ಮತ್ತೆ ಒಗ್ಗೂಡಲಾರಂಭಿಸಿದ ಸಿದ್ದು ಬಣ !

Published : Oct 10, 2026, 08:08 AM IST
Siddaramaiah

ಸಾರಾಂಶ

ರಾಜ್ಯ ರಾಜಕೀಯ ವಲಯಗಳಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆಗಳ ನಡುವೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗ ನಾಯಕರು ಒಟ್ಟಾಗುತ್ತಿದ್ದಾರೆ. ಕಾಂಗ್ರೆಸ್‌ನ ‘ಅಹಿಂದ’ ಬಣದಲ್ಲಿ ನಡೆದಿರುವ ಈ ಬೆಳವಣಿಗೆ ಪಕ್ಷದಲ್ಲೀಗ ಸಂಚಲನ ಮೂಡಿಸಿದೆ.

ಬೆಂಗಳೂರು : ರಾಜ್ಯ ರಾಜಕೀಯ ವಲಯಗಳಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆಗಳ ನಡುವೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗ ನಾಯಕರು ಒಟ್ಟಾಗುತ್ತಿದ್ದಾರೆ. ಕಾಂಗ್ರೆಸ್‌ನ ‘ಅಹಿಂದ’ ಬಣದಲ್ಲಿ ನಡೆದಿರುವ ಈ ಬೆಳವಣಿಗೆ ಪಕ್ಷದಲ್ಲೀಗ ಸಂಚಲನ ಮೂಡಿಸಿದೆ.

ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಇದರ ಬೆನ್ನಲ್ಲೇ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿದ್ದಾರೆ.

ಮತ್ತೊಂದೆಡೆ ಸಿದ್ದರಾಮಯ್ಯ ಅವರ ಆಪ್ತ ಬಣದ ಮುಂಚೂಣಿ ನಾಯಕರಾದ ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಜಮೀರ್‌ ಅಹ್ಮದ್‌ ಖಾನ್‌ ಪ್ರತ್ಯೇಕವಾಗಿ ಭೇಟಿ ನಡೆಸಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ರಣತಂತ್ರ ರೂಪಿಸುತ್ತಿರುವ ಬಣ:

ಇತ್ತೀಚೆಗೆ ಕಾಂಗ್ರೆಸ್‌ನ ಒಂದು ಬಣ ಏಕಸ್ವಾಮ್ಯ ಸಾಧಿಸುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಬಣ ಎಚ್ಚೆತ್ತುಕೊಂಡಿದ್ದು, ಪಕ್ಷ ಹಾಗೂ ರಾಜಕೀಯದಲ್ಲಿ ಬಿಗಿ ಪಟ್ಟು ಸಾಧಿಸಲು ರಣತಂತ್ರ ಹೆಣೆಯುತ್ತಿರುವುದಾಗಿ ತಿಳಿದುಬಂದಿದೆ.

ಸಿದ್ದರಾಮಯ್ಯ ಅವರ ಆಪ್ತ ವಲಯದ ಕೆಲ ನಾಯಕರು ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಚರ್ಚೆ ಇತ್ತೀಚೆಗೆ ಹರಿದಾಡಿತ್ತು. ಅಹಿಂದ ಸಮಾವೇಶಕ್ಕೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಗೈರಾಗಿದ್ದು, ಹಲವು ರಾಜಕೀಯ ವಿಶ್ಲೇಷಣೆಗಳಿಗೆ ಕಾರಣವಾಗಿತ್ತು.

ಇದರ ನಡುವೆಯೇ ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವ ಹಾಗೂ ಸಾಮಾಜಿಕ ನ್ಯಾಯದ ರಾಜಕಾರಣ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದ್ದವು. ಇದೀಗ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಬಹಿರಂಗವಾಗಿ ಸಿದ್ದರಾಮಯ್ಯ ಅವರ ಪರ ಬ್ಯಾಟ್‌ ಬೀಸಿದ್ದು, ಹಿರಿಯ ನಾಯಕರು ತೆರೆಮರೆಯಲ್ಲಿ ಬಣ ಗಟ್ಟಿಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಇಲ್ಲದಿದ್ದರೂ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿರುವುದಾಗಿ ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅವರ ಬೆಂಬಲಿಗ ನಾಯಕರು ಒಟ್ಟಾಗುತ್ತಿರುವುದು, ಪ್ರತ್ಯೇಕ ಸಭೆ ನಡೆಸುತ್ತಿರುವುದು, ದೆಹಲಿ ನಾಯಕರ ಭೇಟಿ ಇವೆಲ್ಲವೂ ಮುಂದಿನ ದಿನಗಳಲ್ಲಿ ಪಕ್ಷದೊಳಗೆ ಮಹತ್ವದ ಬೆಳವಣಿಗೆಗಳ ಮುನ್ಸೂಚನೆ ನೀಡುತ್ತಿವೆ ಎಂಬ ಚರ್ಚೆ ಶುರುವಾಗಿದೆ.-

ಏನಿದು ಒಗ್ಗಟ್ಟು?

- ಡಿಕೆಶಿ ಅವರಿಗೆ ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರ ಮಾಡಿದ ಬಳಿಕ ಅವರಿಂದ ಅಂತರ ಕಾಯ್ದುಕೊಂಡಿದ್ದ ಆಪ್ತರು

- ಇತ್ತೀಚೆಗೆ ನಡೆದ ಅಹಿಂದ ಸಮಾವೇಶಕ್ಕೆ ಸತೀಶ್‌ ಜಾರಕಿಹೊಳಿ, ಮಹದೇವಪ್ಪ ಗೈರು ಹಾಜರಿಯಿಂದ ಈ ಬಗ್ಗೆ ಭಾರಿ ಚರ್ಚೆ

- ಈ ಮಧ್ಯೆ ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವ, ಸಾಮಾಜಿಕ ನ್ಯಾಯದ ರಾಜಕಾರಣದ ಬಗ್ಗೆ ಚರ್ಚೆಗಳು ಆರಂಭ

- ಡಾ। ಜಿ.ಪರಂ ಅವರಿಂದ ಮಾಜಿ ಸಿಎಂ ಪರ ಬ್ಯಾಟಿಂಗ್‌, ಹಿರಿಯ ನಾಯಕರಿಂದ ತೆರೆಮರೆಯಲ್ಲಿ ಬಣ ಒಗ್ಗೂಡಿಸಲು ಯತ್ನ

ಏನಿದರ ಮರ್ಮ?

- ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ್ದರೂ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಮುಂದುವರಿಯುವುದಾಗಿ ಹಿಂದೆ ಹೇಳಿದ್ದ ಸಿದ್ದು

- ಇದೀಗ ಬೆಂಬಲಿಗ ನಾಯಕರು ಒಗ್ಗಟ್ಟಾಗುತ್ತಿರುವುದು, ಪ್ರತ್ಯೇಕ ಸಭೆ ನಡೆಸುತ್ತಿರುವುದರಿಂದ ರಾಜಕಾರಣದಲ್ಲಿ ಸಂಚಲನ

- ಈ ಮಧ್ಯೆ ದೆಹಲಿ ನಾಯಕರನ್ನು ಭೇಟಿಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮಹತ್ವದ ಬೆಳವಣಿಗೆ ಘಟಿಸುವ ಚರ್ಚೆ

- ಕಾಂಗ್ರೆಸ್‌ನ ಒಂದು ಬಣ ಏಕಸ್ವಾಮ್ಯ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ - ರಾಜಕೀಯದಲ್ಲಿ ಬಿಗಿಪಟ್ಟು ಸಾಧಿಸಲು ರಣತಂತ್ರ?

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪ್ರಶ್ನೆಗಳು ಮಾತ್ರವಲ್ಲ, ಕೆಪಿಎಸ್ಸಿ ಪರೀಕ್ಷಾ ಕೇಂದ್ರಗಳು ಕೂಡ ಫಿಕ್ಸ್‌!
ನಗರದ ಟ್ರಾಫಿಕಲ್ಲಿ ಕಳೆವ ಸಮಯ 1 ತಿಂಗಳ ದುಡಿಮೆಗೆ ಸಮ