ರಾಜ್ಯದಲ್ಲಿ ವಕೀಲರ ಮೇಲಿನ ದೌರ್ಜನ್ಯ ಘಟನೆ ಖಂಡಿಸಿ ಬೆಂಗಳೂರು ವಕೀಲರ ಸಂಘ (ಎಎಬಿ) ಕರೆ ನೀಡಿದ್ದ ಪ್ರತಿಭಟನೆಯ ವೇಳೆ ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್‌ ಹಾಲ್‌ನಲ್ಲಿ ಗದ್ದಲ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ವಕೀಲರ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ಮುಕ್ತಾಯಗೊಳಿಸಿದೆ.

-ರಿಲೀಫ್ । ವಕೀಲರಿಂದ ಬೇಷರತ್ ಕ್ಷಮಾಪಣೆ ಕೋರಿ ಪ್ರಮಾಣ ಪತ್ರ ಸಲ್ಲಿಕೆ । ಹೈಕೋರ್ಟ್‌ನಿಂದ ನ್ಯಾಯಾಂಗ ನಿಂದನೆ ಕೇಸ್‌ ಮುಕ್ತಾಯ

---

*ಇತ್ತೀಚೆಗೆ ವಕೀಲರೊಬ್ಬರ ಹತ್ಯೆ ಖಂಡಿಸಿ

ನ್ಯಾಯವಾದಿಗಳಿಂದ ದೌರ್ಜನ್ಯ ನಿಷೇಧ

ಕಾಯ್ದೆ–2023ರ ಪರಿಣಾಮಕಾರಿ ಜಾರಿಗೆ ಆಗ್ರಹ

*ಈ ವೇಳೆ ಕೆಲ ವಕೀಲರು ಮುಖ್ಯ ನ್ಯಾಯಮೂರ್ತಿಗಳ

ನ್ಯಾಯಾಲಯದ ಸಭಾಂಗಣಕ್ಕೆ ಪ್ರವೇಶಿಸಿ

ಕಲಾಪಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಕೇಸ್‌

*ಕ್ಷಮಾಪಣೆ ಕೋರಿದ ಹಿನ್ನೆಲೆಯಲ್ಲಿ

ಪ್ರಕರಣ ಮುಕ್ತಾಯಗೊಳಿಸಿದ ಕೋರ್ಟ್

---ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ವಕೀಲರ ಮೇಲಿನ ದೌರ್ಜನ್ಯ ಘಟನೆ ಖಂಡಿಸಿ ಬೆಂಗಳೂರು ವಕೀಲರ ಸಂಘ (ಎಎಬಿ) ಕರೆ ನೀಡಿದ್ದ ಪ್ರತಿಭಟನೆಯ ವೇಳೆ ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್‌ ಹಾಲ್‌ನಲ್ಲಿ ಗದ್ದಲ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ವಕೀಲರ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ಮುಕ್ತಾಯಗೊಳಿಸಿದೆ.

ಹೈಕೋರ್ಟ್‌ ದಾಖಲಿಸಿಕೊಂಡಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಆರೋಪಿಗಳಾಗಿರುವ ವಕೀಲರು ಬೇಷರತ್ ಕ್ಷಮಾಪಣೆ ಕೋರಿ ಪ್ರಮಾಣ ಪತ್ರ ಸಲ್ಲಿಸಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಆರೋಪಿ ವಕೀಲರು ಆರಂಭದಲ್ಲೇ ಬೇಷರತ್ ಕ್ಷಮೆ ಕೋರಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇದರಿಂದ ಅವರ ಕ್ಷಮಾಪಣೆಯ ಪ್ರಾಮಾಣಿಕತೆಯನ್ನು ಅನುಮಾನಿಸಲು ಕಾರಣವಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ, ಆರೋಪಿಗಳ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಕ್ತಾಯಗೊಳಿಸಿತು. ಅಲ್ಲದೆ, ಇಂತಹ ಪ್ರತಿಭಟನೆಗಳ ಸಂದರ್ಭದಲ್ಲೂ ವಕೀಲರು ಕಲಾಪಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ವರ್ತಿಸುವಂತಿಲ್ಲ ಎಂದು ಸೂಚಿಸಿತು.

ಪ್ರಕರಣದ ಹಿನ್ನೆಲೆ

ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಕೀಲರೊಬ್ಬರ ಹತ್ಯೆ ಮತ್ತು ವಕೀಲರ ಮೇಲಿನ ದೌರ್ಜನ್ಯ ಘಟನೆಗಳನ್ನು ಖಂಡಿಸಿ, ವಕೀಲರ ಮೇಲಿನ ದೌರ್ಜನ್ಯ ನಿಷೇಧ ಕಾಯ್ದೆ–2023’ರ ಪರಿಣಾಮಕಾರಿ ಜಾರಿಗೆ ಆಗ್ರಹಿಸಿ ಎಎಬಿ ಹಾಗೂ ಇತರ ವಕೀಲರ ಸಂಘಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಆ ಸಂದರ್ಭದಲ್ಲಿ ಕೆಲ ವಕೀಲರು ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯದ ಸಭಾಂಗಣಕ್ಕೆ ಪ್ರವೇಶಿಸಿ ಕಲಾಪಕ್ಕೆ ಅಡ್ಡಿಪಡಿಸಿದ್ದ ಆರೋಪವಿತ್ತು.

ಈ ಹಿನ್ನೆಲೆಯಲ್ಲಿ ನ್ಯಾಯಪೀಠವು ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಗದ್ದಲ ಎಬ್ಬಿಸಲು ಯತ್ನಿಸಿದವರನ್ನು ಗುರುತಿಸುವಂತೆ ರಿಜಿಸ್ಟ್ರಿಗೆ ನಿರ್ದೇಶನ ನೀಡಿತ್ತು. ಈ ಪ್ರಕರಣವನ್ನು ನ್ಯಾಯಪೀಠ ಇದೀಗ ಮುಕ್ತಾಯಗೊಳಿಸಿ ಆದೇಶಿಸಿದೆ.