ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ ಕಾಣಿಸಿಕೊಂಡಿರುವ ಬೆನ್ನಲ್ಲೇ, ಚಿನ್ನ ಅಡವಿಟ್ಟು ಸಾಲ ಪಡೆದ ಗ್ರಾಹಕರಿಗೆ ಬ್ಯಾಂಕುಗಳು, ಫೈನಾನ್ಸ್‌ಗಳು ಹೊಸ ಶಾಕ್‌ ನೀಡುತ್ತಿವೆ. ಬ್ಯಾಂಕ್‌ಗಳು ಹಾಗೂ ಫೈನಾನ್ಸ್‌ಗಳಲ್ಲಿ ಚಿನ್ನದ ಆಭರಣಗಳನ್ನು ಅಡವಿಟ್ಟು ಸಾಲ ಪಡೆದಿರುವವರ ಸಾಲದ ಮೌಲ್ಯ ಇಳಿಕೆ

ಯಾದಗಿರಿ : ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ ಕಾಣಿಸಿಕೊಂಡಿರುವ ಬೆನ್ನಲ್ಲೇ, ಚಿನ್ನ ಅಡವಿಟ್ಟು ಸಾಲ ಪಡೆದ ಗ್ರಾಹಕರಿಗೆ ಬ್ಯಾಂಕುಗಳು, ಫೈನಾನ್ಸ್‌ಗಳು ಹೊಸ ಶಾಕ್‌ ನೀಡುತ್ತಿವೆ. ಬ್ಯಾಂಕ್‌ಗಳು ಹಾಗೂ ಫೈನಾನ್ಸ್‌ಗಳಲ್ಲಿ ಚಿನ್ನದ ಆಭರಣಗಳನ್ನು ಅಡವಿಟ್ಟು ಸಾಲ ಪಡೆದಿರುವವರ ಸಾಲದ ಮೌಲ್ಯ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, ಬ್ಯಾಂಕ್‌ಗಳು ಸಾಲಗಾರರನ್ನು ಸಂಪರ್ಕಿಸಿ, ಉಳಿದ ಮೊತ್ತವನ್ನು ಪಾವತಿಸುವಂತೆ ಸೂಚಿಸುತ್ತಿದ್ದಾರೆ. ತಪ್ಪಿದರೆ, ಆರ್‌ಬಿಐ ನಿಯಮಗಳಂತೆ ಅಡವಿಟ್ಟ ಚಿನ್ನವನ್ನು ಹರಾಜು ಹಾಕಲಾಗುವುದು ಎಂದು ಎಚ್ಚರಿಸುತ್ತಿದ್ದಾರೆ.

ಕಳೆದ ಆರೇಳು ತಿಂಗಳುಗಳ ಅವಧಿಯಲ್ಲಿ, 10 ಗ್ರಾಂ ಚಿನ್ನಕ್ಕೆ ₹1.75, ₹1.85 ಲಕ್ಷ ತಲುಪಿದ್ದ ವೇಳೆ ಚಿನ್ನ ಅಡವಿಟ್ಟು ಸಾಲ ಪಡೆದವರನ್ನು ಬ್ಯಾಂಕ್‌ ಗಳು ಈಗ ಸಂಪರ್ಕಿಸುತ್ತಿದ್ದು, ಉಳಿದ ಹಣವನ್ನು ಅಡ್ಜಸ್ಟ್ ಮಾಡುವಂತೆ ಸೂಚಿಸುತ್ತಿವೆ.

ಪ್ರಸ್ತುತ ಚಿನ್ನದ ದರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ನಷ್ಟದ ಆತಂಕ ಮೂಡಿದೆ. ಕಳೆದ ಮೂರು ತಿಂಗಳುಗಳಿಂದ ಚಿನ್ನದ ದರದಲ್ಲಿ ನಿರಂತರ ಇಳಿಕೆ ಕಾಣುತ್ತಿದ್ದು, ಕೇವಲ 3 ತಿಂಗಳಲ್ಲಿ 10 ಗ್ರಾಂ ಚಿನ್ನದ ದರ ₹30,000 ಕುಸಿದಿರುವುದು ಬ್ಯಾಂಕುಗಳ ಈ ಆತಂಕಕ್ಕೆ ಕಾರಣವಾಗಿದೆ.

