ಬರ: ರೈತರಿಂದ ಸಾಲ ವಸೂಲಿಗೆ ಬ್ರೇಕ್‌

Published : Sep 17, 2026, 08:05 AM IST
Drought

ಸಾರಾಂಶ

ರಾಜ್ಯದ ಬರಪೀಡಿತ ತಾಲೂಕುಗಳ ರೈತರ ನೆರವಿಗಾಗಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಮರುಪಾವತಿಗೆ ಸಂಬಂಧಿಸಿ ಬ್ಯಾಂಕರ್‌ಗಳ ರಾಜ್ಯ ಮಟ್ಟದ ಸಮಿತಿ (ಎಸ್‌ಎಲ್‌ಬಿಸಿ) ವಿಶೇಷ ಪರಿಹಾರ ಯೋಜನೆ ಪ್ರಕಟಿಸಿದ್ದು, ಬರ ಪೀಡಿತ ತಾಲೂಕುಗಳಲ್ಲಿ ಬಲವಂತದ ಸಾಲ ವಸೂಲಾತಿ ನಿಷೇಧಿಸಲಾಗಿದೆ.

ಬೆಂಗಳೂರು : ರಾಜ್ಯದ ಬರಪೀಡಿತ ತಾಲೂಕುಗಳ ರೈತರ ನೆರವಿಗಾಗಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಮರುಪಾವತಿಗೆ ಸಂಬಂಧಿಸಿ ಬ್ಯಾಂಕರ್‌ಗಳ ರಾಜ್ಯ ಮಟ್ಟದ ಸಮಿತಿ (ಎಸ್‌ಎಲ್‌ಬಿಸಿ) ವಿಶೇಷ ಪರಿಹಾರ ಯೋಜನೆ ಪ್ರಕಟಿಸಿದ್ದು, ಬರ ಪೀಡಿತ ತಾಲೂಕುಗಳಲ್ಲಿ ಬಲವಂತದ ಸಾಲ ವಸೂಲಾತಿ ನಿಷೇಧಿಸಲಾಗಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ನೇತೃತ್ವದಲ್ಲಿ ನಡೆದ ಎಸ್‌ಎಲ್‌ಬಿಸಿ ಸಭೆಯಲ್ಲಿ ಬರ ಪೀಡಿತ ತಾಲೂಕುಗಳ ರೈತರ ನೆರವಿಗಾಗಿ ಕೆಲ ಪರಿಹಾರ ಯೋಜನೆಗಳನ್ನು ಘೋಷಿಸಲಾಯಿತು.

ರಾಜ್ಯದ 24 ಜಿಲ್ಲೆಗಳ ಒಟ್ಟು 101 ತಾಲೂಕುಗಳು ಬರಪೀಡಿತ

ರಾಜ್ಯದ 24 ಜಿಲ್ಲೆಗಳ ಒಟ್ಟು 101 ತಾಲೂಕುಗಳು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು, ಅದರಲ್ಲಿ 89 ತಾಲೂಕುಗಳು ತೀವ್ರ ಬರ ಪೀಡಿತ ಹಾಗೂ 12 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಸಾಮಾನ್ಯವಾಗಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌, ಕೃಷಿ ಸಾಲಗಳು, ಹೈನುಗಾರಿಕೆ, ರೇಷ್ಮೆ ಹಾಗೂ ಮೀನುಗಾರಿಕೆ ಸೇರಿ ಇತರ ಕೃಷಿ ಸಂಬಂಧಿತ ಸಾಲಗಳಿಗೆ 12 ತಿಂಗಳ ತಾತ್ಕಾಲಿಕ ತಡೆ ನೀಡಲಾಗುತ್ತದೆ. ಸಾಧಾರಣ ಬರ ಪೀಡಿತ ತಾಲೂಕುಗಳಲ್ಲಿ ಸಾಲ ಮರುಪಾವತಿ ಅವಧಿಯನ್ನು 36 ತಿಂಗಳಿಗೆ ಹಾಗೂ ತೀವ್ರ ಬರಪೀಡಿತ ತಾಲೂಕುಗಳಲ್ಲಿ 60 ತಿಂಗಳಿಗೆ ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕೇವಲ ಹಳೇ ಸಾಲ ಮರುಪಾವತಿ ಮುಂದೂಡುವುದು ಮಾತ್ರವಲ್ಲದೆ, ರೈತರ ತುರ್ತು ಅಗತ್ಯಕ್ಕೆ ಅನುಗುಣವಾಗಿ ಬ್ಯಾಂಕುಗಳು ತಮ್ಮ ನಿಯಮಗಳಂತೆ ಹೊಸ ಸಾಲಗಳನ್ನು ವಿತರಿಸಲಿವೆ. ಈ ಪರಿಹಾರ ಯೋಜನೆಗಳು ಆ. 11ರೊಳಗೆ ಜಾರಿಗೊಳಿಸಲಾಗುತ್ತದೆ. ಇದರ ಜತೆಗೆ ಸರ್ಕಾರ ಮುಂದೆ ಹೊಸದಾಗಿ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದರೆ ಆ ತಾಲೂಕುಗಳಿಗೂ ಈ ವಿನಾಯಿತಿ ಅನ್ವಯವಾಗಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಬಲವಂತದ ವಸೂಲಾತಿ ನಿಷೇಧ:

ಈ ವರ್ಷ ರೈತರಿಂದ ಯಾವುದೇ ರೀತಿಯ ಬಲವಂತದ ಸಾಲ ವಸೂಲಾತಿ ಮಾಡಬಾರದು. ಆ ಮೂಲಕ ಶೂನ್ಯ ಸಹಿಷ್ಣುತೆ ನೀತಿ ಜಾರಿಗೆ ತರಬೇಕು. ಬಲವಂತದ ವಸೂಲಾತಿ ಕುರಿತು ರೈತರಿಂದ ದೂರುಗಳು ಬಂದರೆ ಜಿಲ್ಲಾಡಳಿತ ತಕ್ಷಣವೇ ಸ್ಪಂದಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.

ಸಹಕಾರ ಬ್ಯಾಂಕ್‌ಗಳ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸುವ ಸಂಬಂಧ ನಬಾರ್ಡ್‌ ಹಾಗೂ ರಾಜ್ಯ ಸರ್ಕಾರದ ಹಂತದಲ್ಲಿ ಚರ್ಚಿಸಿ ಶೀಘ್ರ ಸೂಕ್ತ ಪರಿಹಾರ ರೂಪಿಸುವುದಾಗಿ ಮುಖ್ಯ ಕಾರ್ಯದರ್ಶಿ ಅವರು ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯದ 768 ಬಂಕ್‌ಗಳಲ್ಲಿ ಅಳತೆಯ ವ್ಯತ್ಯಾಸ ಪತ್ತೆ!
ಪೂಜೆ ಹೆಸ್ರಲ್ಲಿ ವೃದ್ಧೆಗೆ 40 ಲಕ್ಷ ರು.ಚಿನ್ನ ವಂಚಿಸಿದ ನಕಲಿ ಜ್ಯೋತಿಷಿ!