‘ಭಾರೀ ಪ್ರಮಾಣದ ನಿರುದ್ಯೋಗ, ಉತ್ಪಾದನಾ ಕ್ಷೇತ್ರದ ಕುಸಿತ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಗಂಭೀರ ಸಮಸ್ಯೆಗಳಿಂದಾಗಿ ಭಾರತವು ಆರ್ಥಿಕ ಬಿಕ್ಕಟ್ಟಿನತ್ತ ಹೊರಳುತ್ತಿದೆ. ದೇಶ ಇದೇ ಆರ್ಥಿಕ ಪಥದಲ್ಲಿ ಸಾಗಿದರೆ ಭವಿಷ್ಯದಲ್ಲಿ ಗಂಭೀರ ಸಮಸ್ಯೆಗೆ ಸಿಲುಕಲಿದೆ’
ನ್ಯೂಯಾರ್ಕ್ : ‘ಭಾರೀ ಪ್ರಮಾಣದ ನಿರುದ್ಯೋಗ, ಉತ್ಪಾದನಾ ಕ್ಷೇತ್ರದ ಕುಸಿತ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಗಂಭೀರ ಸಮಸ್ಯೆಗಳಿಂದಾಗಿ ಭಾರತವು ಆರ್ಥಿಕ ಬಿಕ್ಕಟ್ಟಿನತ್ತ ಹೊರಳುತ್ತಿದೆ. ದೇಶ ಇದೇ ಆರ್ಥಿಕ ಪಥದಲ್ಲಿ ಸಾಗಿದರೆ ಭವಿಷ್ಯದಲ್ಲಿ ಗಂಭೀರ ಸಮಸ್ಯೆಗೆ ಸಿಲುಕಲಿದೆ’ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.
ಮಂಗಳವಾರ ಕೊಲಂಬಿಯಾ ವಿವಿಯಲ್ಲಿ ಆಯೋಜಿಸಿದ್ದ ‘ಫೈರ್ಸೈಡ್ ಚಾಟ್’ ಸಂವಾದ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು, ಉಪನ್ಯಾಸಕರನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಕೇಂದ್ರದ ನೀತಿಗಳ ಕುರಿತು ಗಂಭೀರ ಆಕ್ಷೇಪಗಳನ್ನು ಎತ್ತಿರುವ ಅವರು, ‘ಭಾರತದ ಆರ್ಥಿಕ ಮಾದರಿಯು ಸುಮಾರು ಒಂದು ದಶಕದ ಹಿಂದೆಯೇ ಫಲಿತಾಂಶ ನೀಡುವುದನ್ನು ನಿಲ್ಲಿಸಿಬಿಟ್ಟಿದೆ. ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟ್-ಅಪ್ ಇಂಡಿಯಾದಂತಹ ಸರ್ಕಾರದ ಉಪಕ್ರಮಗಳು, ದೇಶದ ಮುರಿದುಬಿದ್ದ ಆರ್ಥಿಕ ಬೆನ್ನೆಲುಬನ್ನು ಪುನಶ್ಚೇತನಗೊಳಿಸುವಲ್ಲಿ ವಿಫಲವಾಗಿವೆ. ಭಾರತವು ಆರ್ಥಿಕ ದುರಂತದ ಅಂಚಿನಲ್ಲಿದೆ. ದೇಶ ನಿರುದ್ಯೋಗದ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದು, ಶಿಕ್ಷಣ ವ್ಯವಸ್ಥೆಯಲ್ಲೂ ಬೃಹತ್ ಸಮಸ್ಯೆಗಳಿವೆ’ ಎಂದರು.
ಆರ್ಥಿಕತೆ ಬೆನ್ನೆಲುಬು ಮುರಿದಿದೆ:
‘ಭಾರತದ ಆರ್ಥಿಕತೆಯ ಬೆನ್ನೆಲುಬು ಸಣ್ಣ ಮತ್ತು ಮಧ್ಯಮ ವ್ಯವಹಾರ ಹಾಗೂ ಕೃಷಿ. ಆದರೆ ನಮ್ಮ ಆರ್ಥಿಕತೆಯ ಬೆನ್ನೆಲುಬು ಮುರಿದುಹೋಗಿದೆ. ಸೇವೆಗಳ ಮೂಲಕ ಸಾಕಷ್ಟು ಜನರಿಗೆ ಉದ್ಯೋಗ ಒದಗಿಸಲು ಸಾಧ್ಯವಿಲ್ಲ. ಅದು ಅಸಾಧ್ಯ. ನೀವು ಶೇ.1, 2, 3 ಅಥವಾ 5ರಷ್ಟು ಜನರಿಗೆ ಉದ್ಯೋಗ ನೀಡಬಹುದು ಅಷ್ಟೇ. ಸೇವೆಗಳನ್ನು ಅವಲಂಬಿಸಿ ಎಲ್ಲರಿಗೂ ಭವಿಷ್ಯವನ್ನು ಕಲ್ಪಿಸಿಕೊಡಲು ಸಾಧ್ಯವಿಲ್ಲ. ಆದರೆ, ನಮಗೆ ಉತ್ಪಾದನಾ ವಲಯದ ಅಗತ್ಯವೇ ಇಲ್ಲ ಎಂದು ನಾವು ನಿರ್ಧರಿಸಿಬಿಟ್ಟಿದ್ದೇವೆ’ ಎಂದು ಟೀಕಿಸಿದರು.
ಅದಾನಿ, ಅಂಬಾನಿ ಬಗ್ಗೆ ಕಿಡಿ:
‘ಭಾರತದಲ್ಲಿ ಖಾಸಗಿ ಹೂಡಿಕೆ ಏಕೆ ಇಲ್ಲ? ಭಾರತದಲ್ಲಿ ಬೆಳೆಯುತ್ತಿರುವ ಉದ್ಯಮಗಳು ಅದಾನಿ ಮತ್ತು ಅಂಬಾನಿ ಅವರದ್ದೇ ಏಕೆ? ಟಾಟಾ ಸಂಸ್ಥೆಯನ್ನು ಅದಾನಿ ವಶಪಡಿಸಿಕೊಳ್ಳುತ್ತಿದ್ದಾರೆಯೇ?’ ಎಂದು ಪ್ರಶ್ನಿಸಿದ ಅವರು, ‘ಗೌತಮ್ ಅದಾನಿ, ಮುಖೇಶ್ ಅಂಬಾನಿಯಂಥ ಕೆಲವೇ ಕೆಲ ಬೃಹತ್ ಉದ್ಯಮ ಸಂಸ್ಥೆಗಳು ದೇಶದಲ್ಲಿ ವಿಸ್ತರಣೆಗೊಳ್ಳುತ್ತಿವೆ. ಆದರೆ, ಸಣ್ಣ ಉದ್ಯಮಗಳು ಸಮಸ್ಯೆ ಎದುರಿಸುತ್ತಿವೆ. ಕಾಂಗ್ರೆಸ್ ಕಾಲದಲ್ಲಿ ನಿರ್ಮಿಸಿದ ಆರ್ಥಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದ್ದು, ಇದನ್ನು ಪುನರ್ ನಿರ್ಮಿಸುವ ಅಗತ್ಯವಿದೆ’ ಎಂದರು.
ವಿದ್ಯಾರ್ಥಿಗಳ ಪ್ರತಿಭಟನೆ ಪ್ರಸ್ತಾಪ:
ಇತ್ತೀಚೆಗೆ ನಡೆದ ವಿದ್ಯಾರ್ಥಿ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ರಾಹುಲ್, ‘ಈ ಪ್ರತಿಭಟನೆ ಏಕಾಏಕಿ ಹುಟ್ಟಿದ್ದಲ್ಲ, ಬದಲಾಗಿ ಇದು ದಶಕದಿಂದ ರಾಜಕೀಯ ಮತ್ತು ಆರ್ಥಿಕ ಶಕ್ತಿಯ ಕೇಂದ್ರೀಕರಣದ ವಿರುದ್ಧ ಮಡಗುಟ್ಟಿದ್ದ ಪ್ರತಿರೋಧವಾಗಿದೆ. ಅಧಿಕಾರದ ಕೇಂದ್ರೀಕರಣ ಆಗುತ್ತಿದ್ದಂತೆ ವಿವಿಧ ಗುಂಪುಗಳು ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಇದು ದಶಕಗಳಿಂದ ನಡೆಯುತ್ತಲಿದೆ’ ಎಂದರು.