ಸಾಲದ ಮೊತ್ತ ಮತ್ತು ಅಡವಿಟ್ಟ ಚಿನ್ನದ ಮೌಲ್ಯ ಅನುಪಾತ - ಲೋನ್‌ ಟು ವ್ಯಾಲ್ಯೂ (ಎಲ್ಟಿವಿ), ನಿಗದಿತ ಮಿತಿ ಮೀರಿರುವುದರಿಂದ, ಗೋಲ್ಡ್ ಲೋನ್ ಪಡೆದಿರುವ ಗ್ರಾಹಕರಿಗೆ ಬ್ಯಾಂಕುಗಳು, ಅದರಲ್ಲೂ ಖಾಸಗಿ ಬ್ಯಾಂಕುಗಳು, ಚಿನ್ನದ ಸಾಲದ ಮೇಲಿನ ಹೆಚ್ಚುವರಿ ಮೊತ್ತವನ್ನು ಜಮೆ ಮಾಡುವಂತೆ ಅಥವಾ ಹೆಚ್ಚುವರಿ ಚಿನ್ನ ಅಡವಿಡುವಂತೆ ಸೂಚನೆ ನೀಡುತ್ತಿವೆ. ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವುದರಿಂದ ಕೂಡಲೇ ಬ್ಯಾಂಕಿಗೆ ಅಗತ್ಯ ಮಾರ್ಜಿನ್ ಮೊತ್ತ ಪಾವತಿಸಿ, ನಿಮ್ಮ ಒಡವೆಗಳನ್ನು ಹರಾಜಾಗದಂತೆ ರಕ್ಷಿಸಿಕೊಳ್ಳಿ ಎಂದು ಸಲಹೆ ನೀಡುತ್ತಿವೆ.

ಉದಾಹರಣೆಗೆ, ಚಿನ್ನದ ದರ ₹1.85 ಲಕ್ಷ ಇರುವ ಸಂದರ್ಭದಲ್ಲಿ 5 ಲಕ್ಷ ರು.ಗಳ ಚಿನ್ನ ಅಡವಿಟ್ಟು, ₹3.75 ಲಕ್ಷ ಅಥವಾ ₹4 ಲಕ್ಷದವರೆಗೆ ಸಾಲ ಪಡೆದಿದ್ದರೆ, ಈಗ ಚಿನ್ನದ ಬೆಲೆ ಕುಸಿದಿದೆ. 5 ಲಕ್ಷ ಚಿನ್ನದ ಮೊತ್ತವೇ ಮೂರು ಮುಕ್ಕಾಲು ಲಕ್ಷ ರುಪಾಯಿಗಳಾಗುತ್ತವೆ. ಅಂದರೆ, ಸಾಲದ ಮೊತ್ತವೇ ಅಡವಿಟ್ಟ ಚಿನ್ನಕ್ಕಿಂತ ಕಡಿಮೆ ಇರುವುದು ಕಂಡು ಬಂದಿದೆ. ಜೊತೆಗೆ, ಇನ್ನೆರಡು ತಿಂಗಳಲ್ಲಿ ಚಿನ್ನದ ದರ ಮತ್ತಷ್ಟು ಇಳಿಕೆಯಾಗುವ ಆತಂಕವನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ‘ಕನ್ನಡಪ್ರಭ’ ಜೊತೆ ಮಾತನಾಡಿದ ಖಾಸಗಿ ಬ್ಯಾಂಕ್‌ ಮುಖ್ಯಸ್ಥರು, ಚಿನ್ನದ ದರ ಕುಸಿತದ ಹಿನ್ನೆಲೆಯಲ್ಲಿ ನಷ್ಟ ಎದುರಾಗಬಾರದು ಎಂಬ ಕಾರಣಕ್ಕೆ ಬ್ಯಾಂಕ್‌ಗಳು ಚಿನ್ನದ ಸಾಲ ಪಡೆದಿರುವ ಗ್ರಾಹಕರಿಗೆ ಈ ಬಗ್ಗೆ ಸೂಚನೆ ರವಾನಿಸುತ್ತಿವೆ. ಮಾರ್ಜಿನ್‌ ಹಣ ತುಂಬಿ ಸಾಲದ ಖಾತೆಯನ್ನು ಕ್ರಮ ಬದ್ಧಗೊಳಿಸುವಂತೆ ಸೂಚಿಸುತ್ತಿವೆ. ಗ್ರಾಹಕರು ವಿಳಂಬ ಮಾಡಿದರೆ, ಮತ್ತೆಲ್ಲಿ ನಮಗೆ ನಷ್ಟವಾಗುವುದೋ ಎಂಬ ಲೆಕ್ಕಾಚಾರದಲ್ಲಿ ಬ್ಯಾಂಕುಗಳು ಹಾಗೂ ಖಾಸಗಿ ಫೈನಾನ್ಸ್‌ಗಳು ಅಡವಿಟ್ಟ ಚಿನ್ನವನ್ನು ಹರಾಜು ಹಾಕಲೂ ಸಿದ್ಧತೆ ನಡೆಸಿವೆ ಎಂದು ತಿಳಿಸಿದರು.

