ರಾಜ್ಯ ಸರ್ಕಾರ ತಮ್ಮ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಂಡರೆ ಕಾನೂನು ಹೋರಾಟ ಮಾಡುವುದಾಗಿ ‘ಬಸವ ಮಂಟಪ’ ಕೃತಿಕಾರ ರವಿ ಹಂಜ್ ಅವರು ಹೇಳಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್
ಬೆಂಗಳೂರು : ರಾಜ್ಯ ಸರ್ಕಾರ ತಮ್ಮ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಂಡರೆ ಕಾನೂನು ಹೋರಾಟ ಮಾಡುವುದಾಗಿ ‘ಬಸವ ಮಂಟಪ’ ಕೃತಿಕಾರ ರವಿ ಹಂಜ್ ಅವರು ಹೇಳಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಈ ದೇಶದಲ್ಲಿ ಕಾನೂನು ಇದೆ, ಪಾಪ ಅವರು ಅನಿವಾಸಿ ಭಾರತೀಯರಾಗಿದ್ದಾರೆ. ಬಹಳ ವರ್ಷಗಳಿಂದ ಅಮೆರಿಕದಲ್ಲಿರುವುದರಿಂದ ಈ ದೇಶದ ಕಾನೂನು ಮರೆತಿರಬೇಕು, ಈ ದೇಶದಲ್ಲಿ ಕಾನೂನುಗಳು ಇವೆ ಎಂದು ಅವರಿಗೆ ನೆನೆಪು ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪುಸ್ತಕದ ಕುರಿತು ಸಮುದಾಯದ ಅನೇಕ ನಾಯಕರು ಚರ್ಚೆ ಮಾಡಿದ್ದಾರೆ. ರಾಜ್ಯಾದ್ಯಂತ ಪ್ರತಿಕ್ರಿಯೆ ಬಂದಿದೆ. ಹಾಗಾಗಿ ಸಚಿವ ಸಂಪುಟದಲ್ಲಿ ಚರ್ಚಿಸಿ ತಕ್ಷಣ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ತೀರ್ಮಾನ ಮಾಡಿದ್ದೇವೆ ಎಂದರು.
ತಾವು ಬರೆದಿರುವ ಪುಸ್ತಕದಲ್ಲಿ ಆಕ್ಷೇಪಾರ್ಹವಾದದ್ದು ಇಲ್ಲ ಎಂದು ಅವರು ಹೇಳುತ್ತಿದ್ದಾರೆ. ಆದರೆ ನಾವು ಎಲ್ಲವನ್ನು ಪರಿಶೀಲಿಸಿಯೇ ಮುಟ್ಟುಗೋಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದ ಉಪ ಮುಖ್ಯಮಂತ್ರಿ ಅವರು, ಲೇಖಕರು ಗ್ರೀನ್ ಕಾರ್ಡ್ ಹೊಂದಿದ್ದಾರೆ. ಅಮೆರಿಕದ ನಾಗರಿಕರಾಗಿರುವುದರಿಂದ ಅವರ ಎಂಬೆಸಿಗೆ ಹೇಳಲೇಬೇಕು. ನನಗೆ ಇಲ್ಲಿ ತೊಂದರೆಯಾಗುತ್ತಿದೆ ರಕ್ಷಣೆ ಕೊಡಿ ಎಂದು ಹೇಳಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಾರದ ಬರ ಪರಿಹಾರ: ಸಂಪುಟದಲ್ಲಿ ಚರ್ಚಿಸಿ ಮುಂದಿನ ನಿರ್ಧಾರ
ಬೆಂಗಳೂರು: ಬರ ಪರಿಹಾರ ನೀಡುವ ಸಂಬಂಧ ಈವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಮುಂದೇನು ಮಾಡಬೇಕು ಎಂಬ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ. ಸಂಪುಟದಲ್ಲಿ ಬರುವ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.
ಈಗಾಗಲೇ ಕೇಂದ್ರದ ತಂಡ ಬಂದು ವರದಿ ನೀಡಿದೆ. ರಾಜ್ಯ ಸರ್ಕಾರ ಸಹ ಮೂರು ಬಾರಿ ಮನವಿ ಮಾಡಿದೆ. 22 ಸಾವಿರ ಕೋಟಿ ಕೇಳಿದ್ದು, ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಬಹುದು. ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಈಗಾಗಲೇ ರೈತರಿಗೆ ಐದು ಸಾವಿರ ರು. ಪರಿಹಾರ ಕೊಡುತ್ತೇವೆ ಎಂದು ಘೋಷಣೆ ಮಾಡಿ ಪರಿಹಾರ ನೀಡಲು ಆರಂಭಿಸಿದ್ದೇವೆ. ಬೆಳಗಾವಿ ಅಧಿವೇಶನ ಆರಂಭಕ್ಕೂ ಮುಂಚೆ ಎಲ್ಲರಿಗೂ ಪರಿಹಾರ ನೀಡಿ ಹೋಗಬೇಕು. ಬರದ ವಿಚಾರದಲ್ಲಿ ರಾಜಕಾರಣ ಆಗಬಾರದು. ಬರ ಹೇಳಿ ಕೇಳಿ ಬಂದಿಲ್ಲ. ಈ ಸಂದರ್ಭದಲ್ಲಿ ಕೇಂದ್ರ ನಮ್ಮ ಜೊತೆ ನಿಲ್ಲಬೇಕು. ಬರದ ವಿಚಾರದಲ್ಲಿ ಪರಿಸ್ಪರ ದೂಷಿಸುವುದು ಸರಿಯಲ್ಲ ಎಂದರು.
ಪಾಪ ಅವರು ಮರತಿರಬಹುದು
ಪಾಪ ಅವರು (ಹಂಜ್) ಅನಿವಾಸಿ ಭಾರತೀಯರಾಗಿದ್ದಾರೆ. ಬಹಳ ವರ್ಷಗಳಿಂದ ಅಮೆರಿಕದಲ್ಲಿರುವುದರಿಂದ ಈ ದೇಶದ ಕಾನೂನು ಮರೆತಿರಬೇಕು, ಈ ದೇಶದಲ್ಲಿ ಕಾನೂನುಗಳು ಇವೆ ಎಂದು ಅವರಿಗೆ ನೆನೆಪು ಮಾಡಿಕೊಡುತ್ತೇವೆ.
- ಡಾ। ಜಿ. ಪರಮೇಶ್ವರ, ಡಿಸಿಎಂ
ವಿಕೃತ ಮನಸ್ಸುಗಳ ವಿರುದ್ಧ ಕ್ರಮ ಜರುಗಿಸಿ
ಬಸವಣ್ಣವರ ವ್ಯಕ್ತಿತ್ವಕ್ಕೆ ಚ್ಯುತಿ ತರುವಂತಹ ವಿಚಾರಗಳು ಬಂದರೆ ಎಲ್ಲರಿಗೂ ನೋವಾಗುತ್ತದೆ. ವಿಕಾರ, ವಿಕೃತಿ ವ್ಯಕ್ತಿತ್ವ ಉಳ್ಳ ಮನಸ್ಸುಗಳು, ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿವೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು.
- ಸಿದ್ಧಲಿಂಗ ಸ್ವಾಮೀಜಿ. ಸಿದ್ಧಗಂಗಾ ಮಠ