ಅಲ್ಪಸಂಖ್ಯಾತ, ದಲಿತರ ಮೇಲೆ ದಾಳಿ:
‘ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಸಂಪತ್ತಿನ ಕೇಂದ್ರೀಕರಣ ಮತ್ತು ದೊಡ್ಡ ಪ್ರಮಾಣದಲ್ಲಿ ಜನರ ಹಕ್ಕು ನಿರಾಕರಿಸುವ ಪ್ರಯತ್ನ ನಡೆಯುತ್ತಿದೆ. ಯಾವುದೇ ಮಾಹಿತಿ ನೀಡದೆ ಗುಡ್ಡಗಾಡು ನಿವಾಸಿಗಳ ಭೂಮಿ ಕಸಿಯಲಾಗುತ್ತಿದೆ, ಅಲ್ಪಸಂಖ್ಯಾತರು, ದಲಿತರು, ರೈತರ ಮೇಲೆ ದಾಳಿ ನಡೆಯುತ್ತಿದೆ. ಚುನಾವಣಾ ಪ್ರಕ್ರಿಯೆಗಳ ಮೇಲೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ’ ಎಂದು ಆರೋಪಿಸಿದರು.
ಚುನಾವಣಾ ಅಕ್ರಮ ಆರೋಪ:
‘ಚುನಾವಣಾ ಅಕ್ರಮಗಳು ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಹಾಳುಗೆಡವಿವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾ ಮಾಡುವುದು ಇದನ್ನು ಸರಿ ಮಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಮೇಲ್ನೋಟಕ್ಕೆ ದೇಶದಲ್ಲಿ ರಾಜಕೀಯ ನಡೆಯುತ್ತಿರುವಂತೆ ಕಾಣುತ್ತಿದೆ, ಆದರೆ ಅಂಥದ್ದು ಯಾವುದೂ ಆಗುತ್ತಿಲ್ಲ. ಚುನಾವಣೆಯಲ್ಲಿ ಅಕ್ರಮ ಆರಂಭವಾಗುತ್ತಿದ್ದಂತೆ ರಾಜಕೀಯ ನಿಂತು ಹೋಗಿದೆ. ದೇಶದಲ್ಲಿ ಚುನಾವಣಾ ವ್ಯವಸ್ಥೆ ಮರುಸ್ಥಾಪಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.
ರಾಹುಲ್ ಆರೋಪ ಏನು?
ಅಮೆರಿಕದ ಕೊಲಂಬಿಯಾ ವಿವಿಯಲ್ಲಿ ವಿದ್ಯಾರ್ಥಿಗಳ ಜೊತೆ ರಾಹುಲ್ ಸಂವಾದ
ಭಾರತದ ನಿರುದ್ಯೋಗ, ಆರ್ಥಿಕತೆ, ಶಿಕ್ಷಣ ನೀತಿ, ಉತ್ಪಾದನೆ ಕುಸಿತ ಬಗ್ಗೆ ಟೀಕೆ
ಮೋದಿ ಸರ್ಕಾರದ ವಿವಿಧ ನೀತಿ ಬಗ್ಗೆ ನೇರವಾಗಿ ವಿದ್ಯಾರ್ಥಿಗಳ ಮುಂದೆ ಆಕ್ಷೇಪ
ರೈತರು, ದಲಿತರು, ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ಎಂದು ಆರೋಪ
ಉದ್ಯಮಿಗಳಾದ ಅಂಬಾನಿ, ಅದಾನಿ ಅವರ ಬಗ್ಗೆಯೂ ಕಾಂಗ್ರೆಸ್ ನಾಯಕ ಕಿಡಿ
