ಬೆಂಗಳೂರು : ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದ್ದು, ಸಂಚಾರ ನಿಯಮ ಉಲ್ಲಂಘನೆಯ ಬಾಕಿ ಪ್ರಕರಣಗಳ ದಂಡದ ಮೊತ್ತ ಪಾವತಿಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿದೆ.
ಈ ಸಂಬಂಧ ಸರ್ಕಾರ ಗುರುವಾರ ಆದೇಶ ಹೊರಡಿಸಿದ್ದು, ಈ ತಿಂಗಳ 23ರಿಂದ ಮುಂದಿನ ಸೆ.19 ವರೆಗೆ ಈ ರಿಯಾಯಿತಿ ಸೌಲಭ್ಯ ಚಾಲ್ತಿಯಲ್ಲಿರುತ್ತದೆ. ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದೆ ಎಂದು ತಿಳಿಸಿದೆ.
ಇದರ ಬೆನ್ನಲ್ಲೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಗೆ ಸಂಚಾರ ಪೊಲೀಸರು ಅವಕಾಶ ನೀಡಿದ್ದಾರೆ. ತ್ವರಿತವಾಗಿ ಸಂಚಾರ ಉಲ್ಲಂಘನೆ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ಸಂಚಾರ ವಿಭಾಗದ ಪೊಲೀಸರೂ ಮನವಿ ಮಾಡಿದ್ದಾರೆ.
ಬಾಕಿ ಇರುವ ದಂಡದ ವಿವರಗಳನ್ನು ವೀಕ್ಷಿಸುವ ಮತ್ತು ಪಾವತಿಸುವ ವಿಧಾನ
1.ಕರ್ನಾಟಕ ಸ್ಟೇಟ್ ಪೊಲೀಸ್ (ಕೆಎಸ್‌ಪಿ) ಆ್ಯಪ್ ಮುಖಾಂತರ ಪಾವತಿಸಬಹುದು.
2.ಬೆಂಗಳೂರು ಪೊಲೀಸರ ಬಿಟಿಪಿ ಅಸ್ತ್ರಂ ಆ್ಯಪ್ ಮುಖಾಂತರ ಪಾವತಿಸಬಹುದು.
3.ಸಂಚಾರ ಪೊಲೀಸ್ ಠಾಣೆಗಳಲ್ಲಿ ವಾಹನ ನೋಂದಣಿ ಸಂಖ್ಯೆ ವಿವರ ಒದಗಿಸಿ ದಂಡ ಕಟ್ಟಬಹುದು.
4.ಸಂಚಾರ ನಿರ್ವಹಣಾ ಕೇಂದ್ರದಲ್ಲಿ (ಟಿಎಂಸಿ) ಪಾವತಿಸಬಹುದು.
5.ಕರ್ನಾಟಕ ಒನ್/ಬೆಂಗಳೂರು ಒನ್ ವೆಬ್‌ಸೈಟ್‌ನಲ್ಲಿ ವಿವರ ಪಡೆದು ಪಾವತಿಸಬಹುದು.