ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧಿಸಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ನಿವಾಸ ಸೇರಿ ರಾಜ್ಯಾದ್ಯಂತ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಸಿದ ದಾಳಿ
ಬೆಂಗಳೂರು : ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧಿಸಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ನಿವಾಸ ಸೇರಿ ರಾಜ್ಯಾದ್ಯಂತ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಸಿದ ದಾಳಿ ಎರಡನೇ ದಿನವೂ ಮುಂದುವರಿದಿದೆ.
ಅಕ್ರಮ ಹಣ ವರ್ಗಾವಣೆಯ ಶಂಕೆ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಇ.ಡಿ ಅಧಿಕಾರಿಗಳು, ಶಿವಶಂಕರಪ್ಪ ಸಾಹುಕಾರ್ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಹೊಯ್ಸಳ ಡ್ರೀಮ್ಸ್ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್, ಕಲಬುರಗಿ ನಿವಾಸ, ಆಯೋಗದ ಕೇಂದ್ರ ಕಚೇರಿ ಹಾಗೂ ಕೆಪಿಎಸ್‌ಸಿ ಸದಸ್ಯರ ನಿವಾಸಗಳು ಸೇರಿ 21ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿ ತಲಾಶ್ ನಡೆಸಿದ್ದರು. ಸತತ 36 ಗಂಟೆಗಳ ನಿರಂತರ ಶೋಧ ಕಾರ್ಯ ನಡೆಸಿದ್ದಾರೆ. ಗುರುವಾರವೂ ಪರಿಶೀಲನೆ ಮುಂದುವರಿಯುವ ಸಾಧ್ಯತೆ ಇದೆ.
ಸಾಹುಕಾರ್ ಕುಟುಂಬ ತೀವ್ರ ವಿಚಾರಣೆ:
ಶಿವಶಂಕರಪ್ಪ ಸಾಹುಕಾರ್, ಪುತ್ರಿ ಸುಮಾ ಸೇರಿ ಕುಟುಂಬದ ಸದಸ್ಯರನ್ನು ಮಂಗಳವಾರ ತಡರಾತ್ರಿಯವರೆಗೂ ಇ.ಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಪಶುವೈದ್ಯಾಧಿಕಾರಿ ನೇಮಕಾತಿ ಸೇರಿ ಇತರೆ ನೇಮಕಾತಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸಂಗ್ರಹ ಮಾಡಿಕೊಂಡಿರುವ ಇ.ಡಿ ಅಧಿಕಾರಿಗಳು ಆ ದಾಖಲೆಗಳನ್ನು ಮುಂದಿಟ್ಟುಕೊಂಡು ಶಿವಶಂಕರಪ್ಪ ಅವರನ್ನು ಬುಧವಾರ ಬೆಳಗ್ಗೆ 9 ಗಂಟೆಯಿಂದ ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕೆಪಿಎಸ್‌ಸಿ ಕಚೇರಿಯಲ್ಲೂ ಮುಂದುವರಿದ ತಲಾಶ್:
ಕೆಪಿಎಸ್‌ಸಿ ಕೇಂದ್ರ ಕಚೇರಿ ಮೇಲೆ ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದು, ಬುಧವಾರ ರಾತ್ರಿಯವರೆಗೂ ಪರಿಶೀಲನಾ ಕಾರ್ಯ ನಡೆಸಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಕಾಲಾವಧಿಯಲ್ಲಿ ನಡೆದ ನೇಮಕಾತಿಗಳ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ. 2021ರಿಂದ ಇಲ್ಲಿವರೆಗೂ ನಡೆದ ವಿವಿಧ ಇಲಾಖೆಗಳ ನೇಮಕಾತಿ, ನೇಮಕಾತಿ ಆದವರ ಪಟ್ಟಿ ಮತ್ತು ನೇಮಕಾತಿ ಪ್ರಕ್ರಿಯೆ ಬಗ್ಗೆ ಕೆಪಿಎಸ್‌ಸಿ ಕಾರ್ಯದರ್ಶಿಯಿಂದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ಒಎಂಆರ್ ಶೀಟ್ ಕೇಳಿದ ಅಧಿಕಾರಿಗಳು:
400 ಪಶುವೈದ್ಯಾಧಿಕಾರಿಗಳ ನೇಮಕಾತಿ ಕುರಿತ ಒಎಂಆರ್ ಶೀಟ್‌ಗಳನ್ನು ನೀಡುವಂತೆ ಇ.ಡಿ. ಅಧಿಕಾರಿಗಳು ಕೇಳಿದ್ದು, ಇದಕ್ಕೆ ಕೆಪಿಎಸ್‌ಸಿ ಅಧಿಕಾರಿಗಳು ಒಎಂಆರ್ ಶೀಟ್‌ಗಳನ್ನು ಸಿಐಡಿ ಅಧಿಕಾರಿಗಳು ಈಗಾಗಲೇ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಶಿವಶಂಕರಪ್ಪ ಸಾಹುಕಾರ್, ಮಧ್ಯವರ್ತಿಗಳು ಮತ್ತು ಸದಸ್ಯರ ನಡುವೆ ಸಂಪರ್ಕದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯದಲ್ಲೇ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.
ಯಾರ ಯಾರ ಮೇಲೆ ದಾಳಿ?:
ಶಿವಶಂಕರಪ್ಪ ಸಾಹುಕಾರ್, ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ, ಪರೀಕ್ಷಾ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನ ಮಾಡುವ ಅಹಮದಾಬಾದ್‌ನ ಎಜುಟೆಸ್ಟ್ ಸೊಲ್ಯೂಷನ್ಸ್ ಪ್ರೈ.ಲಿ, ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ಹುದ್ದೆಗೆ ಆಯ್ಕೆಯಾಗಿರುವ ಕೆಲ ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳ ನಿವಾಸ ಮೇಲೆ ದಾಳಿ ನಡೆಸಲಾಗಿದೆ.
ಸಾಹುಕಾರ್ ಬ್ಯಾಂಕ್ ಖಾತೆಗಳ ಪರಿಶೀಲನೆ
ಇ.ಡಿ ಅಧಿಕಾರಿಗಳು ಶಿವಶಂಕರಪ್ಪ ಸಾಹುಕಾರ್ ಮನೆಯಲ್ಲಿ ದಾಖಲೆಗಳು, ಬ್ಯಾಂಕ್ ಖಾತೆಗಳು ಹಾಗೂ ಅಕ್ರಮ ಹಣ ವರ್ಗಾವಣೆ ಸಂಬಂಧವೂ ಪರಿಶೀಲನೆ ನಡೆಸಿದ್ದಾರೆ. ಬೇನಾಮಿ ಆಸ್ತಿಯ ಪತ್ರಗಳು ಲಭ್ಯವಾಗಿವೆ ಎಂದು ತಿಳಿದು ಬಂದಿದೆ. ಶಿವಶಂಕರಪ್ಪ ಸಾಹುಕಾರ್ ಅವರಿಗೆ ಸೇರಿದ್ದ ಎರಡು ಮೊಬೈಲ್, ಎರಡು ಲ್ಯಾಪ್‌ಟಾಪ್‌ಗಳನ್ನು ಇ.ಡಿ. ಜಪ್ತಿ ಮಾಡಿದೆ.
