ಸಿಲಿಕಾನ್‌ ಸಿಟಿಯ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಬಲಪಡಿಸುವ ಉದ್ದೇಶದಿಂದ ‘ಬೆಂಗಳೂರು ಜಾತ್ರೆ’ ಹೆಸರಿನಲ್ಲಿ ಬೆಂಗಳೂರು ಊರಹಬ್ಬವನ್ನು ಡಿ.4ರಿಂದ 13ರವರೆಗೆ ಆಯೋಜಿಸಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

-ನಗರದ ಸಾಂಸ್ಕೃತಿಕ ಪರಂಪರೆ ಬಲಪಡಿಸಲು ಆಯೋಜನೆ: ಕೃಷ್ಣ

-ಬ್ರಿಗೇಡ್, ಎಂ.ಜಿ.ರಸ್ತೆಯಲ್ಲಿ 1 ಕಿ.ಮೀ ವ್ಯಾಪ್ತಿ ವೇದಿಕೆ ನಿರ್ಮಾಣ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಿಲಿಕಾನ್‌ ಸಿಟಿಯ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಬಲಪಡಿಸುವ ಉದ್ದೇಶದಿಂದ ‘ಬೆಂಗಳೂರು ಜಾತ್ರೆ’ ಹೆಸರಿನಲ್ಲಿ ಬೆಂಗಳೂರು ಊರಹಬ್ಬವನ್ನು ಡಿ.4ರಿಂದ 13ರವರೆಗೆ ಆಯೋಜಿಸಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಜಾತ್ರೆ ಒಂದೇ ಸ್ಥಳಕ್ಕೆ ಸೀಮಿತಗೊಳಿಸದೆ ನಗರದ ವಿವಿಧ ಪಾಲಿಕೆಗಳು, ರಸ್ತೆಗಳು, ಉದ್ಯಾನವನಗಳು, ಸಭಾಂಗಣಗಳು, ಕಾಲೇಜು ಮೈದಾನಗಳು, ಮಾಲ್‌ಗಳು, ಟೆಕ್ ಪಾರ್ಕ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ವಿಕೇಂದ್ರೀಕೃತವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಬ್ರಿಗೇಡ್ ರಸ್ತೆ ಮತ್ತು ಎಂ.ಜಿ. ರಸ್ತೆಯ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಸಾಂಸ್ಕೃತಿಕ ವೇದಿಕೆಯನ್ನಾಗಿ ರೂಪಿಸಲಾಗುವುದು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 500 ಜನಪದ ಕಲಾವಿದರು 20 ಕಲಾತಂಡಗಳೊಂದಿಗೆ ಆಗಮಿಸಿ ಮೆರವಣಿಗೆ ನಡೆಸಲಿದ್ದಾರೆ. ಡಿ.4 ರಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಡಿ.13ಕ್ಕೆ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಸಂಜೆ ಸಮಾರೋಪ ಸಮಾರಂಭ ಜರುಗಲಿದೆ. ಖ್ಯಾತ ಕನ್ನಡ ಕಲಾವಿದರಾದ ಸಂಚಿತ್ ಹೆಗಡೆ ಹಾಗೂ ಪ್ರಸಿದ್ಧ ಕಲಾವಿದೆ ಸುನಿಧಿ ಚೌಹಾಣ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಡಿ.5-6ಕ್ಕೆ ಮೆಜೆಸ್ಟಿಕ್ ಸಮೀಪದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳ ಮೇಳ ಮತ್ತು ಆಹಾರ ಮೇಳ ನಡೆಯಲಿದೆ. ಬೆಂಗಳೂರಿನ ಐದು ನಗರ ಪಾಲಿಕೆಗಳಲ್ಲಿಯೂ ಮೂರು-ನಾಲ್ಕು ದಿನಗಳ ಕಾಲ ಸ್ಥಳೀಯ ಮೈದಾನಗಳಲ್ಲಿ ಶಾಸ್ತ್ರೀಯ, ಜನಪದ ಮತ್ತು ಆಧುನಿಕ ನೃತ್ಯ, ಸಂಗೀತ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ನಡೆಯಲಿವೆ. ಪಶ್ಚಿಮ ಭಾಗದಲ್ಲಿ ರಾಮಮಂದಿರ ಮೈದಾನ, ದಕ್ಷಿಣದಲ್ಲಿ ಶಾಲಿನಿ ಮೈದಾನ ಹಾಗೂ ಪೂರ್ವದಲ್ಲಿ ಐಟಿಐ ಮೈದಾನ ಸೇರಿದಂತೆ ವಿವಿಧೆಡೆ ವೇದಿಕೆಗಳನ್ನು ರೂಪಿಸಲಾಗುತ್ತಿದೆ.

