ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟಕ್ಕೆ ಜಲಾಶಯಗಳಿಗೆ ಒಳಹರಿವು ಹೆಚ್ಚಿದ್ದು, ಬೇಸಿಗೆಯಲ್ಲೇ ರಾಜ್ಯದ ಮೂರು ಜಲಾಶಯಗಳು ಭರ್ತಿಯಾಗಿವೆ.
ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟಕ್ಕೆ ಜಲಾಶಯಗಳಿಗೆ ಒಳಹರಿವು ಹೆಚ್ಚಿದ್ದು, ಬೇಸಿಗೆಯಲ್ಲೇ ರಾಜ್ಯದ ಮೂರು ಜಲಾಶಯಗಳು ಭರ್ತಿಯಾಗಿವೆ. ಹಾಸನದ ಯಗಚಿ, ಉತ್ತರ ಕನ್ನಡ ಜಿಲ್ಲೆ ಕದ್ರಾ ಹಾಗೂ ಶಿವಮೊಗ್ಗ ಜಿಲ್ಲೆಯ ಗಾಜನೂರು ಜಲಾಶಯಗಳು ಮುಂಗಾರು ಮಳೆಯ ಆಗಮನಕ್ಕೂ ಮುನ್ನವೇ ಭರ್ತಿಯಾಗಿವೆ. ಈ ಮಧ್ಯೆ, ಕೊಡಗಿನ ವಿರಾಜಪೇಟೆ ಸಮೀಪದ ಅರ್ಜಿ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು, ಗೌರಿ (46) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಾಜಧಾನಿ ಬೆಂಗಳೂರು, ಕೊಡಗು, ಮಲೆನಾಡು, ಕರಾವಳಿ ಸೇರಿ ರಾಜ್ಯದ 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶನಿವಾರವೂ ಮಳೆಯಾಗಿದೆ. ಭಾರಿ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಕದ್ರಾ ಜಲಾಶಯ ಭರ್ತಿಯಾಗಿದ್ದರಿಂದ ಎಂಸಿಎ ಅಧ್ಯಕ್ಷ ಸತೀಶ ಸೈಲ್ ಹಾಗೂ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಶನಿವಾರ ಬಾಗಿನ ಅರ್ಪಿಸಿದರು. ಈ ಬಾರಿ ಮೇ ತಿಂಗಳಿನಲ್ಲೇ ಜಲಾಶಯ ಭರ್ತಿಯಾಗಿ ಬಾಗಿನ ಅರ್ಪಿಸಿದ್ದು ವಿಶೇಷ.
ಶಿವಮೊಗ್ಗ ಸಮೀಪದ ಗಾಜನೂರು ಡ್ಯಾಂ ಕೂಡ ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲಾದರೂ ತುಂಗಾ ಜಲಾಶಯದಿಂದ ನದಿಗೆ ನೀರನ್ನು ಹೊರಬಿಡುವ ಸಾಧ್ಯತೆಯಿದೆ. ಕೇವಲ ಮೂರು ಟಿಎಂಸಿ ನೀರು ಸಂಗ್ರಹಣ ಸಾಮರ್ಥ್ಯದ ರಾಜ್ಯದ ಅತಿ ಚಿಕ್ಕ ಜಲಾಶಯಗಳಲ್ಲಿ ಇದು ಒಂದಾಗಿದೆ. ಮಳೆಯಿಂದಾಗಿ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕಬ್ಯಾಡಗೆರೆಯಲ್ಲಿರುವ ಯುಗಚಿ ಜಲಾಶಯ ಭರ್ತಿಯಾಗಿದ್ದು, ಶಾಸಕ ಎಚ್.ಕೆ.ಸುರೇಶ್ ಜಲಾಶಯಕ್ಕೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. 3.60 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಡ್ಯಾಂನಿಂದ 500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.
ಕೊಡಗಿನ ತಲಕಾವೇರಿ-ಭಾಗಮಂಡಲ ವ್ಯಾಪ್ತಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ ನದಿಗಳು ತುಂಬಿ ಹರಿಯುತ್ತಿವೆ. ತ್ರಿವೇಣಿ ಸಂಗಮ ಸ್ನಾನಘಟ್ಟ ಮುಳುಗಡೆಯಾಗುವ ಸಾಧ್ಯತೆಯಿದೆ. ಇತ್ತೀಚಿನ ವರ್ಷಗಳಲ್ಲಿ ಮೇ ತಿಂಗಳಲ್ಲಿ ಸುರಿದ ಅತಿ ಹೆಚ್ಚು ಮಳೆ ಇದು ಎನ್ನಲಾಗುತ್ತಿದೆ.
ಮಳೆಯಿಂದಾಗಿ ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, ಜಲಾಶಯದಲ್ಲಿ ಪ್ರಸ್ತುತ 10 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.
ಈ ಮಧ್ಯೆ, ಉಡುಪಿ ಜಿಲ್ಲೆಯಾದ್ಯಂತ ಮಳೆಗೆ ಮರಗಳು ಬಿದ್ದು 10 ಮನೆಗಳು ಜಖಂಗೊಂಡಿವೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ತ್ರಿಪುರ ಗ್ರಾಮದಲ್ಲಿ ಮರ ಬಿದ್ದು ಮಾರುತಿ ಕಾರೊಂದು ಜಖಂಗೊಂಡಿದೆ. ಅದೃಷ್ಟವಶಾತ್ ಅದರಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗೋನ್ವಾರದಲ್ಲಿ ಮನೆ ಮೇಲೆ ಮರ ಬಿದ್ದು, ಮನೆ ಜಖಂಗೊಂಡಿದೆ. ಮನೆಯೊಳಗಿದ್ದ ಐವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಮಧ್ಯೆ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಗೆ ಶನಿವಾರ ಮುಂಗಾರು ಪ್ರವೇಶವಾಗಿದ್ದು, ಕರಾವಳಿಯ ಅನೇಕ ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದೆ.