ನಗರದಲ್ಲಿ ತ್ವರಿತಾ ರಕ್ಷಣಾ ಕಾರ್ಯಕ್ಕೆ 4 ಬೋಟ್‌ ಖರೀದಿ

Published : May 31, 2025, 07:58 AM IST
Bengaluru rain

ಸಾರಾಂಶ

- ಮಳೆಗಾಲದಲ್ಲಿ ಸಂತ್ರಸ್ತ ಜನರ ತುರ್ತು ರಕ್ಷಣೆಗಾಗಿ ಬಿಬಿಎಂಪಿ ನಿರ್ಧಾರ-ಪ್ರತಿ ಸಲ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ನೆರವು ಪಡೆಯುತ್ತಿತ್ತು-ಈಗ ಪ್ರತ್ಯೇಕ ವಿಪತ್ತು ನಿರ್ವಹಣೆ ಸಾಧನ-ಸಲಕರಣೆ ಖರೀದಿಗೇ ಕ್ರಮ

 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ತ್ವರಿತವಾಗಿ ರಕ್ಷಣಾ ಕಾರ್ಯ ನಿರ್ವಹಿಸಲು 4 ಮೋಟಾರ್‌ ಚಾಲಿತ ಬೋಟ್‌ ಒಳಗೊಂಡಂತೆ ಪ್ರತ್ಯೇಕ ವಿಪತ್ತು ನಿರ್ವಹಣೆ ಸಾಧನ ಸಲಕರಣೆಗಳ ಖರೀದಿಗೆ ಬಿಬಿಎಂಪಿ ಮುಂದಾಗಿದೆ.

ಇತ್ತೀಚೆಗೆ ನಗರದಲ್ಲಿ ಬಿದ್ದ ಭಾರೀ ಮಳೆಯಿಂದ ಸುಮಾರು 50ಕ್ಕೂ ಅಧಿಕ ಬಡಾವಣೆಗಳು ಅಕ್ಷರಶಃ ದ್ವೀಪಗಳಾಗಿ ಮಾರ್ಪಡಿದ್ದವು. ಈ ಸಂದರ್ಭದಲ್ಲಿ ಆ ಬಡಾವಣೆಗಳಿಗೆ ಸಂಪರ್ಕಿಸುವ ರಸ್ತೆಗಳು ಜಲಾವೃತಗೊಂಡಿದ್ದವು. ಬಡಾವಣೆ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆ ತರಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್‌) ಬೋಟ್‌ಗಳನ್ನು ಬಳಕೆ ಮಾಡಿಕೊಳ್ಳಬೇಕಾಗಿತ್ತು. ಪ್ರತಿ ಬಾರಿ ಮಳೆ ಬಂದು ಪ್ರವಾಹ ಪರಿಸ್ಥಿತಿ ಉಂಟಾದಾಗಲೂ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ನೆರವು ಪಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಪ್ರತ್ಯೇಕ ವಿಪತ್ತು ನಿರ್ವಹಣೆ ಸಾಧನ-ಸಲಕರಣೆಗಳನ್ನು ಹೊಂದುವುದಕ್ಕೆ ಮುಂದಾಗಿದೆ.

4 ಬೋಟ್‌ ಸೇರಿ 9 ವಿವಿಧ ಸಾಧನ ಖರೀದಿ:

ಒಟ್ಟು 62 ಲಕ್ಷ ರು. ವೆಚ್ಚದಲ್ಲಿ ಬಿಬಿಎಂಪಿ 12 ಮಂದಿ ಪ್ರಯಾಣ ಮಾಡುವ ಸಾಮರ್ಥ್ಯವಿರುವ ಮೋಟರ್‌ ಚಾಲಿತ 4 ಬೋಟ್‌ಗಳು, 48 ಲೈಫ್‌ ಜಾಕೆಟ್‌, 48 ಬಾಡಿ ಜಾಕೆಟ್‌, 8 ಸಾವಿರ ಮೀಟರ್‌ ಉದ್ದದ ಹಗ್ಗ, 30 ವ್ಯಾಟ್‌ ಸಾಮರ್ಥ್ಯದ ಟಾರ್ಚ್‌, 74 ಬೋಲ್ಟ್ ಕಟ್ಟರ್, ನೀರಿನ ಪಂಪ್‌ಗಳನ್ನು ಖರೀದಿ ಮಾಡಲು ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ನಗರದಲ್ಲಿ ಹವಾಮಾನ ವೈಪರಿತ್ಯದಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡ ಸಂದರ್ಭದಲ್ಲಿ ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ಹಾಗೂ ಅಗ್ನಿ ಶಾಮಕ ದಳದ ಇಲಾಖೆ ಮೇಲೆ ಅವಲಂಬನೆ ಆಗಬೇಕಿದೆ. ತ್ವರಿತವಾಗಿ ಪರಿಹಾರ ಕಾರ್ಯಗಳನ್ನು ಬಿಬಿಎಂಪಿಯಿಂದ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಬೋಟ್‌ ಸೇರಿ ವಿಪತ್ತು ನಿರ್ವಹಣೆ ಸಾಧನ ಸಲಕರಣೆಗಳನ್ನು ಹೊಂದ ಬೇಕೆಂಬ ಉದ್ದೇಶದಿಂದ ಖರೀದಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಶಾಶ್ವತ ಪರಿಹಾರ ಬೇಕು:

ಬಿಬಿಎಂಪಿಯು ಬೋಟ್‌ ಖರೀದಿ ಮಾಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಶಾಶ್ವತ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡಬೇಕೆಂದು ನಾಗಕರfಕರು ಆಗ್ರಹಿಸಿದ್ದಾರೆ.

PREV
Read more Articles on

Recommended Stories

ಮಕ್ಕಳ ಕುಬ್ಜ ಬೆಳವಣಿಗೆ: 2 ಜಿಲ್ಲೆಯ ಸ್ಥಿತಿ ಕಳವಳ
ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