;Resize=(412,232))
ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಋತುವಿನಲ್ಲಿ ಒಣಹವೆ ಮುಂದುವರಿದಿದ್ದು, ಮಳೆ ಅಭಾವದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಹೆಚ್ಚುವರಿ 23 ತಾಲೂಕುಗಳನ್ನು ಬರಪೀಡಿತ ಎಂದು ಕಂದಾಯ ಇಲಾಖೆ ಅಧಿಕೃತವಾಗಿ ಘೋಷಿಸಿದೆ. ಈ ಸಂಬಂಧ ಗುರುವಾರ ಆದೇಶಿಸಲಾಗಿದೆ.
ಕಳೆದ ಆ.27ರಂದು ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಆದರೂ ರಾಜ್ಯದ ಹಲವೆಡೆ ಒಣಹವೆ ಮುಂದುವರಿದ ಕಾರಣ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಉಳಿದ 139 ತಾಲೂಕುಗಳಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ಸಲ್ಲಿಸಿತ್ತು.
ಕಂದಾಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ನೈಸರ್ಗಿಕ ವಿಕೋಪಗಳ ಸಂಪುಟ ಉಪಸಮಿತಿ ಸಭೆಯಲ್ಲಿ ನೀಡಿದ ನಿರ್ದೇಶನದಂತೆ 24 ತಾಲೂಕುಗಳ 214 ಹಳ್ಳಿಗಳಲ್ಲಿ ಮೊಬೈಲ್ ಆ್ಯಪ್ ಮೂಲಕ ‘ಗ್ರೌಂಡ್ ಟ್ರೂಥಿಂಗ್’ ನಡೆಸಲಾಯಿತು.
ಗ್ರೌಂಡ್ ಟ್ರೂಥಿಂಗ್ ಮತ್ತು ಕೆಎಸ್‍ಎನ್‌ಡಿಎಂಸಿ ಸಲ್ಲಿಸಿದ ಸಮಗ್ರ ವರದಿ ಆಧಾರದ ಮೇಲೆ ಇದೀಗ ಹೆಚ್ಚುವರಿಯಾಗಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇವುಗಳಲ್ಲಿ 21 ತಾಲೂಕುಗಳು ತೀವ್ರ ಬರಪೀಡಿತ ಹಾಗೂ 2 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಈ ಆದೇಶವು ತಕ್ಷಣದಿಂದ ಜಾರಿಗೆ ಬಂದಿದ್ದು, ಮುಂದಿನ ಆರು ತಿಂಗಳ ಅವಧಿಗೆ ಜಾರಿಯಲ್ಲಿರಲಿದೆ.
ಘೋಷಿತ ತಾಲೂಕುಗಳ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳಿಗೆ ರಾಜ್ಯ ವಿಪತ್ತು ಸ್ಪಂದನಾ ನಿಧಿ (ಎಸ್‌ಡಿಆರ್‌ಎಫ್) ಮಾರ್ಗಸೂಚಿಗಳಂತೆ ಅಗತ್ಯ ಪರಿಹಾರ ಮತ್ತು ಸ್ಪಂದನಾ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ. ಅಲ್ಲದೆ, ಕೃಷಿ ಆಯುಕ್ತರು, ತೋಟಗಾರಿಕೆ ನಿರ್ದೇಶಕರು ಮತ್ತು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿ, ಪರಿಹಾರ ವರದಿಯನ್ನು ತಕ್ಷಣವೇ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಸೆಪ್ಟೆಂಬರ್ ತಿಂಗಳಿನಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಕೆಎಸ್‍ಎನ್‌ಡಿಎಂಸಿ ವಾರಕ್ಕೊಮ್ಮೆ ಬರ ಪರಿಸ್ಥಿತಿಯನ್ನು ಪರಾಮರ್ಶಿಸಲಿದ್ದು, ಮುಂಬರುವ ದಿನಗಳಲ್ಲಿ ತಾಲೂಕುಗಳ ಅರ್ಹತೆಗೆ ಅನುಗುಣವಾಗಿ ಹೆಚ್ಚುವರಿ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಹಂತ-ಹಂತವಾಗಿ ಪ್ರಕಟಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ತೀವ್ರ ಬರಪೀಡಿತ: ತುಮಕೂರು ಜಿಲ್ಲೆಯ ತಿಪಟೂರು, ಕೊಪ್ಪಳ ಜಿಲ್ಲೆಯ ಕಾರಟಗಿ, ರಾಯಚೂರು ಜಿಲ್ಲೆಯ ಮಾನ್ವಿ, ಸಿಂಧನೂರು ಮತ್ತು ಸಿರಿವಾರ, ಕಲಬುರಗಿ ಜಿಲ್ಲೆಯ ಅಫಜಲಪುರ, ಆಳಂದ, ಚಿತ್ತಾಪುರ, ಕಲಬುರಗಿ, ಯಡ್ರಾಮಿ ಮತ್ತು ಶಹಾಬಾದ್, ಬೀದರ್ ಜಿಲ್ಲೆಯ ಭಾಲ್ಕಿ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಬಬಲೇಶ್ವರ ಮತ್ತು ತಿಕೋಟಾ, ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ನವಲಗುಂದ, ಹುಬ್ಬಳ್ಳಿ ನಗರ ಮತ್ತು ಅಣ್ಣಿಗೇರಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು.