ಮಾದಕ ವಸ್ತು ನಿಗ್ರಹ ಪಡೆಗೆ ಈಗ ‘ಎಫ್‌ಐಆರ್‌’ ಪವರ್‌

Published : Oct 09, 2026, 11:39 AM IST
drugs

ಸಾರಾಂಶ

ಸಾಮಾಜಿಕ ಕೆಡುಕಾಗಿ ಪರಿಣಮಿಸುತ್ತಿರುವ ‘ಡ್ರಗ್ಸ್ ಮಾಫಿಯಾ’ ವಿರುದ್ಧ ಹೋರಾಟಕ್ಕೆ ರಚಿಸಲಾದ ಮಾದಕ ವಸ್ತು ನಿಗ್ರಹ ಕಾರ್ಯಪಡೆಗೆ (ಎಎನ್‌ಟಿಎಫ್‌) ‘ಠಾಣಾ ಮಾನ್ಯತೆ’ ನೀಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು : ಸಾಮಾಜಿಕ ಕೆಡುಕಾಗಿ ಪರಿಣಮಿಸುತ್ತಿರುವ ‘ಡ್ರಗ್ಸ್ ಮಾಫಿಯಾ’ ವಿರುದ್ಧ ಹೋರಾಟಕ್ಕೆ ರಚಿಸಲಾದ ಮಾದಕ ವಸ್ತು ನಿಗ್ರಹ ಕಾರ್ಯಪಡೆಗೆ (ಎಎನ್‌ಟಿಎಫ್‌) ‘ಠಾಣಾ ಮಾನ್ಯತೆ’ ನೀಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ರಚನೆಗೊಂಡ 1 ವರ್ಷದ ಬಳಿಕ ‘ಎಫ್‌ಐಆರ್’ ದಾಖಲಿಸುವ ಅಧಿಕಾರವನ್ನು ಎಎನ್‌ಟಿಎಫ್‌ಗೆ ನೀಡುವ ಮೂಲಕ ಸರ್ಕಾರ ಶಕ್ತಿ ತುಂಬಿದ್ದು, ಇನ್ಮುಂದೆ ಡ್ರಗ್ಸ್ ಮಾರಾಟ ಜಾಲ ಜಾಲಾಡಲು ಎಎನ್‌ಟಿಎಫ್ ತಂಡ ಅಣಿಯಾಗುತ್ತಿದೆ.

ಡ್ರಗ್ಸ್ ಮಾರಾಟ ದಂಧೆ ವಿರುದ್ಧ ಕಾರ್ಯಾಚರಣೆಗಿಳಿಯಲು ಕಾಯಂ ಮುಖ್ಯಸ್ಥರು ಹಾಗೂ ಸಿಬ್ಬಂದಿ ಇಲ್ಲದೆ, ಮತ್ತೊಂದೆಡೆ ದಂಧೆಕೋರರ ವಿರುದ್ಧ ಕಾನೂನು ಸಮರಕ್ಕೆ ‘ಎಫ್‌ಐಆರ್’ ದಾಖಲಿಸುವ ಅಧಿಕಾರವಿಲ್ಲದೆ ಎಎನ್‌ಟಿಎಫ್ ಹಲ್ಲಿಲ್ಲದ ಹಾವಿನಂತಾಗಿತ್ತು. ಈಗ ಸಮಾಜಕ್ಕೆ ವಿಷ ಉಣ್ಣಿಸುವವರ ಬೇಟೆಗೆ ಎಎನ್‌ಟಿಎಫ್‌ಗೆ ಠಾಣಾ ಮಾನ್ಯತೆ ಮಾತ್ರವಲ್ಲದೆ, ರಾಜ್ಯ ವ್ಯಾಪ್ತಿ ಕಾರ್ಯಾಚರಣೆ ನಡೆಸುವ ಅಧಿಕಾರವನ್ನೂ ನೀಡಲಾಗಿದೆ. ಹೀಗಾಗಿ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ವಿಭಾಗ (ಎನ್‌ಸಿಬಿ) ಮಾದರಿಯಲ್ಲೇ ರಾಜ್ಯದಲ್ಲಿ ಯಾವುದೇ ಮೂಲೆಯಲ್ಲಾದರೂ ಎಎನ್‌ಟಿಎಫ್ ದಾಳಿ ನಡೆಸಬಹುದು. ಈ ಬಗ್ಗೆ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಬಹುದಾಗಿದೆ.

ಎನ್‌ಸಿಬಿ ಮಾದರಿ ಎಎನ್‌ಟಿಎಫ್ ರಚನೆ:

