯವಸ್ಥೆಗೆ ಅವಮಾನ.

- ಡಾ। ಜಿ. ಪರಮೇಶ್ವರ್‌, ಉಪಮುಖ್ಯಮಂತ್ರಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಶಿವಶಂಕರಪ್ಪ, ಪುತ್ರಿಗೆ ಇ.ಡಿ. ಅಧಿಕಾರಿಗಳ ಗ್ರಿಲ್‌
ಮಾಲೂರು-ಚಿಂತಾಮಣಿ ಬಸ್ ಸಂಚಾರ ಪುನಾರಂಭ