ಬೆಂಗಳೂರು : ಮಳೆಯ ಮಾರುತಗಳು ಉತ್ತರ ಭಾಗಕ್ಕೆ ಚಲಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ಐದಾರು ದಿನ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಕಳೆದೊಂದು ವಾರದಿಂದ ಧಾರಾಕಾರವಾಗಿ ಮಳೆಯಾಗುತ್ತಿತ್ತು. ಇದೀಗ ಮಳೆ ಮಾರುತಗಳು ದೇಶದ ಉತ್ತರಕ್ಕೆ ಚಲಿಸಿವೆ. ಈ ಕಾರಣಕ್ಕೆ ಮಳೆ ಕಡಿಮೆಯಾಗಲಿದೆ. ಆ.26 ಮತ್ತು 27ರಿಂದ ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆ ಚುರುಕುಗೊಳ್ಳುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಕರಾವಳಿ, ಮಲೆನಾಡು ಸೇರಿ ಇಡೀ ರಾಜ್ಯದಲ್ಲಿ ಮಳೆ ಕಡಿಮೆ ಇರಲಿದೆ.
ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ವರದಿ ಪ್ರಕಾರ ಕಳೆದ 24 ಗಂಟೆಯಲ್ಲಿ ಉತ್ತರ ಕನ್ನಡದ ಕ್ಯಾಸಲ್ ರಾಕ್‌ನಲ್ಲಿ ಅತಿ ಹೆಚ್ಚು 16 ಸೆಂ.ಮೀ. ಮಳೆಯಾಗಿದೆ. ಜಗಲ್‌ಬೆಟ್ 8, ಲೋಂಡಾ ಮತ್ತು ಯಲ್ಲಾಪುರ ತಲಾ 7, ಕದ್ರಾ 6, ಕಾರವಾರ, ಜೋಯಿಡಾ, ಹುಳಿಯಾರ, ಗೇರುಸೊಪ್ಪ ತಲಾ 5, ಮಂಕಿ, ಖಾನಾಪುರ, ನಿಪ್ಪಾಣಿ, ಬೆಳಗಾವಿ, ಕಿತ್ತೂರು, ಕಮ್ಮರಡಿ ಹಾಗೂ ಆಗುಂಬೆಯಲ್ಲಿ ತಲಾ 3 ಸೆಂ.ಮೀ. ಮಳೆ ವರದಿಯಾಗಿದೆ.