ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (ಕೆಐಎ) ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, 2024-25ನೇ ಸಾಲಿನಲ್ಲಿ 4.18 ಕೋಟಿ ಮಂದಿ ಕೆಐಎ ಮೂಲಕ ವಿಮಾನ ಯಾನ ಸೇವೆ ಪಡೆದಿದ್ದಾರೆ.
ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (ಕೆಐಎ) ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, 2024-25ನೇ ಸಾಲಿನಲ್ಲಿ 4.18 ಕೋಟಿ ಮಂದಿ ಕೆಐಎ ಮೂಲಕ ವಿಮಾನ ಯಾನ ಸೇವೆ ಪಡೆದಿದ್ದಾರೆ.
ಈ ವಿಮಾನ ನಿಲ್ದಾಣದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, 2023-24ನೇ ಸಾಲಿನಲ್ಲಿ 3.75 ಕೋಟಿ ಜನರು ವಿಮಾನಯಾನ ಸೇವೆ ಪಡೆದಿದ್ದರೆ 2024-25ನೇ ಸಾಲಿನಲ್ಲಿ 4.18 ಕೋಟಿ ಪ್ರಯಾಣಿಕರು ವಿಮಾನಯಾನ ಸೇವೆ ಪಡೆದಿದ್ದಾರೆ. ಈ ಪೈಕಿ ದೇಶೀಯ ಪ್ರಯಾಣಿಕರ ಸಂಖ್ಯೆ 3.60 ಕೋಟಿ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ 58.3 ಲಕ್ಷಗಳಾಗಿವೆ.
ಕೆಐಎ ಮೂಲಕ ಸರಕು ಸಾಗಣೆ ಪ್ರಮಾಣವೂ ಹೆಚ್ಚಾಗಿದೆ. 2024-25ರಲ್ಲಿ 5.02 ಟನ್ ಸರಕು ಸಾಗಣೆ ಮಾಡಲಾಗಿದೆ. ಅದರಲ್ಲಿ ಅಂತಾರಾಷ್ಟ್ರೀಯ ಸರಕು ಸಾಗಣೆಯೇ ಹೆಚ್ಚಿದ್ದು, ಒಟ್ಟು 3.21 ಲಕ್ಷ ಟನ್ ಸರಕು ಸಾಗಣೆಯನ್ನು ವಿವಿಧ ದೇಶಗಳ ನಗರಗಳಿಗೆ ಸಾಗಿಸಲಾಗಿದೆ. ಇದೇ ವೇಳೆ ದೇಶದ ವಿವಿಧ ನಗರಗಳಿಗೆ 1.81 ಟನ್ ಕಳುಹಿಸಲಾಗಿದೆ. ಆ ಮೂಲಕ ಕೆಐಎ ದೇಶದಲ್ಲಿಯೇ ಬೇಗ ಹಾಳಾಗುವ ವಸ್ತುಗಳ ರಫ್ತಿನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.