ಚಿನ್ನದ ದರ ಇಳಿದಿದೆ ಎಂದಿದ್ದ ಮೋದಿ:

ಚಿನ್ನದ ಬೆಲೆ ಕುಸಿತಕ್ಕೆ ಮೊನ್ನೆಯಷ್ಟೇ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, ಚಿನ್ನ ಖರೀದಿಸದಂತೆ ಜನರಿಗೆ ತಾವು ನೀಡಿದ ಸಲಹೆ ಹಣ ಉಳಿತಾಯ ಮಾಡಿಸಿದಂತಾಗಿದೆ ಎಂದಿದ್ದರು. ಚೇಂಬರ್‌ ಆಫ್‌ ಟ್ರೇಡ್‌ ಆ್ಯಂಡ್ ಇಂಡಸ್ಟ್ರೀ ಕೂಡ ಪ್ರಧಾನಿಯವರ ಸಲಹೆಯಿಂದ ಲಕ್ಷಾಂತರ ರು.ಗಳ ನಷ್ಟ ತಪ್ಪಿದೆ ಎಂದು ಪ್ರಧಾನಿಗೆ ಪತ್ರ ಬರೆದು ಅಭಿನಂದಿಸಿದ್ದರು.

ಸೋಮವಾರ, (ನ.23) ಯಾದಗಿರಿಯಲ್ಲಿ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ 1.31 ಲಕ್ಷ ಇತ್ತು.

ಚಿನ್ನ ಸಾಲ: ಸಂಕಷ್ಟ ಏಕೆ?

- 6-7 ತಿಂಗಳ ಹಿಂದೆ ಇರಾನ್‌-ಅಮೆರಿಕ-ಇಸ್ರೇಲ್‌ ಕದನದ ವೇಳೆ ಚಿನ್ನದ ದರ ತಾರಕಕ್ಕೆ

- ಸಮರ ಕಾಲದಲ್ಲಿ 10 ಗ್ರಾಂ ಚಿನ್ನದ ದರ 1.85 ಲಕ್ಷ ರು.ವರೆಗೆ ತಲುಪಿದ್ದ ಚಿನ್ನದ ದರ

- ಆಗ ಚಿನ್ನ ಅಡವಿಟ್ಟು ಅರ್ಜಿ ಸಲ್ಲಿಸಿದವರಿಗೆ ಸಿಕ್ಕಿತ್ತು ಭಾರಿ ಪ್ರಮಾಣದ ಬ್ಯಾಂಕ್‌ ಸಾಲ

- ಆದರೆ ಇದೀಗ ಚಿನ್ನದ ಬೆಲೆ 10 ಗ್ರಾಂಗೆ ಏಕಾಏಕಿ ಸುಮಾರು 30,000 ರು.ವರೆಗೆ ಕುಸಿತ

- ನಿಗದಿತ ಮಿತಿ ಮೀರಿದ ‘ಸಾಲ ಮೊತ್ತ’ ಮತ್ತು ಅಡವಿಟ್ಟ ಚಿನ್ನದ ಮೌಲ್ಯ ಅನುಪಾತ

- ಹೀಗಾಗಿ ಚಿನ್ನದ ಸಾಲದ ಮೇಲಿನ ಹೆಚ್ಚುವರಿ ಮೊತ್ತ ಜಮೆ ಮಾಡಿ: ಬ್ಯಾಂಕ್‌ಗಳ ಸೂಚನೆ

- ಅಥವಾ ಹೆಚ್ಚು ಮೊತ್ತದ ಚಿನ್ನ ಅಡವಿಟ್ಟು ಒಡವೆ ಹರಾಜಿಂಂದ ಪಾರಾಗುವಂತೆ ನಿರ್ದೇಶನ

ಬ್ಯಾಂಕ್‌ಗಳಿಗೆ ನಷ್ಟ ಭೀತಿ

ಚಿನ್ನದ ದರ ಕುಸಿತದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ನಷ್ಟ ಎದುರಾಗಬಾರದು ಎಂಬ ಕಾರಣಕ್ಕೆ ನಾವು ಚಿನ್ನದ ಸಾಲ ಪಡೆದಿರುವ ಗ್ರಾಹಕರಿಗೆ ಈ ಬಗ್ಗೆ ಸೂಚನೆ ನೀಡುತ್ತಿದ್ದೇವೆ. ಮಾರ್ಜಿನ್‌ ಹಣ ತುಂಬಿ ಸಾಲದ ಖಾತೆಯನ್ನು ಕ್ರಮ ಬದ್ಧಗೊಳಿಸುವಂತೆ ಸೂಚಿಸುತ್ತಿದ್ದೇವೆ.

- ಖಾಸಗಿ ಬ್ಯಾಂಕ್‌ ಪ್ರಮುಖರು, ಯಾದಗಿರಿ