ಡಿ.11ರಂದ 13ರವರೆಗೆ ಪುಸ್ತಕ ಮೇಳ ನಡೆಯಲಿದೆ. ಫೋರ್ಟ್ ಹೈ ಸ್ಕೂಲ್ ಮೈದಾನದಲ್ಲಿ ಕೆಂಪೇಗೌಡರು ರೂಪಿಸಿದ ಬೆಂಗಳೂರಿನ ಮೂಲ ಪರಿಕಲ್ಪನೆ ಮತ್ತು ಹಳೆಯ ಕುಲಕಸುಬುಗಳನ್ನು ಪರಿಚಯಿಸುವ ಮಾದರಿಯನ್ನು ನಿರ್ಮಿಸಲಾಗುತ್ತಿದೆ. ವಿವಿಧ ಕ್ಷೇತ್ರದ ಕಾರ್ಮಿಕರ ಬದುಕು ಹಾಗೂ ಕೊಡುಗೆಯನ್ನು ರೂಪಕಗಳ ಮೂಲಕ ಪ್ರದರ್ಶಿಸಲಾಗುವುದು ಎಂದರು. ಬಹುಸಂಸ್ಕೃತಿ ಆಚರಣೆ:ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 9 ದಿನಗಳ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇಂಡಿಯನ್ ಮ್ಯೂಸಿಕ್ ಅಕಾಡೆಮಿ, ರಂಗಶಂಕರ ಸೇರಿದಂತೆ ಹಲವು ಸಂಸ್ಥೆಗಳು ಕೈಜೋಡಿಸಿವೆ. ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷಿಕರು ಹಾಗೂ ದೇವಾಂಗ, ತಿಗಳ, ಮಡಿವಾಳ ಮುಂತಾದ ಸಮುದಾಯಗಳು ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸಲು ಬೆಂಗಳೂರು ಜಾತ್ರೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಫೋರಂ, ಫೀನಿಕ್ಸ್ ಮಾಲ್‌ಗಳ, ಮಾನ್ಯತಾ, ಪ್ರೆಸ್ಟೀಜ್ ಟೆಕ್ ಪಾರ್ಕ್‌ಗಳು ಹಾಗೂ ಇನ್ಫೋಸಿಸ್ ಆವರಣಗಳಲ್ಲಿ ಕಾರ್ಯಕ್ರಮಗಳು ಜರುಗಲಿವೆ. ‘ಅನ್ಬಾಕ್ಸಿಂಗ್ ಬೆಂಗಳೂರು’ ವತಿಯಿಂದ ಸುಮಾರು 50 ಉದ್ಯಾನಗಳಲ್ಲಿ ಸಣ್ಣ ಅವಧಿಯ ಕಾರ್ಯಕ್ರಮಗಳು ನಡೆಯಲಿವೆ. ಮೆಟ್ರೋ ನಿಲ್ದಾಣಗಳು ಮತ್ತು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲೂ ನೋಂದಾಯಿತ ಉದಯೋನ್ಮುಖ ಮತ್ತು ಹವ್ಯಾಸಿ ಕಲಾವಿದರಿಗೆ ಅವಕಾಶ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. 20 ಕೋಟಿ ರು.ವೆಚ್ಚ?

ಜಿಬಿಎ ವತಿಯಿಂದ ಸುಮಾರು 50 ಪ್ರಮುಖ ಕಾರ್ಯಕ್ರಮಗಳು ಸೇರಿದಂತೆ ಖಾಸಗಿ ಸಂಸ್ಥೆಗಳು ಮತ್ತು ಸಂಘಟನೆಗಳಿಂದ ಒಟ್ಟು 200ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯುವ ನಿರೀಕ್ಷೆಯಿದೆ. ಕಾರ್ಯಕ್ರಮಗಳ ಆಯೋಜನೆಗೆ ಪ್ರಸ್ತುತ ಸುಮಾರು 20 ಕೋಟಿ ರು.ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: www.bengalurujatre.in ಸಂಪರ್ಕಿಸಬಹುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.