ಶೇ.30ರಷ್ಟು ಎಂಜಿನಿಯರಿಂಗ್ ಸೀಟ್ ಭರ್ತಿ ಆಗದಿರುವುದು ಕಳವಳ: ಶಾಲಿನಿ

Published : Sep 16, 2026, 09:58 AM IST
Engineering

ಸಾರಾಂಶ

ರಾಜ್ಯದಲ್ಲಿನ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಲಭ್ಯವಿರುವ ಒಟ್ಟು ಸೀಟುಗಳ ಪೈಕಿ ಶೇ.30ರಷ್ಟು ಸೀಟು ಭರ್ತಿಯಾಗದಿರುವುದು ಕಳವಳಕಾರಿ ಸಂಗತಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿನ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಲಭ್ಯವಿರುವ ಒಟ್ಟು ಸೀಟುಗಳ ಪೈಕಿ ಶೇ.30ರಷ್ಟು ಸೀಟು ಭರ್ತಿಯಾಗದಿರುವುದು ಕಳವಳಕಾರಿ ಸಂಗತಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಸಂಸ್ಥಾಪಕರ ದಿನಾಚರಣೆ

ಮಂಗಳವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಹಾಗೂ ಉದ್ಯಮಿ ಗೀತಾಂಜಲಿ ಕಿರ್ಲೋಸ್ಕರ್ ಅವರಿಗೆ ಸರ್ ಎಂ.ವಿಶ್ವೇಶ್ವರಯ್ಯ ಮೆಮೋರಿಯಲ್ ಅವಾರ್ಡ್-2026 ಪ್ರದಾನ ಮಾಡಿ ಮಾತನಾಡಿದ ಅವರು, ಎಂಜಿನಿಯರಿಂಗ್ ಶಿಕ್ಷಣವನ್ನು ಇಂದಿನ ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ಮೇಲ್ದರ್ಜೆಗೆ ಏರಿಸಿಕೊಳ್ಳುವ ತುರ್ತು ಅಗತ್ಯವಿದೆ ಎಂದರು.

ಎಂಜಿನಿಯರಿಂಗ್ ಒಂದು ವಿಷಯವಾಗಿ ವಿಕಸನಗೊಳ್ಳುವ ಅಗತ್ಯವಿದೆ. ಇಂದಿನ ಆರ್ಥಿಕತೆ, ಕೈಗಾರಿಕೆಗಳ ಬೇಡಿಕೆ ಏನಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಪಠ್ಯಕ್ರಮವನ್ನು ರೂಪಿಸಬೇಕು. ಅದಕ್ಕಾಗಿಯೇ ರಾಜ್ಯ ಸರ್ಕಾರ ಉದ್ಯೋಗ ಸೇತು ಯೋಜನೆಯನ್ನು ತಂದಿದೆ. ಬದಲಾಗುತ್ತಿರುವ ಜಗತ್ತಿನಲ್ಲಿ ಮುಂದಿನ 3 ವರ್ಷಗಳ ಅವಧಿಗೆ ಅಗತ್ಯವಿರುವ ಬದಲಾವಣೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದರು.

ವಾರ್ಷಿಕ 20,000 ಮಿಲಿಯನ್ ಡಾಲರ್‌ ಮೌಲ್ಯದ ರಫ್ತು ಅವಕಾಶ

ಉದ್ಯಮದಲ್ಲಿ ಪುರುಷರಂತೆ ಮಹಿಳೆಯರ ಪಾಲ್ಗೊಳ್ಳುವಿಕೆಯಿಂದ ದೇಶದ ಆರ್ಥಿಕತೆ ಶೇ.27ರಷ್ಟು ಬೆಳವಣಿಗೆ ಕಾಣುತ್ತದೆ ಎಂದು ಅಧ್ಯಯನವೊಂದರಲ್ಲಿ ಅಂದಾಜಿಸಲಾಗಿದೆ. ಇನ್ನು ಕರ್ನಾಟಕ ರಾಜ್ಯವೊಂದಕ್ಕೆ ವಿವಿಧ ವಲಯಗಳಲ್ಲಿ ವಾರ್ಷಿಕ 20,000 ಮಿಲಿಯನ್ ಡಾಲರ್‌ ಮೌಲ್ಯದ ರಫ್ತು ಅವಕಾಶಗಳು ಇವೆ. ಇದನ್ನು ಕೈಗಾರಿಕೆಗಳು ಬಳಸಿಕೊಳ್ಳಬೇಕು ಎಂದು ಶಾಲಿನಿ ರಜನೀಶ್ ಕರೆ ನೀಡಿದರು.

ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾದೇವಿ ಮಾತನಾಡಿ, ರಾಜ್ಯದ ಕೈಗಾರಿಕೆ, ಉದ್ಯಮ ಕ್ಷೇತ್ರದ ಬೆಳವಣಿಗೆಗೆ ಸರ್.ಎಂ.ವಿಶ್ವೇಶ್ವರಯ್ಯ ಭದ್ರ ಬುನಾದಿ ಹಾಕಿದರು. ಇಂದು ರಾಜ್ಯದ ಉದ್ಯಮ ಸಾಕಷ್ಟು ಬೆಳೆದಿದ್ದರೂ ಇನ್ನು ಬೆಳವಣಿಗೆ ಸಾಧಿಸಲು ವಿಫುಲ ಅವಕಾಶಗಳು ಇವೆ ಎಂದರು. ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಮುಂದಿನ ಅಧ್ಯಕ್ಷ ಟಿ. ಸಾಯಿರಾಮ್ ಪ್ರಸಾದ್ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

Dr., Prof., Tr. ಆಯ್ತು ಈಗ Er - ಎಂಜಿನಿಯರ್‌ಗಳ ಹೆಸರಿನ ಹಿಂದೆ ವಿಶೇಷಣ
ಉ.ಪಾಲಿಕೆ ವ್ಯಾಪ್ತಿ ರಾತ್ರಿ ಆಯುಕ್ತ ದಿಢೀರ್‌ ಭೇಟಿ