ಶಾಂತಿಯ ನೆಲೆವೀಡು ಎಂಬ ಖ್ಯಾತಿ ಪಡೆದಿರುವ ಕರುನಾಡು ಈಗ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್ ಮಾಫಿಯಾಕ್ಕೆ ಬೃಹತ್ ಮಾರುಕಟ್ಟೆ ಕಲ್ಪಿಸುತ್ತಿದೆ ಎಂಬ ಆತಂಕ ಪೊಲೀಸರ ತನಿಖೆಯಲ್ಲಿ ಎದುರಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಾದಕ ವಸ್ತು ಮಾರಾಟ ಜಾಲ ಶಾಲಾ-ಕಾಲೇಜು ಕಾರಿಡಾರ್‌ಗಳು ಹಾಗೂ ಬೀದಿ ಬೀದಿಗೂ ಹಬ್ಬುತ್ತಿರುವ ಭೀತಿ ಸೃಷ್ಟಿಸುತ್ತಿದೆ. ಈ ಡ್ರಗ್ಸ್ ಮಾಫಿಯಾ ವಿರುದ್ಧ ಯುದ್ಧ ಘೋಷಿಸಿದ್ದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಎನ್‌ಸಿಬಿ ಮಾದರಿಯಲ್ಲೇ ಡ್ರಗ್ಸ್ ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆಗೆ ರಾಜ್ಯ ಮಟ್ಟದಲ್ಲಿ ಮಾದಕ ವಸ್ತು ನಿಗ್ರಹ ಕಾರ್ಯಪಡೆ (ಎಎನ್‌ಟಿಎಫ್‌) ರಚಿಸುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಕೊನೆಗೆ ಕಳೆದ ವರ್ಷ ಪಡೆಗೆ ಹಸಿರು ನಿಶಾನೆ ಸಹ ತೋರಿದ್ದರು.

ಎಸ್ಪಿ ಶಿವಪ್ರಕಾಶ್ ಸಾರಥ್ಯ:

ವರ್ಷದ ಹಿಂದೆ ಎಎನ್‌ಟಿಎಫ್‌ಗೆ ಡಿಐಜಿ, ಎಸ್ಪಿ, ಇಬ್ಬರು ಡಿವೈಎಸ್ಪಿ ಹಾಗೂ ನಾಲ್ವರು ಇನ್ಸ್‌ಪೆಕ್ಟರ್‌ಗಳು ಸೇರಿ 60 ಅಧಿಕಾರಿ-ಸಿಬ್ಬಂದಿಯನ್ನು ಸರ್ಕಾರ ಮಂಜೂರು ಮಾಡಿತ್ತು. ಈವರೆಗೆ ಶೇ.60ರಷ್ಟು ಹುದ್ದೆಗಳು ಭರ್ತಿಯಾಗಿವೆ. ಆದರೆ ಪಡೆಗೆ ಇನ್ನೂ ಕಾಯಂ ಮುಖ್ಯಸ್ಥರನ್ನು ಕಾಣುವ ಭಾಗ್ಯ ಕೂಡಿ ಬಂದಿಲ್ಲ. ಕಳೆದ 10 ತಿಂಗಳಿಂದ ಕೇಂದ್ರ ವಲಯ ಡಿಐಜಿ ಗಿರೀಶ್ ಅವರಿಗೆ ಎಎನ್‌ಟಿಎಫ್‌ ಪ್ರಭಾರ ವಹಿಸಲಾಗಿದೆ. ಆದರೆ ತಿಂಗಳ ಹಿಂದೆ ಎಸ್ಪಿಯಾಗಿ ಶಿವಪ್ರಕಾಶ್ ದೇವರಾಜ್ ಅವರು ಆಗಮಿಸಿದ ಬಳಿಕ ಎಎನ್‌ಟಿಎಫ್‌ಗೆ ಹುರುಪು ಬಂದಿದೆ. ಸರ್ಕಾರ ಮಟ್ಟದಲ್ಲಿ ಎಸ್ಪಿ ಅವರೇ ಖುದ್ದು ಫೈಲ್ ಹಿಡಿದು ಓಡಾಡಿದ ಪರಿಣಾಮ ಎಫ್‌ಐಆರ್ ದಾಖಲಿಸುವ ಅಧಿಕಾರ ಸಿಕ್ಕಿದೆ. ಅಲ್ಲದೆ, 20 ಗೃಹರಕ್ಷಕ ದಳ ಸಿಬ್ಬಂದಿ ಹಾಗೂ ನಾಲ್ಕು ಹೊಸ ವಾಹನಗಳನ್ನು ಸಹ ಕಾರ್ಯಪಡೆಗೆ ಪೊಲೀಸ್ ಇಲಾಖೆ ನೀಡಿದೆ.

ಕೋರ್ಟ್‌ ಅನುಮತಿ ಬಳಿಕ ಎಫ್‌ಐಆರ್‌

ಎಫ್‌ಐಆರ್‌ ದಾಖಲಿಸುವ ಅಧಿಕಾರವನ್ನು ಸರ್ಕಾರ ನೀಡಿದೆ. ಈಗ ಎಎನ್‌ಟಿಎಫ್‌ ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯ ಹಂಚಿಕೆ ಮಾಡುವಂತೆ ಕೋರಲಾಗಿದ್ದು, ನ್ಯಾಯಾಲಯ ಸಮ್ಮತಿಸಿದ ಬಳಿಕ ಡ್ರಗ್ಸ್ ಮಾರಾಟ ಬಗ್ಗೆ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸುತ್ತೇವೆ.

-ಶಿವಪ್ರಕಾಶ್ ದೇವರಾಜ್, ಎಸ್ಪಿ, ಎಎನ್‌ಟಿಎಫ್‌

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕರ್ನಾಟಕಕ್ಕೆ ಮತ್ತೆ ಕಾವೇರಿ ನೀರಿನ ಶಾಕ್‌
ಫೆ.27ರಿಂದ ಪಿಯು, ಮಾ.22ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ?