;Resize=(412,232))
ಬೆಂಗಳೂರು : ಕಳೆದ ಮೂರು ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಪಾಸಣೆ ಮತ್ತು ದಾಳಿ ನಡೆಸಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 564 ಮೆಟ್ರಿಕ್ ಟನ್ ಪಡಿತರ ಅಕ್ಕಿ (ಅನ್ನಭಾಗ್ಯದ ಅಕ್ಕಿ) ಮತ್ತು 24 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಬೆಳಗಾವಿ ಜಿಲ್ಲೆಯ ಗೋದಾಮು ಒಂದರಲ್ಲಿ ಅಕ್ರಮವಾಗಿ ಶೇಖರಣೆ ಮಾಡಲಾಗಿದ್ದ ಪಡಿತರ ಅಕ್ಕಿ ಮತ್ತು ಅಕ್ಕಿ ತುಂಬಿದ ಲಾರಿಯನ್ನು ವಶಕ್ಕೆ ಪಡೆದು ಇರಿಸಲಾಗಿತ್ತು. ಆದರೆ ಯಾವುದೇ ಕ್ರಮವಿಲ್ಲದೆ ಅವುಗಳನ್ನು ಬಿಡುಗಡೆಗೊಳಿಸಿದ ಆರೋಪದ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನ ಆಹಾರ ಇಲಾಖೆ ನಿರೀಕ್ಷಕ ಪ್ರವೀಣ್ ಸಾಗರ ಮತ್ತು ಶಿರಸ್ತೇದಾರ ಎಲ್.ಬಿ.ಡಾಂಗೆ ಅವರನ್ನು ಸೇವೆಯಿಂದ ಅಮಾನತು ಮಾಡಿ ಇಲಾಖೆ ಆದೇಶಿಸಿದೆ.
ವಿಜಯಪುರದಲ್ಲಿ 8.26 ಲಕ್ಷ ರು. ಮೌಲ್ಯದ 35,392 ಕೆಜಿ ಅಕ್ಕಿ, ಬೆಳಗಾವಿಯಲ್ಲಿ 15.85 ಲಕ್ಷ ರು. ಮೌಲ್ಯದ 17,800 ಕೆಜಿ ಅಕ್ಕಿ, ಬೆಳಗಾವಿಯ ಲೋಕೂರದಲ್ಲಿ 98.67 ಲಕ್ಷ ರು.ಮೌಲ್ಯದ 4.22 ಲಕ್ಷ ಕೆಜಿ ಅಕ್ಕಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 11.63 ಲಕ್ಷ ರು. ಮೌಲ್ಯದ 35 ಸಾವಿರ ಕೆಜಿ ಅಕ್ಕಿ ಹೀಗೆ ಒಟ್ಟು 1.34 ಕೋಟಿ ರು.ಗೂ ಅಧಿಕ ಮೊತ್ತದ 564 ಮೆಟ್ರಿಕ್ ಟನ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಅಕ್ಕಿ ಸಾಗಣೆಗೆ ಬಳಸಿದ 24 ವಾಹನಗಳನ್ನು ವಶಪಡಿಸಿಕೊಂಡಿದ್ದು 6 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಕಳ್ಳ ಸಾಗಣೆ ಮಾಡುತ್ತಿದ್ದ ಅಕ್ಕಿಯನ್ನು ಬಣ್ಣದ ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕೊಂಡೊಯ್ಯಲಾಗುತ್ತಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಇಲಾಖೆ ತಿಳಿಸಿದೆ.
ಬೆಳಗಾವಿಯ ಲೋಕೂರವೊಂದರಲ್ಲೇ 98.67 ಲಕ್ಷ ರು. ಮೌಲ್ಯದ 422 ಟನ್, ಬೆಳಗಾವಿಯ ಮತ್ತೊಂದು ಕಡೆ 15 ಲಕ್ಷ ರು. ಮೌಲ್ಯದ 17.8 ಟನ್ ಅನ್ನಭಾಗ್ಯ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಈ ಅಕ್ಕಿಯನ್ನು ಬಣ್ಣದ ಚೀಲಗಳಲ್ಲಿ ಪ್ಯಾಕ್ ಮಾಡಿ ಮಹಾರಾಷ್ಟ್ರಕ್ಕೆ ಕಳ್ಳ ಸಾಗಣೆ ಮಾಡಲಾಗುತ್ತಿತ್ತು.